1.60 ಲಕ್ಷ ರೂ. ಸಾಲಕ್ಕೆ 3.80 ಲಕ್ಷ ಬಡ್ಡಿ ಮಸೂಲಿ: ಪ್ರಕರಣ ದಾಖಲು

ಬೆಂಗಳೂರು:

   1.60 ಲಕ್ಷ ರೂ. ಸಾಲಕ್ಕೆ ಬಡ್ಡಿಯಾಗಿ 3.80 ಲಕ್ಷ ರೂ.ಗಳನ್ನು ವಸೂಲಿ ಮಾಡಿದ್ದರು, ಮತ್ತೆ ಹೆಚ್ಚುವರಿ ಬಡ್ಡಿ ನೀಡುವಂತೆ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ದಂಪತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

   ಸಹಕಾರ ಸಂಘಗಳ ಉಪ ರಿಜಿಸ್ಟ್ರಾರ್‌ ಗಂಗಾಧರ್‌ ಅವರ ದೂರಿನ ಮೇರೆಗೆ ಶಶೀಂದ್ರಾ ಮತ್ತು ಅಶೋಕ್‌ ದಂಪತಿ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯ್ದೆ ಮತ್ತು ಅಧಿಕ ಬಡ್ಡಿ ವಸೂಲಿ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

   ಜಯನಗರದ ಕೆಎಂ ಕಾಲೋನಿ ನಿವಾಸಿ ಸಮ್ರೀನ್ ಜುಲೈ 2021 ರಲ್ಲಿ ಶಶೀಂದ್ರ ಮತ್ತು ಅವರ ಪತಿ ಅಶೋಕ್ ಅವರಿಂದ ತಿಂಗಳಿಗೆ ಶೇಕಡಾ 5 ರಷ್ಟು ಬಡ್ಡಿದರದಲ್ಲಿ 1.60 ಲಕ್ಷ ರೂ.ಗಳನ್ನು ಸಾಲವಾಗಿ ಪಡೆದಿದ್ದರು. ತಮ್ಮ ಸಂಬಂಧಿ ಮೊಹಮ್ಮದ್ ರಫೀಕ್ ಸಹಾಯದಿಂದ ಸಾಲವನ್ನು ಪಡೆದುಕೊಂಡರು. ಸಾಲ ಪಡೆಯುವ ಸಮಯದಲ್ಲಿ, ಸಮ್ರೀನ್ ಮತ್ತು ರಫೀಕ್ ಇಬ್ಬರೂ ಶಶೀಂದ್ರರಿಗೆ ತಲಾ ಒಂದು ಖಾಲಿ ಚೆಕ್ ಅನ್ನು ಭದ್ರತೆಯಾಗಿ ನೀಡಿದ್ದರು.

   ಬಳಿಕ ಪ್ರತಿ ತಿಂಗಳು ರೂ.8 ಸಾವಿರದಂತೆ ಒಂದೂವರೆ ವರ್ಷ ಸುಮಾರು 1.44 ಲಕ್ಷ ಹಣವನ್ನು ಶಶೀಂದ್ರಾಗೆ ನೀಡಿದ್ದಾರೆ. ಬಡ್ಡಿ ಕಟ್ಟುವುದು ವಿಳಂಬವಾದಾಗ ಶಶೀಂದ್ರಾ, ಸಮ್ರೀನ್‌ಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಲಾಗಿದೆ. ಬಳಿಕ ಸಮ್ರೀನ್‌ ಅವರು ಶಶೀಂದ್ರಾ ಅವರ ಮನೆಗೆ ತೆರಳಿ, ಬಡ್ಡಿ ಕಟ್ಟಲು ಆಗುತ್ತಿಲ್ಲ. ಅಸಲು ಹಣವನ್ನು ಮಾತ್ರ ಕಟ್ಟಿ ತೀರಿಸುವುದಾಗಿ ಮನವಿ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಬಡ್ಡಿ ಬಿಡುವುದಿಲ್ಲ ಎಂದು ಶಶೀಂದ್ರಾ ಹೇಳಿದ್ದಾರೆ. ಬಳಿಕ ಸಮ್ರೀನ್‌ ಪ್ರತಿ ತಿಂಗಳು ರೂ.10 ಸಾವಿರ ಅಸಲು ಮತ್ತು ರೂ.5 ಸಾವಿರ ಬಡ್ಡಿ ಸೇರಿ ರೂ.15 ಸಾವಿರ ಕಟ್ಟುವುದಾಗಿ ಒಪ್ಪಿಕೊಂಡಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

   ಇದಾದ ಬಳಿಕ ನವೆಂಬರ್ 2023 ರಿಂದ, ಶಶಿಂದ್ರ ಅವರಿಗೆ ಪ್ರತಿ ತಿಂಗಳು 15,000 ರೂ. ಪಾವತಿಸಲಾಗಿದೆ. ಮೇ 24, 2024 ರ ಹೊತ್ತಿಗೆ, ಒಟ್ಟು 1.86 ಲಕ್ಷ ರೂ. ಬಡ್ಡಿಯನ್ನು ಪಾವತಿಸಲಾಗಿದೆ. ಈ ನಡುವೆ ತೆರಿಗೆ ಪಾವತಿಸಬೇಕೆಂದು ಶಶೀಂದ್ರಾ ನನ್ನ ಬಳಿ ರೂ.5 ಸಾವಿರ ಪಡೆದಿದ್ದಾರೆ. ಸಾಲ ಪಡೆಯುವಾಗ ಸಂಬಂಧಿ ರಫೀಕ್‌ ನೀಡಿದ್ದ ಖಾಲಿ ಚೆಕ್‌ ಅನ್ನು ಶಶೀಂದ್ರಾ ದುರುಪಯೋಗಪಡಿಸಿಕೊಂಡು ರೂ.4 ಲಕ್ಷ ಬರೆದುಕೊಂಡು ಬ್ಯಾಂಕ್‌ಗೆ ಹಾಕಿ ಬೌನ್ಸ್‌ ಮಾಡಿದ್ದಾರೆ. ಹೀಗಾಗಿ ಶಶೀಂದ್ರಾ ಹಾಗೂ ಅಶೋಕ್ ದಂಪತಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.

Recent Articles

spot_img

Related Stories

Share via
Copy link