ಲಖನೌ
ಉತ್ತರ ಪ್ರದೇಶದ ಆಗ್ರಾದಲ್ಲಿರುವ ತಾಜ್‍ಮಹಲ್ ಪಾರ್ಕಿಂಗ್ ಸ್ಥಳದ ಬಳಿ ಯುವಕರ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಕಿರುಕುಳ ನೀಡಿದ್ದು, ಜೈ ಶ್ರೀರಾಮ್ ಎಂದು ಹೇಳುವಂತೆ ಒತ್ತಾಯಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಜೈ ಶ್ರೀರಾಮ್ ಹೇಳಲು ನಿರಾಕರಿಸಿದ್ದಕ್ಕೆ ಮುಸ್ಲಿಂ ವೃದ್ಧ ವ್ಯಕ್ತಿಗೆ ಬೆದರಿಕೆ ಹಾಕಲಾಗಿದೆ. ಈ ಘಟನೆಯ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗಿದೆ.
ತಾಜ್‍ಮಹಲ್ ಪಾರ್ಕಿಂಗ್ ಪ್ರದೇಶದ ಬಳಿ ರೆಕಾರ್ಡ್ ಮಾಡಲಾದ ವಿಡಿಯೊದಲ್ಲಿ, ಯುವಕನೊಬ್ಬ ಮೊಹಮ್ಮದ್ ರೈಸ್ ಅವರನ್ನು ಜೈ ಶ್ರೀ ರಾಮ್ ಎಂದು ಹೇಳಲು ಕೇಳುತ್ತಿರುವುದನ್ನು ತೋರಿಸಲಾಗಿದೆ. ಮೊಹಮ್ಮದ್ ರೈಸ್ ಜೈ ಶ್ರೀ ರಾಮ್ ಹೇಳಲು ನಿರಾಕರಿಸಿದರು. ನಂತರ ಆ ವ್ಯಕ್ತಿ ರೈಸ್ ಅವರನ್ನು ಬೆದರಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊವನ್ನು ಪೋಸ್ಟ್ ಮಾಡಿದ್ದಾನೆ. ಮೊಹಮ್ಮದ್ ರೈಸ್ ಅವರನ್ನು ಕೆಲವು ದಿನಗಳಲ್ಲಿ ಜೈ ಶ್ರೀ ರಾಮ್ ಘೋಷಣೆ ಹೇಳುವಂತೆ ಮಾಡಲಾಗುವುದು ಎಂಬ ಶೀರ್ಷಿಕೆ ಬರೆದಿದ್ದಾನೆ.
ಈ ವಿಡಿಯೊವನ್ನು ಬಳಕೆದಾರನೊಬ್ಬ ರೈಸ್ ಅವರನ್ನು ಭಯೋತ್ಪಾದಕ ಎಂದು ಕರೆದು ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಈ ವಿಡಿಯೊ ಪೊಲೀಸರ ಗಮನಕ್ಕೆ ಬಂದಿದ್ದು, ತಾಜ್‌ಗಂಜ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ, ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ. ಇದರಲ್ಲಿ ಒಬ್ಬನ ಗುರುತು ಪತ್ತೆಯಾಗಿದ್ದು, ಇನ್ನೊಬ್ಬನ ಗುರುತು ತಿಳಿದಿಲ್ಲ.
ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿರುವ ವೃದ್ಧ ಮೊಹಮ್ಮದ್ ರೈಸ್, ತಾಜ್‍ಮಹಲ್‌ಗೆ ಪ್ರವಾಸಿಗರನ್ನು ಕರೆದೊಯ್ಯುವ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರದಲ್ಲಿ ಧ್ವಜಾರೋಹಣ ಮಾಡಲು ಅಯೋಧ್ಯೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಶಿವಸೇನೆಯ ಮಾಜಿ ಶಾಸಕಿಯೊಬ್ಬರು ರಸ್ತೆಬದಿಯಲ್ಲಿ ತಮ್ಮ ಮೊಮ್ಮಗನೊಂದಿಗೆ ವಾಕಿಂಗ್ ಮಾಡುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಮಹಾರಾಷ್ಟ್ರದ ನಾಸಿಕ್‍ನಲ್ಲಿ ಈ ಘಟನೆ ನಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಶಿವಸೇನೆಯ ಮಾಜಿ ಶಾಸಕಿ ನಿರ್ಮಲಾ ಗವಿತ್ ತೀವ್ರವಾಗಿ ಗಾಯಗೊಂಡಿದ್ದಾರೆ. ಪ್ರಜ್ಞೆ ತಪ್ಪಿ ಬಿದ್ದಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಕ್ಕಪಕ್ಕದ ಮನೆಯ ಸಿಸಿಟಿವಿಯಲ್ಲಿ ಅಪಘಾತದ ದೃಶ್ಯಗಳು ಸೆರೆಯಾಗಿವೆ. ಈ ಸಂಬಂಧ ನಾಸಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಚಾಲಕನ ಅಜಾಗರೂಕತೆ ಬಗ್ಗೆ ಜನರು ಆಕ್ರೋಶ ಹೊರಹಾಕಿದ್ದಾರೆ.
ನಿರ್ಮಲಾ ಗವಿತ್ ತಮ್ಮ ಮೊಮ್ಮಗನೊಂದಿಗೆ ನಡೆದುಕೊಂಡು ಹೋಗುತ್ತಿದ್ದರು. ಅವರು ರಸ್ತೆ ಮಧ್ಯ ನಡೆದುಕೊಂಡು ಹೋಗುತ್ತಿರಲಿಲ್ಲ. ಹೀಗಾಗಿ ಬೇಕಂತಲೇ ಅಪಘಾತ ಮಾಡಿರುವ ಶಂಕೆ ವ್ಯಕ್ತವಾಗಿದೆ. ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಕಾರು ಗವಿತ್ ಮೇಲೆ ಹರಿದಿದೆ. ಆ ಕಾರು ಸ್ವಲ್ಪ ದೂರಕ್ಕೆ ಅವರನ್ನು ಹೊತ್ತೊಯ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.








