ಆಟವಾಡುತ್ತಿದ್ದ ಮಗುವಿನ ಮೇಲೆ ಕಾರು ಹರಿಸಿದ ಮಹಿಳೆ

ಲಖನೌ: 

     ಉತ್ತರಪ್ರದೇಶದ ಗಾಜಿಯಾಬಾದ್‍ನಲ್ಲಿ ಮಹಿಳೆಯೊಬ್ಬಳು ತನ್ನ ಕಾರನ್ನು ಸೊಸೈಟಿಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿಸಿದ ಘಟನೆ ಮಂಗಳವಾರ(ಫೆಬ್ರವರಿ 25) ಸಂಜೆ 4 ಗಂಟೆ ಸುಮಾರಿಗೆ ನಡೆದಿದೆ. ಈ ಆಘಾತಕಾರಿ ಘಟನೆ ಅಲ್ಲಿದ್ದ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆರೋಪಿ ಮಹಿಳೆ ಗಾಜಿಯಾಬಾದ್‍ನ ರಾಜೇಂದ್ರ ನಗರ ಎಕ್ಸ್ಟೆನ್ಷನ್‍ನಲ್ಲಿರುವ ಎಸ್‍ಜಿ ಗ್ರ್ಯಾಂಡ್ ಸೊಸೈಟಿಗೆ ಬಂದಾಗ ಈ ಘಟನೆ ನಡೆದಿದೆಯಂತೆ. ಮಹಿಳೆ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾಳೆ ಎನ್ನಲಾಗಿದೆ.ವೈರಲ್ ವಿಡಿಯೊದಲ್ಲಿ, ಮಕ್ಕಳು ಸೊಸೈಟಿ ಕಾಂಪೌಂಡ್‍ನಲ್ಲಿ ಆಟವಾಡುತ್ತಿದ್ದಾಗ ಮಹಿಳೆಯೊಬ್ಬಳು ಕಾರಿನಲ್ಲಿ ಬಂದಿದ್ದಾಳೆ.

   ಆಗ ಅಲ್ಲಿದ್ದ ಮಕ್ಕಳೆಲ್ಲಾ ದೂರ ಓಡಿದ್ದಾರೆ. ಆದರೆ ಅಲ್ಲೇ ಕುಳಿತು ಆಡುತ್ತಿದ್ದ ಮಗುವಿನ ಮೈಮೇಲೆ ಕಾರು ಹರಿದಿದೆ. ಮಗು ಕಾರಿನ ಚಕ್ರದ ಅಡಿಯಲ್ಲಿ ಸಿಲುಕಿದನ್ನು ನೋಡಿದ ವ್ಯಕ್ತಿಯೊಬ್ಬ ಹಿಂದಿನಿಂದ ಓಡಿ ಬಂದು ಮಗುವನ್ನು ಹೊರಗೆ ಎಳೆದಿದ್ದಾನೆ. ಮಗುವಿನ ಸ್ಥಿತಿಯನ್ನು ನೋಡಿ ಗಾಬರಿಗೊಂಡ ಮಹಿಳೆ ಕೆಲವೇ ಸೆಕೆಂಡುಗಳಲ್ಲಿ, ತನ್ನ ಕಾರನ್ನು ಸ್ಟಾರ್ಟ್ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾಳೆ. 

   ನಂದಗ್ರಾಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳೀಯರು ಈ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಪೊಲೀಸರು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರದಿಯಾಗಿದೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಮಹಿಳೆಯನ್ನು ಈ ಪ್ರಕರಣದಿಂದ ಕಾಪಾಡಲು ಯಾರೋ ಗೇಟ್‍ನಲ್ಲಿರುವ ಎಂಟ್ರಿ ರಿಜಿಸ್ಟರ್‌ನಲ್ಲಿದ್ದ ಆಕೆಯ ಮಾಹಿತಿ ಇರುವ ಪುಟಗಳನ್ನು ಹರಿದುಹಾಕಿದ್ದಾರೆ ಎಂದು ಎಕ್ಸ್ ಬಳಕೆದಾರರಲ್ಲಿ ಒಬ್ಬರಾದ ರೂಪೇಶ್ ವರ್ಮಾ ಆರೋಪಿಸಿದ್ದಾರೆ. ಮಗುವಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ.

   ಇತ್ತೀಚೆಗೆ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡುಗೋಡಿನಲ್ಲಿ ಇದೇ ರೀತಿಯ ಘಟನೆ ವರದಿಯಾಗಿದೆ. ಕಾಡುಗೋಡಿ ಬಳಿಯ ಸಿಟಿ ಲೇಔಟ್‌ನಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಜೆಸಿಬಿ ಹರಿದ ಪರಿಣಾಮ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಥವನ್ ರೆಡ್ಡಿ (2) ಮೃತಪಟ್ಟ ಮಗು. ಚಾಲಕ ಜೆಸಿಬಿಯನ್ನು ಅಜಾಗರೂಕತೆಯಿಂದ ಅತಿವೇಗವಾಗಿ ಚಾಲನೆ ಮಾಡಿದ ಪರಿಣಾಮ ಮನೆ ಮುಂದೆ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದಿದೆ. ಮಗುವನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಮಗು ಆಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. 

   ಅದೂ ಅಲ್ಲದೇ, ಇತ್ತೀಚೆಗೆ ಮಹಾರಾಷ್ಟ್ರದ ವಸೈ ಎಂಬಲ್ಲಿ ಆರು ವರ್ಷದ ಬಾಲಕನ ಮೇಲೆ ಕಾರೊಂದು ಹರಿದಿದ್ದು, ಅದೃಷ್ಟವಶಾತ್ ಮಗುವು ಪ್ರಾಣಾಪಾಯದಿಂದ ಪಾರಾಗಿದೆ. ಆರು ವರ್ಷದ ಬಾಲಕನ ಮೇಲೆ ನಾಲ್ಕು ಚಕ್ರದ ವಾಹನ ಹರಿಸಿದ ಕ್ಯಾಬ್ ಡ್ರೈವರ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಗಾಯಗೊಂಡಿರುವ ಬಾಲಕ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.

Recent Articles

spot_img

Related Stories

Share via
Copy link