ಕ್ಯಾಲಿಫೋರ್ನಿಯ:
ದಕ್ಷಿಣ ಕ್ಯಾಲಿಫೋರ್ನಿಯಾ ಪ್ರದೇಶದಲ್ಲಿ ಭೀಕರ ಕಾಡ್ಗಿಚ್ಚು ಸಂಭವಿಸಿದ ಹಿನ್ನೆಲೆಯಲ್ಲಿ ಜನವರಿ 17 ರಂದು ನಡೆಯಬೇಕಿದ್ದ 97 ನೇ ಅಕಾಡೆಮಿ ಪ್ರಶಸ್ತಿಗಳ ನಾಮನಿರ್ದೇಶನ ಘೋಷಣೆಯನ್ನು ಜನವರಿ 19 ಕ್ಕೆ ಮುಂದೂಡಲಾಗಿದೆ.
ಮಾಧ್ಯಮಗಳ ವರದಿಯ ಪ್ರಕಾರ, ಅಕಾಡೆಮಿ ಬುಧವಾರ ಮಧ್ಯಾಹ್ನ ಸಿಇಒ ಬಿಲ್ ಕ್ರಾಮರ್ ಅವರಿಂದ ದಿನಾಂಕ ಬದಲಾವಣೆಗಳ ಕುರಿತು ಸದಸ್ಯರಿಗೆ ಇಮೇಲ್ ಕಳುಹಿಸಿದೆ.
“ದಕ್ಷಿಣ ಕ್ಯಾಲಿಫೋರ್ನಿಯಾದಾದ್ಯಂತ ಸಂಭವಿಸಿದ ವಿನಾಶಕಾರಿ ಬೆಂಕಿಯಿಂದ ಹಾನಿಗೊಳಗಾದವರಿಗೆ ನಾವು ಸಂತಾಪವನ್ನು ಅರ್ಪಿಸಲು ಬಯಸುತ್ತೇವೆ. ನಮ್ಮ ಅನೇಕ ಸದಸ್ಯರು ಮತ್ತು ಉದ್ಯಮದ ಸಹೋದ್ಯೋಗಿಗಳು ಲಾಸ್ ಏಂಜಲೀಸ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಮತ್ತು ಕೆಲಸ ಮಾಡುತ್ತಿದ್ದಾರೆ ಮತ್ತು ನಾವು ನಿಮ್ಮ ಬಗ್ಗೆ ಯೋಚಿಸುತ್ತಿದ್ದೇವೆ” ಎಂದು ಇಮೇಲ್‌ನಲ್ಲಿ ಹೇಳಲಾಗಿದೆ.
ಆಸ್ಕರ್ ನಾಮನಿರ್ದೇಶನ ಮತದಾನದ ಗಡುವನ್ನು ಜನವರಿ 14 ರವರೆಗೆ ಎರಡು ದಿನಗಳವರೆಗೆ ವಿಸ್ತರಿಸಲಾಗಿದೆ. ಸುಮಾರು 10,000 ಅಕಾಡೆಮಿ ಸದಸ್ಯರಿಗೆ ಮತದಾನ ಜನವರಿ 8 ರಂದು ಪ್ರಾರಂಭವಾಯಿತು ಮತ್ತು ಜನವರಿ 12 ರಂದು ಮುಕ್ತಾಯಗೊಳ್ಳಬೇಕಿತ್ತು.
ಕಾನನ್ ಒ’ಬ್ರೇನ್ 2025 ರ ಆಸ್ಕರ್ ಸಮಾರಂಭವನ್ನು ಆಯೋಜಿಸಲಿದ್ದಾರೆ. ಇದು ಮಾರ್ಚ್ 2 ರಂದು ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ.
ಅಮೆರಿಕದ ಮಾಧ್ಯಮಗಳ ಪ್ರಕಾರ, ಬುಧವಾರ ರಾತ್ರಿ ಹಾಲಿವುಡ್ ಹಿಲ್ಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಲಾಸ್ ಏಂಜಲೀಸ್‌ನ ಅತ್ಯಂತ ಪ್ರಸಿದ್ಧ ಸ್ಥಳಗಳಲ್ಲಿ ಒಂದನ್ನು ವ್ಯಾಪಿಸಿದೆ. 5 ಜನರು ಸಾವನ್ನಪ್ಪಿದ್ದಾರೆ. 100,000 ಜನರನ್ನು ಸ್ಥಳಾಂತರಿಸಲಾಗಿದೆ. ಪೆಸಿಫಿಕ್ ಕರಾವಳಿಯಿಂದ ಒಳನಾಡಿನ ಪಸಾಡೆನಾವರೆಗೆ ನಗರವನ್ನು ಧ್ವಂಸಗೊಳಿಸಿದ ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ದಳದವರು ಹರಸಾಹಸಪಡಬೇಕಾಯಿತು.
ಬಿಲ್ಲಿ ಕ್ರಿಸ್ಟಲ್, ಮ್ಯಾಂಡಿ ಮೂರ್, ಪ್ಯಾರಿಸ್ ಹಿಲ್ಟನ್ ಮತ್ತು ಕ್ಯಾರಿ ಎಲ್ವೆಸ್‌ನಂತಹ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುವ ಹಾಲಿವುಡ್ ಸೆಲೆಬ್ರಿಟಿಗಳ ಮನೆಗಳು ಬೆಂಕಿಗೆ ಆಹುತಿಯಾಗಿವೆ.ಅನ್‌ಸ್ಟಾಪಬಲ್, ವುಲ್ಫ್ ಮ್ಯಾನ್, ಬೆಟರ್ ಮ್ಯಾನ್ ಮತ್ತು ದಿ ಪಿಟ್ ಚಿತ್ರಗಳ ಪ್ರಥಮ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿದ್ದರೂ, ನೇರ ಕಾರ್ಯಕ್ರಮದಲ್ಲಿ ಘೋಷಿಸಬೇಕಿದ್ದ SAG ಪ್ರಶಸ್ತಿ ನಾಮನಿರ್ದೇಶನಗಳನ್ನು ಪತ್ರಿಕಾ ಪ್ರಕಟಣೆಯಲ್ಲಿ ಬಹಿರಂಗಪಡಿಸಲಾಗಿದೆ.ಜನವರಿ 12 ರಂದು ಸಾಂಟಾ ಮೋನಿಕಾದಲ್ಲಿ ನಿಗದಿಯಾಗಿದ್ದ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್ ನ್ನು ಜನವರಿ 26 ಕ್ಕೆ ಮುಂದೂಡಲಾಗಿದೆ.