ಬೆಂಗಳೂರು:
ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಇಲ್ಲದೆ ಖಾಸಗಿ ವ್ಯಕ್ತಿಯೊಬ್ಬನ ವಿರುದ್ಧ ಕಾನೂನುಬಾಹಿರ ಕ್ರಮ ಕೈಗೊಂಡ ಆರೋಪದ ಮೇಲೆ ಏಳು ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಲೋಕಾಯುಕ್ತ ಪ್ರಕರಣಗಳ ವಿಶೇಷ ನ್ಯಾಯಾಲಯ ನೀಡಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
ಹಿಂದಿನ ಭ್ರಷ್ಟಾಚಾರ ನಿಗ್ರಹ ದಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಏಳು ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
ಅರ್ಜಿದಾರ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸುವುದಕ್ಕಾಗಿ ಸಕ್ಷಮ ಪ್ರಾಧಿಕಾರ ಅನುಮತಿ ನೀಡಿದಲ್ಲಿ ವಿಚಾರಣಾ ಪ್ರಕ್ರಿಯೆ ಮುಂದುವರಿಸಬಹುದು ಎಂದು ಹೇಳಿರುವ ಹೈಕೋರ್ಟ್ ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಿರುವ ಕ್ರಮ ರದ್ದುಪಡಿಸಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಪ್ರಕರಣದಲ್ಲಿ ಅರ್ಜಿದಾರ ಅಧಿಕಾರಿಗಳು ಎಸಿಬಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಅವರ ವಿರುದ್ಧ ಅಧಿಕಾರ ದುರ್ಬಳಕೆ, ಕ್ರಿಮಿನಲ್ ದುರ್ನಡತೆ, ಸುಲಿಗೆ ಯತ್ನ, ಮತ್ತು ನಕಲಿ ದಾಖಲೆಗಳ ಸೃಷ್ಟಿ ಆರೋಪದ ಪ್ರಕರಣವನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.
ತಮ್ಮ ವಿರುದ್ಧದ ವಿಚಾರಣೆ ಕಾನೂನು ಬಾಹಿರ. ಪ್ರಕರಣದಲ್ಲಿ ಪೂರ್ವಾನುಮತಿ ಪಡೆಯದೆ ದೂರನ್ನು ವಿಚಾರಣೆಗೆ ಪರಿಗಣಿಸಲಾಗಿದೆ. ಆದ್ದರಿಂದ ರದ್ದುಗೊಳಿಸಬೇಕು ಎಂದು ಕೋರಿ ಸೀಮಂತ್ ಕುಮಾರ್ ಸಿಂಗ್, ಎಂ ಕೆ ತಿಮ್ಮಯ್ಯ, ಪ್ರಕಾಶ್, ಆರ್ ಎಚ್ ವಿಜಯಾ, ಉಮಾ ಪ್ರಶಾಂತ್, ಎಸ್ ಆರ್ ವೀರೇಂದ್ರ ಪ್ರಸಾದ್, ಮಂಜುನಾಥ್ ಜಿ.ಹೂಗಾರ್ ಅರ್ಜಿ ಸಲ್ಲಿಸಿದ್ದರು.