ಆರ್‌ಸಿಬಿ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಲು ಸಚಿವ ಸಂಪುಟ ನಿರ್ಧಾರ

ಬೆಂಗಳೂರು: 

    ಆರ್‌ಸಿಬಿ ಸಂಭ್ರಮಾಚರಣೆ ವೇಳೆ ನಡೆದಿದ್ದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ವಿರುದ್ಧ ಇಲಾಖಾ ತನಿಖೆಗೆ ಕರ್ನಾಟಕ ಸಚಿವ ಸಂಪುಟ ನಿರ್ಧರಿಸಿದೆ. ಅಷ್ಟೇ ಅಲ್ಲದೆ ಆರ್​ಸಿಬಿ, ಇವೆಂಟ್ ಮ್ಯಾನೇಜ್​ಮೆಂಟ್ ಕಂಪನಿ ಡಿಎನ್​ಎ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಕೂಡ ಸಚಿವ ಸಂಪುಟ ತೀರ್ಮಾನಿಸಿದೆ.

   ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಾಲ್ತುಳಿತ ಘಟನೆ ಸಂಬಂಧ ನ್ಯಾಯಮೂರ್ತಿ ಡಿ. ಮೈಕಲ್ ಕುನ್ಹಾ ಏಕ ಸದಸ್ಯ ಆಯೋಗ ಸಲ್ಲಿಸಿದ್ದ ವರದಿ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಲಾಯಿತು. ನಂತರ ಆರ್​ಸಿಬಿ, ಡಿಎನ್​ಎ ಹಾಗೂ ಕೆಎಸ್​​​ಸಿಎ ವಿರುದ್ಧ ಕ್ರಮಕ್ಕೆ ತೀರ್ಮಾನಿಸಲಾಯಿತು. ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕೂಡ ಕುನ್ಹಾ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು.

   ಕ್ರಿಮಿನಲ್ ಕೇಸ್​​ ದಾಖಲಿಸಲು ತೀರ್ಮಾನ ಕೈಗೊಂಡಿರುವುದರಿಂದ ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್, ಮಾಜಿ ಕಾರ್ಯದರ್ಶಿ ಎ.ಶಂಕರ್, ಮಾಜಿ ಖಜಾಂಚಿ ಜಯರಾಂ, ಆರ್​​ಸಿಬಿ ತಂಡದ ರಾಜೇಶ್ ಮೆನನ್, ಡಿಎನ್​ಎ ನೆಟ್​ವರ್ಕ್​ ಲಿಮಿಟೆಡ್​​ ಎಂಡಿ ವೆಂಕಟ್ ವರ್ಧನ್ , ಡಿಎನ್​ಎ ನೆಟ್​ವರ್ಕ್​ ಲಿಮಿಟೆಡ್ ಉಪಾಧ್ಯಕ್ಷ ಸುನೀಲ್ ಮಾಥೂರ್ ಇವರಿಗೆ ಸಂಕಷ್ಟ ಎದುರಾಗಲಿದೆ.

   ಬೆಂಗಳೂರು ನಗರ ಮಾಜಿ ಪೊಲೀಸ್ ಕಮಿಷನರ್​ ಬಿ.ದಯಾನಂದ್​, ಐಪಿಎಸ್​ ಅಧಿಕಾರಿಗಳಾದ ವಿಕಾಸ್​ ಕುಮಾರ್​ ವಿಕಾಸ್​, ಶೇಖರ್​, ಕಬ್ಬನ್ ಪಾರ್ಕ್ ಸಬ್​ ಡಿವಿಷನ್​ ಎಸಿಪಿ ಬಾಲಕೃಷ್ಣ, ಕಬ್ಬನ್ ಪಾರ್ಕ್‌ ಠಾಣೆಯ ಪಿಐ​ ಗಿರೀಶ್ ವಿರುದ್ಧವೂ ಪ್ರಕರಣ ದಾಖಲಾಗಲಿದೆ.

   ಜೂನ್ 4 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದರು. ಸುಮಾರು 40 ಮಂದಿ ಗಾಯಗೊಂಡಿದ್ದರು.

Recent Articles

spot_img

Related Stories

Share via
Copy link