ಬೆಂಗಳೂರು:
ಮಾರ್ಚ್ 16 ರಿಂದ ನೀತಿ ಸಂಹಿತೆ ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಸಂಪುಟ ಸಭೆ ನಡೆಸಿರಲಿಲ್ಲ. ಇದೀಗ 3 ತಿಂಗಳ ಬಳಿಕ ಸಂಪುಟ ಸಭೆ ನಡೆಸಲಾಗುತ್ತಿದೆ.
ಬಜೆಟ್ ಘೋಷಣೆಗಳನ್ನು ಕಾರ್ಯಗತಗೊಳಿಸುವುದು, ಜೂನ್ ತಿಂಗಳಾಗಿರುವುದರಿಂದ ವರ್ಗಾವಣೆ ನೀತಿಯ ನಿರ್ಧಾರ, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳು ಹತ್ತಿರದಲ್ಲಿರುವುದರಿಂದ ಸಮೀಕ್ಷಾ ಫಲಿತಾಂಶಗಳನ್ನು ಗಮನದಲ್ಲಿಟ್ಟುಕೊಂಡು ಚರ್ಚೆ ಹಾಗೂ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಗಳಿವೆ.
ಜುಲೈನಲ್ಲಿ ನಡೆಯಲಿರುವ ಮುಂದಿನ ವಿಧಾನ ಸಭೆ ಮತ್ತು ವಿಧಾನ ಪರಿಶತ್ ಅಧಿವೇಶನದ ಕುರಿತಂತೆಯು ಸಂಪುಟ ನಿರ್ಧರಿಸುವ ಸಾಧ್ಯತೆಯಿದೆ. ಮೂರು ತಿಂಗಳ ನಂತರ ಸಂಪುಟ ಸಭೆ ನಡೆಸುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಚುನಾವಣಾ ನೀತಿ ಸಂಹಿತೆ ಮೂರು ತಿಂಗಳಿನಿಂದ ಜಾರಿಯಲ್ಲಿತ್ತು. ಇದೀಗ ತೆರವುಗೊಂಡಿದ್ದು ಹಲವು ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕಿದೆ. ನೀತಿ ಸಂಹಿತೆ ಜಾರಿಯಲ್ಲಿದ್ದ ಸಮಯದಲ್ಲಿ ಗಂಭೀರ ನೀತಿ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಘೋಷಣೆಗಳನ್ನು ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಗುರುವಾರ ಸಂಪುಟ ಸಭೆ ನಡೆಸುವ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಸಿದ್ದರಾಮಯ್ಯ ಅವರು ರಾಜ್ಯದ ಪ್ರಮುಖ ಆದಾಯ ಗಳಿಸುವ ಇಲಾಖೆಗಳಾದ ವಾಣಿಜ್ಯ ತೆರಿಗೆ, ಕಂದಾಯ ಇಲಾಖೆ, ಅಬಕಾರಿ, ಗಣಿ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಸರಣಿ ಸಭೆ ನಡೆಸಿ, ತಾಕೀತು ಮಾಡಿದರು.
ಆದಾಯ ಗಳಿಸುವ ಪ್ರಮುಖ ಇಲಾಖೆಯಾಗಿರುವ ವಾಣಿಜ್ಯ ತೆರಿಗೆ ಇಲಾಖೆ ಗುರಿ ಸಾಧಿಸಲು ಸರಕಾರ ಕೈಗೊಂಡಿರುವ ಗಂಭೀರತೆ ಕುರಿತು ಮಂಗಳವಾರ ಮಾತನಾಡಿದ ಮುಖ್ಯಮಂತ್ರಿಗಳು, ಅಧಿಕಾರಿಗಳು ಹಾಗೂ ಇಲಾಖಾ ಮುಖ್ಯಸ್ಥರು ನಿಗದಿತ ಗುರಿ ತಲುಪುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು, ಇಲ್ಲದಿದ್ದರೆ ಕ್ರಮ ಎದುರಿಸಲು ಸಿದ್ಧರಾಗಬೇಕು ಎಂದು ಖಡಕ್ ಎಚ್ಚರಿಕೆ ನೀಡಿದ್ದರು..
ಮಾಜಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಮಾತನಾಡಿ, ಸಚಿವ ಸಂಪುಟದಲ್ಲಿ ಚರ್ಚಿಸಬೇಕಾದ ಹಲವು ವಿಚಾರಗಳು ಬಾಕಿ ಇವೆ. ಉದಾಹರಣೆಗೆ ಬರ ಮತ್ತು ಬೆಳೆ ವೈಫಲ್ಯದ ಬಗ್ಗೆ ಕೂಲಂಕಷ ಚರ್ಚೆಯ ಅಗತ್ಯವಿದೆ. ಅಲ್ಲದೆ ಮುಂಗಾರು ಕೈಕೊಟ್ಟಿರುವುದರಿಂದ ಮುಂಗಾರು ಮಳೆಯ ಸಿದ್ಧತೆ ಕುರಿತು ಚರ್ಚೆ ನಡೆಸಬೇಕಿದೆ. ಆದಾಯ ಸಂಗ್ರಹದ ಬಗ್ಗೆಯೂ ಚರ್ಚೆಯಾಗಬೇಕು. ಹಿಂದಿನ 2004, 2009, 2014 ಮತ್ತು 2019 ರ ಸಂಸತ್ತಿನ ಚುನಾವಣೆಯ ಸಂದರ್ಭದಲ್ಲಿಯೂ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಅವಧಿಯಲ್ಲಿ ಸಂಪುಟ ಸಭೆಗಳನ್ನು ನಡೆಸುವುದನ್ನು ಸ್ಥಗಿತಗೊಳಿಸಲಾಗಿತ್ತು, ಏಕೆಂದರೆ, ಈ ಸಂದರ್ಭದಲ್ಲಿ ಸಂಪುಟ ಸಭೆಗಳಲ್ಲಿ ಕೈಗೊಂಡ ನಿರ್ಧಾರಗಳನ್ನು ಘೋಷಣೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.