ರಾಜಕೀಯ ಬಣ್ಣ ಪಡೆಯುತ್ತಿದೆ ಕೆಫೆ ಬಾಂಬ್‌ ಸ್ಪೋಟ ಪ್ರಕರಣ ….!

ಶಿವಮೊಗ್ಗ:

    ಬೆಂಗಳೂರು ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ತೀರ್ಥಹಳ್ಳಿಯ ಬಿಜೆಪಿ ಕಾರ್ಯಕರ್ತನನ್ನು ಎನ್‌ಐಎ ವಿಚಾರಣೆಗೊಳಪಡಿಸಿದ್ದು, ಈ ಬೆಳವಣಿಗೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.

    ಪ್ರಕರಣದಲ್ಲಿ ಬಿಜೆಪಿ ಪಕ್ಷದ ಕೈವಾಡವಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಅನುಮಾನ ವ್ಯಕ್ತಪಡಿಸಿದ್ದರೆ, ಕಾಂಗ್ರೆಸ್ ಸುಳ್ಳು ಸುದ್ದಿ ಹಬ್ಬಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

    ತೀರ್ಥಹಳ್ಳಿಯಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡ ಸಾಯಿ ಪ್ರಸಾದ್ ಅವರನ್ನು ಎನ್‌ಐಎ ವಿಚಾರಣೆಗೊಳಪಡಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

    ಪ್ರಕರಣದ ಆರೋಪಿಗಳಲ್ಲಿ ಒಬ್ಬ ಪ್ರಸಾದ್ ಅಂಗಡಿಯಿಂದ ಫೋನ್ ಖರೀದಿಸಿದ್ದರು ಎಂದು ಹೇಳಲಾಗಿದೆ. ಇದರಂತೆ ಎನ್‌ಐಎ ತನಿಖೆಯ ಭಾಗವಾಗಿ ಪ್ರಕರಣದ ಆರೋಪಿಗಳ ಸ್ನೇಹಿತರು ಮತ್ತು ಪರಿಚಯಸ್ಥರನ್ನು ಕರೆಸಿ ವಿಚಾರಣೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.

    ಎನ್ಐಎ ಬಿಜೆಪಿ ಕಾರ್ಯಕರ್ತನನ್ನು ವಿಚಾರಣೆಗೊಳಪಡಿಸಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ದಿನೇಶ್ ಗುಂಡೂರಾವ್ ಅವರು, ಬಿಜೆಪಿ ವಿರುದ್ಧ ವಾಗ್ದಾಳಇ ನಡೆಸಿದ್ದಾರೆ.

    ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿಯ ಬಿಜೆಪಿ ಮುಖಂಡ ಸಾಯಿಪ್ರಸಾದ್‌ನನ್ನು ರಾಷ್ಟ್ರೀಯ ತನಿಖಾ ದಳದವರು ವಶಕ್ಕೆ ಪಡೆದಿದ್ದಾರೆ. ಸ್ಫೋಟಕ್ಕೆ ನಮ್ಮ ಸರ್ಕಾರವೇ ಕಾರಣ ಅನ್ನೋವಂತೆ ಮಾತಾನಾಡುತ್ತಿದ್ದ ರಾಜ್ಯದ ಕೇಸರಿ ಕಲಿಗಳು ಈಗ ಏನು ಹೇಳುತ್ತಾರೆ? ಬಿಜೆಪಿ ಮುಖಂಡನನ್ನು NIA ವಶಕ್ಕೆ ಪಡೆದಿದೆ ಎಂದ ಮೇಲೆ ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಬಿಜೆಪಿ ಕೈವಾಡ ಇದೆ ಎಂದು ಅರ್ಥಅಲ್ಲವೇ? ಧರ್ಮ ರಕ್ಷಣೆ ಹೆಸರಲ್ಲಿ ರಾಜ್ಯದಲ್ಲಿ ಬಿಜೆಪಿ ನಡೆಸುತ್ತೀರೋ ಕೇಸರಿ ಭಯೋತ್ಪಾದನೆ ಎಷ್ಟು ಗಂಭೀರ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿದೆ ಅನ್ನೋದಕ್ಕೆ ಇದಕ್ಕಿಂತಾ ಸಾಕ್ಷಿ ಬೇಕಾ? ಆರ್‌ಎಸ್‌ಎಸ್‌ ಸಿದ್ಧಾಂತಗಳನ್ನು ದೇಶದ ಮೇಲೆ ಹೇರುತ್ತಿರುವ ಕೇಂದ್ರ ಬಿಜೆಪಿಯು ಇದಕ್ಕೇನು ಹೇಳುತ್ತದೆ? ಎಂದು ಪ್ರಶ್ನಿಸಿದ್ದಾರೆ.

     ರಾಷ್ಟ್ರದ ಭದ್ರತೆ ವಿಚಾರವನ್ನೂ ಲೆಕ್ಕಿಸದೇ ರಾಮೇಶ್ವರಂ ಬಾಂಬ್‌ ಸ್ಫೋಟ ಪ್ರಕರಣವನ್ನು ಕಾಂಗ್ರೆಸ್‌ ಸರ್ಕಾರದ ಮೇಲೆ ಹೊರೆಸಿದ ರಾಜ್ಯ ಬಿಜೆಪಿ ನಾಯಕರು ಈಗ ಉತ್ತರ ನೀಡಲೇಬೇಕು ಎಂದು ಆಗ್ರಹಿಸಿದ್ದಾರೆ.

     ಈ ಬೆಳವಣಿಗೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಕಾಂಗ್ರೆಸ್ ಸುಳ್ಳು ಸುದ್ದಿ ಹರಡಿ ಬ್ರದರ್ಸ್‌ಗಳನ್ನು ರಕ್ಷಣೆ ಮಾಡಲು ಮುಂದಾಗಿದೆ. ಸುಳ್ಳು ಸುದ್ದಿ ಹರಡುತ್ತಿದ್ದ ಐಟಿ‌ ಸೆಲ್ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಅವರನ್ನು ಆ ಸ್ಥಾನದಿಂದ ಕಿತ್ತು ಬಿಸಾಡಿದರೂ, ಕಾಂಗ್ರೆಸ್‌ ಐಟಿ ಸೆಲ್‌ ಸುಳ್ಳು ಸುದ್ದಿ ಹರಡುವ ತನ್ನ ಮೊಣಕಾಲು ಕೆಳಗಿನ ಬುದ್ಧಿ ಬಿಟ್ಟಿಲ್ಲ. ಸಾಕ್ಷಿ ವಿಚಾರಣೆ ಮಾಡುವುದಕ್ಕೂ, ಆರೋಪಿ ವಿಚಾರಣೆ ಮಾಡುವುದಕ್ಕೂ ವ್ಯತ್ಯಾಸ ತಿಳಿಯದ ಅಜ್ಞಾನಿಗಳು ಕಾಂಗ್ರೆಸ್‌ನ ಪಾ’ಕೈಂ’ಡಿ ಗಳು ಎಂದು ವಾಗ್ದಾಳಿ ನಡೆಸಿದೆ.

    ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ವಿರುದ್ಧವೂ ವಾಗ್ದಾಳಿ ನಡೆಸಿ, ದಿನೇಶ್ ಗುಂಡೂರಾವ ನಿಜಕ್ಕೂ ಅನಾರೋಗ್ಯಕ್ಕೆ ಒಳಗಾಗಿ ಮಾನಸಿಕ ಅಸ್ವಸ್ಥರಾಗಿದ್ದಾರೆ. ಕಾಂಗ್ರೆಸ್‌ ಐಟಿ ಸೆಲ್‌ ಹರಡುವ ಸುಳ್ಳು ಸುದ್ದಿಯನ್ನೇ ಸತ್ಯವೆಂದು ಬಿಂಬಿಸಲು ಹೊರಟಿದ್ದಾರೆ. ನೀವು ಆರೋಗ್ಯ ಸಚಿವರೋ ಅಥವಾ ಸುಳ್ಳು ಹೇಳುವ ಸಚಿವರೋ? ಸಾಕ್ಷಿ ವಿಚಾರಣೆ, ಆರೋಪಿ ವಿಚಾರಣೆ ತಿಳಿಯದಷ್ಟು ಮೂರ್ಖರು ಸಚಿವ ಸ್ಥಾನದಲ್ಲಿ ಕೂತಿರುವುದು ದುರಂತ. ಕೂಡಲೇ ರಾಜ್ಯದ ಜನರ ಮುಂದೆ ಕ್ಷಮೆ ಕೇಳಿ ಮಾನ ಉಳಿಸಿಕೊಳ್ಳಿ ಎಂದು ಹೇಳಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap