ಬೆಂಗಳೂರು
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧದ ಹೇಳಿಕೆ ವಿಚಾರದಲ್ಲಿ ಬಂಧನಕ್ಕೆ ಒಳಗಾಗಿರುವ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿಯನ್ನ ತಕ್ಷಣವೇ ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ. ಸಿಟಿ ರವಿ ವಿರುದ್ಧ ಎಫ್ಐಆರ್ ರದ್ದುಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ತಕ್ಷಣ ಬಿಡುಗಡೆಗೆ ಮಧ್ಯಂತರ ಆದೇಶ ಹೊರಡಿಸಿದೆ. ಆದರೆ, ತನಿಖೆಗೆ ಸಹಕರಿಸಬೇಕೆಂದು ಷರತ್ತು ವಿಧಿಸಿ.
ಆರೋಪಿ, ಫಿರ್ಯಾದಿ ಇಬ್ಬರೂ ಶಾಸಕರು. ವಿಧಾನ ಪರಿಷತ್ ನಲ್ಲಿ ಈ ರೀತಿಯಾಗಿರುವುದು ದುರದೃಷ್ಟಕರ ಎಂದು ಕೋರ್ಟ್ ಅಸಮಾಧಾನಗೊಂಡಿದೆ. ಆರೋಪಗಳಿಗೆ 7 ವರ್ಷಕ್ಕಿಂತ ಕಡಿಮೆ ಶಿಕ್ಷೆಯಿದೆ. 41 ಎ ಅಡಿ ನೋಟಿಸ್ ನೀಡಬೇಕಿತ್ತು. ಪೊಲೀಸರು ಬಂಧನಕ್ಕೆ ಕಾರಣಗಳನ್ನು ನೀಡಬೇಕಿತ್ತು. ಆದರೆ ಇದನ್ನು ನೀಡಿರುವ ಬಗ್ಗೆ ದಾಖಲೆಗಳನ್ನು ಒದಗಿಸಿಲ್ಲ. ಪೊಲೀಸರು ಹಲ್ಲೆ ನಡೆಸಿದ್ದರಿಂದ ಗಾಯಗಳಾಗಿವೆ ಎಂದು ಸಿಟಿ ರವಿ ವಕೀಲರು ವಾದಿಸಿದ್ದಾರೆ.
ಚಿಕಿತ್ಸೆಯ ವಿವರವನ್ನು ವೈದ್ಯಾಧಿಕಾರಿ ಸರಿಯಾಗಿ ನಮೂದಿಸಿಲ್ಲ. ಆದರೆ ಸ್ಕ್ಯಾನಿಂಗ್ ಮಾಡಿಸಿರುವುದಾಗಿ ವರದಿಯಿದೆ. ಏನನ್ನೂ ರೆಕಾರ್ಡ್ ಮಾಡಿಲ್ಲವೆಂದು ಸಭಾಪತಿ ಹೇಳಿಕೆ ನೀಡಿದ್ದಾರೆ ಆರೋಪಿ ಸಿಟಿ ರವಿಯನ್ನು ಬಂಧಿಸಲು ಹಲ್ಲೆ ನಡೆಸುವ ಅಗತ್ಯವಿರಲಿಲ್ಲ. ಕಾನೂನು ಕ್ರಮ ಪಾಲಿಸಿ ಕ್ರಮ ಕೈಗೊಳ್ಳಬಹುದಿತ್ತು. ವಿಧಾನಪರಿಷತ್ ಪ್ರತಿಪಕ್ಷದ ಶಾಸಕರಾಗಿದ್ದಾರೆ. ಹೀಗಾಗಿ ಪರಾರಿಯಾಗುವ ಸಾಧ್ಯತೆ ಇಲ್ಲ. ಇದರಿಂದ ತಕ್ಷಣ ಬಿಡುಗಡೆಗೆ ಕೋರ್ಟ್ ಆದೇಶಿಸಿದೆ.