ಮಹಾರಾಷ್ಟ್ರ:
ಯುವತಿಯೊಬ್ಬಳು ಕಾರನ್ನು ರಿವರ್ಸ್ ನಲ್ಲಿ ಓಡಿಸಿ 300 ಅಡಿ ಆಳದ ಕಂದಕಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಈಕೆ ಡ್ರೈವಿಂಗ್ ಕಲಿಯುತ್ತಿರುವುದನ್ನು ಯುವತಿಯ ಗೆಳೆಯ ವಿಡಿಯೋ ಮಾಡುತ್ತಿದ್ದು, ಆಕೆ ಪ್ರಪಾತಕ್ಕೆ ಬಿದ್ದ ದೃಶ್ಯ ಕೂಡಾ ಸೆರೆಯಾಗಿದೆ.
ಸೋಮವಾರ ಮಧ್ಯಾಹ್ನ ಗೆಳೆಯ ಸೂರಜ್ ಸಂಜು ಮುಲೆ (25ವರ್ಷ) ಜತೆ ಶ್ವೇತಾ ದೀಪಕ್ ಸುರ್ವಾಸೆ (23ವರ್ಷ) ಕಾರಿನಲ್ಲಿ ಔರಂಗಬಾದ್ ನಿಂದ ಸುಲಿಭಂಜನ್ ಬೆಟ್ಟಕ್ಕೆ ಪ್ರಯಾಣಿಸಿದ್ದರು ಎಂದು ವರದಿ ತಿಳಿಸಿದೆ.
ಮಧ್ಯಾಹ್ನ 2ಗಂಟೆ ಸುಮಾರಿಗೆ ಸುರ್ವಾಸೆ ಕಾರನ್ನು ನಿಧಾನಕ್ಕೆ ರಿವರ್ಸ್ ನಲ್ಲಿ ಚಲಾಯಿಸುತ್ತಿದ್ದು, ಈ ಸಂದರ್ಭದಲ್ಲಿ ಆಕೆ ಡ್ರೈವಿಂಗ್ ಮಾಡುತ್ತಿರುವುದನ್ನು ಗೆಳೆಯ ವಿಡಿಯೋ ಮಾಡುತ್ತಿದ್ದ. ಆಗ ಕಾರು ಏಕಾಏಕಿ ವೇಗದಲ್ಲಿ ಹಿಂದಕ್ಕೆ ಚಲಾಯಿಸಿದ್ದು, ಸೂರಜ್, ನಿಧಾನ, ನಿಧಾನ ಕ್ಲಚ್, ಕ್ಲಚ್ ಒತ್ತು ಎಂದು ಎಚ್ಚರಿಕೆ ನೀಡುತ್ತಿದ್ದ. ಆದರೆ ಅಷ್ಟರಲ್ಲಿ ಕಾರು 300 ಅಡಿ ಆಳದ ಪ್ರಪಾತಕ್ಕೆ ಬಿದ್ದ ಪರಿಣಾಮ ಸುರ್ವಾಸೆ ಕೊನೆಯುಸಿರೆಳೆದಿರುವುದಾಗಿ ವರದಿ ತಿಳಿಸಿದೆ.
ಮಳೆಗಾಲವಾಗಿದ್ದರಿಂದ ಇಬ್ಬರು ಸುಲಿಭಂಜನ್ ಬೆಟ್ಟದಲ್ಲಿರುವ ದತ್ತಾತ್ರೇಯ ದೇವಾಲಯಕ್ಕೆ ಭೇಟಿ ನೀಡಲು ಆಗಮಿಸಿದ್ದರು. ಹಸಿರು ಬೆಟ್ಟದ ಸುಂದರ ದೃಶ್ಯ ಸೆರೆಹಿಡಿಯಲು ಅಪಾರ ಪ್ರಮಾಣದ ಪ್ರವಾಸಿಗರು ಈ ಬೆಟ್ಟಕ್ಕೆ ಭೇಟಿ ನೀಡುತ್ತಾರೆ ಎಂದು ವರದಿ ವಿವರಿಸಿದೆ.