ಗುಬ್ಬಿ:
ತಾಲ್ಲೂಕಿನ ದೊಡ್ಡಗುಣಿ ಸಮೀಪ ದೇವರಹಟ್ಟಿ ಗೇಟ್ ಬಳಿ ಹೆದ್ದಾರಿ ವಿಭಜಗಕ್ಕೆ ಕಾರು ಡಿಕ್ಕಿಒಡೆದು ಓರ್ವ ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತ ಬಾಲಕಿಯನ್ನು ಶಾಲಿನಿ 8 ವರ್ಷ ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಇತರೆ ನಾಲ್ವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ತುಮಕೂರು ಆಸ್ಪತ್ರೆಗೆ ಸಾಗಿಸಲಾಗಿದೆ.
ತಾಲ್ಲೂಕಿನ ಕೆ ಮತ್ತಿಘಟ್ಟ ಗ್ರಾಮದ ಮಲ್ಲಿಕಾರ್ಜುನ್ ಕುಟುಂಬ ಸಮೇತ ಕಾರೇಕುರ್ಚಿಯ ದೊಣೆಗಂಗಾ ಕ್ಷೇತ್ರಕ್ಕೆ ಹೋಗುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ವಾಹನ ದಟ್ಟಣೆ ಆಗದಂತೆ ತುರ್ತು ಕ್ರಮ ಕೈಗೊಂಡು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಈ ಭಾಗದಲ್ಲಿ ಹೆದ್ದಾರಿ ಕಾಮಗಾರಿ ಪೂರ್ಣವಾಗದಿರುವ ಜೊತೆಗೆ ಅಗತ್ಯ ಸೂಚನಾ ಫಲಕಗಳು ಇಲ್ಲದೆ ಇರುವುದೇ ಅಪಘಾತಕ್ಕೆ ಕಾರಣವಾಗುತ್ತಿದೆ. ಸಮೀಪದಲ್ಲಿಯೇ ಎತ್ತಿನಹೊಳೆ ನಾಲಾ ಕಾಮಗಾರಿ ನಡೆಯುತ್ತಿದ್ದರೂ ಆ ಜಾಗದಲ್ಲಿಯೂ ಅಗತ್ಯವಿರುವ ತಡೆ ಗೋಡೆಯನ್ನು ನಿರ್ಮಿಸಿಲ್ಲ. ಅಪಘಾತವಾದಾಗ ಕ್ರಮ ಕೈಗೊಳ್ಳುವದಾಗಿ ಹೇಳುವ ಅಧಿಕಾರಿಗಳು ನಂತರ ಸುಮ್ಮನಾಗುತ್ತಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.