ಬೆಂಗಳೂರು:
ರೈತರ ಬೇಡಿಕೆಗಳನ್ನು ನಿರಂತರವಾಗಿ ಹಂತ ಹಂತವಾಗಿ ಈಡೇರಿಸುತ್ತಲೇ ಇದ್ದೇವೆ. ಅತಿ ಹೆಚ್ಚು ಉದ್ಯೋಗ ಅವಲಂಬನೆ ಇರುವುದು ಕೃಷಿಯಲ್ಲೇ. ಆದ್ದರಿಂದ ರೈತರ ಬೇಡಿಕೆಗಳಿಗೆ ನಮ್ಮದು ಪ್ರಥಮ ಆದ್ಯತೆ. ನಾನು ಸದಾ ರೈತ ಕುಲದ ಪರವಾಗಿ ಇರ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತ ಸಂಘದ ಮುಖಂಡರುಗಳೊಂದಿಗೆ 2025-26ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯ ಪ್ರಾರಂಭಕ್ಕೂ ಮುನ್ನ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ರೈತ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಸುಗ್ರೀವಾಜ್ಞೆ ಮೂಲಕ ಮೈಕ್ರೋ ಫೈನಾನ್ಸ್ ಗಳ ಬಲವಂತದ ವಸೂಲಿಗೆ ಕಡಿವಾಣ ಹಾಕಿದ್ದಕ್ಕಾಗಿ ರೈತ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರ್ಕಾರವನ್ನು ಒಕ್ಕೊರಲಿನಿಂದ ಅಭಿನಂಧಿಸಿದರು.
ನೀರಾವರಿ ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಪಕ್ಷಾತೀತವಾಗಿ ಹೋರಾಡಲು ಸಿದ್ಧ ಎಂಬ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹೇಳಿಕೆಯನ್ನು ನಾನು ಸಂಪೂರ್ಣ ಸ್ವಾಗತಿಸುತ್ತೇನೆ. ವೈಯಕ್ತಿಕವಾಗಿ ಇದು ನನ್ನ ಅಭಿಪ್ರಾಯವಾಗಿದ್ದು, ನೆಲ-ಜಲ-ಭಾಷೆ ವಿಚಾರದಲ್ಲಿ ನಾನು ಸದಾ ಕನ್ನಡಿಗನಾಗಿ ನಡೆದುಕೊಂಡಿದ್ದೇನೆಯೇ ಹೊರತು ರಾಜಕಾರಣಿಯಾಗಿ ಅಲ್ಲ ಎನ್ನುವುದನ್ನು ಹಿರಿಯರಾದ ದೇವೇಗೌಡರ ಗಮನಕ್ಕೆ ತರಬಯಸುತ್ತೇನೆ.
ಹತ್ತು ದಿನಗಳ ಅವಧಿಯಲ್ಲಿ 15,000 ಕ್ಯುಸೆಕ್ಸ್ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬೇಕೆಂದು 2016ರ ಸೆಪ್ಟೆಂಬರ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿದಾಗ ಉದ್ಭವವಾದ ಬಿಕ್ಕಟ್ಟಿನ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ನಾನು ನಿಮ್ಮ ಮನೆಗೆ ಬಂದು ಕೈಹಿಡಿದು ಕರೆದುಕೊಂಡು ಬಂದು ಸರ್ವಪಕ್ಷಗಳ ಸಭೆ ನಡೆಸಿದ್ದು ನಿಮಗೆ ನೆನಪಿರಬಹುದೆಂದು ಭಾವಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಹಿಂದೆಲ್ಲ ರಾಜ್ಯದ ಹಿತಾಸಕ್ತಿಯ ರಕ್ಷಣೆಯ ಪ್ರಶ್ನೆ ಎದುರಾದಾಗ ಒಬ್ಬ ಮುತ್ಸದ್ದಿಯಾಗಿ ಇದಕ್ಕಿಂತಲೂ ಮುಖ್ಯವಾಗಿ ಒಬ್ಬ ಹೆಮ್ಮೆಯ ಕನ್ನಡಿಗನಾಗಿ ರಾಜ್ಯಕ್ಕೆ ನ್ಯಾಯ ಕೊಡಲು ನೀವು ಹೋರಾಟ ನಡೆಸಿದ್ದನ್ನು ರಾಜ್ಯದ ಜನರು ಗಮನಿಸಿದ್ದಾರೆ. ಆದರೆ ಇತ್ತೀಚೆಗೆ ನೀವು ಮತ್ತು ನಿಮ್ಮ ಪಕ್ಷ ಕೇಂದ್ರ ಸರ್ಕಾರದ ವಕ್ತಾರರಂತೆ ಪಕ್ಷಪಾತಿಯಾಗಿ ವರ್ತಿಸುತ್ತಿರುವುದನ್ನು ಕೂಡಾ ನನ್ನನ್ನೂ ಸೇರಿದಂತೆ ಏಳುಕೋಟಿ ಕನ್ನಡಿಗರು ಗಮನಿಸುತ್ತಿದ್ದಾರೆ. ಕೇಂದ್ರ ಸಂಪುಟದಲ್ಲಿ ಮಗನನ್ನು ಸಚಿವನನ್ನಾಗಿ ಮಾಡಲು ಗೌಡರು ಇಷ್ಟೊಂದು ರಾಜಿ ಮಾಡಿಕೊಳ್ಳುವ ಅಗತ್ಯ ಇತ್ತಾ? ಎಂದು ಜನ ಪ್ರಶ್ನಿಸುತ್ತಿದ್ದಾರೆ.
ನೀರಾವರಿ ವಿಚಾರದಲ್ಲಿ ನ್ಯಾಯಪಕ್ಷಪಾತಿಯಾಗಿ ಕರ್ನಾಟಕದ ಹಿತಾಸಕ್ತಿಯ ರಕ್ಷಣೆ ಮಾಡಬೇಕಾಗಿದ್ದ ಕೇಂದ್ರದ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಸತತವಾಗಿ ಕನ್ನಡಿಗರ ಹಿತವನ್ನು ಬಲಿಗೊಡಲು ಹೊರಟಿರುವುದನ್ನು ಸನ್ಮಾನ್ಯ ದೇವೇಗೌಡರಿಗೆ ನಾನು ಬಿಡಿಸಿ ಹೇಳಬೇಕಾಗಿಲ್ಲ ಎಂದು ತಿಳಿದುಕೊಂಡಿದ್ದೇನೆ.
ಮಹದಾಯಿ ಜಲಾನಯನ ಪ್ರದೇಶದ ಕಳಸಾ ನಾಲೆ ಯೋಜನೆಯ ರೂ.995.30 ಕೋಟಿ ವೆಚ್ಚದ ವಿಸ್ತೃತ ಯೋಜನಾ ವರದಿ (ಡಿಪಿಆರ್ )ಗೆ 2023ರ ಮಾರ್ಚ್ ನಲ್ಲಿಯೇ ಅನುಮೋದನೆ ನೀಡಲಾಗಿದೆ. ಈ ಯೋಜನೆಗೆ ಅಗತ್ಯವಿರುವ ಭೂಮಿಯಲ್ಲಿ 26,925 ಹೆಕ್ಟೇರ್ ಅರಣ್ಯಪ್ರದೇಶದ ಸ್ವಾಧೀನ ಪ್ರಕ್ರಿಯೆ ಗೋವಾ ರಾಜ್ಯದ ಆಕ್ಷೇಪದ ಕಾರಣದಿಂದಾಗಿ ಕುಂಟುತ್ತಾ ಸಾಗಿದೆ. ಪ್ರಸ್ತುತ ಈ ಪ್ರಕ್ರಿಯೆ ರಾಷ್ಟ್ರೀಯ ವನ್ಯಜೀವಿ ಮಂಡಳಿ (ಎನ್ ಬಿಡಬ್ಯುಎಲ್ ) ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ ಟಿಸಿಎ)ದ ಪರಿಶೀಲನೆಯಲ್ಲಿದೆ. ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರ ಅನುಮೋದನೆ ಪಡೆಯಬಹುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟೀಕರಣ ನೀಡಿರುವ ಕಾರಣ ಶೀಘ್ರವಾಗಿ ಈ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕಾಗಿದೆ ಎಂದರು.
