ರಾಣೇಬೆನ್ನೂರು:
ನಂದಿಹಳ್ಳಿ ಗ್ರಾಮದ ದಲಿತ ಕುಟುಂಬಗಳ ಎರಡು ಮನೆಗಳಿಗೆ ಬೆಂಕಿ ಹಚ್ಚಿದ ಆರೋಪದ ಮೇಲೆ ಹಾವೇರಿ ಪೊಲೀಸರು 25 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಭಾನುವಾರ ತಡರಾತ್ರಿ ಈ ಘಟನೆ ನಡೆದಿದ್ದು, ಅಕ್ಕ ಪಕ್ಕದಲ್ಲಿರುವ ಎರಡು ಮನೆಗಳಲ್ಲಿ 12 ಮಂದಿ ಕುಟುಂಬ ಸದಸ್ಯರು ಮಲಗಿದ್ದರು. ಗ್ರಾಮಸ್ಥರ ಗುಂಪು ದಲಿತ ಕಾಲೋನಿಯ ಮನೆಗಳಿಗೆ ನುಗ್ಗಿ ಪೆಟ್ರೋಲ್, ಕಟ್ಟಿಗೆ ಎಸೆಯಲು ಆರಂಭಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಆರೋಪಿಗಳು ಮೊದಲ ಮನೆಯನ್ನು ಸುಟ್ಟು ಹಾಕಿದರು. ಹೊಗೆಯನ್ನು ಗಮನಿಸಿದ ಕುಟುಂಬಸ್ಥರು ಮನೆಯಿಂದ ಹೊರಬಂದು ಪ್ರಾಣ ರಕ್ಷಣೆಗಾಗಿ ಗ್ರಾಮದಿಂದ ಓಡಿ ಹೋದರು. ಇದೀಗ ಜಿಲ್ಲೆಯ ವಿವಿಧ ಗ್ರಾಮಗಳ ಸಂಬಂಧಿಕರ ಮನೆಗಳಲ್ಲಿ ನೆಲೆಸಿದ್ದಾರೆ.
ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಹಾವೇರಿಯ ಹಿರಿಯ ಪೊಲೀಸ್ ಅಧಿಕಾರಿಗಳು ಇದೀಗ ರಾಣೆಬೆನ್ನೂರಿಗೆ ಬಂದಿಳಿದಿದ್ದಾರೆ. ಈವರೆಗೆ ಇಬ್ಬರು ಶರಣಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.ಮನೆಗೆ ಬೆಂಕಿ ಹಚ್ಚಿದ ಘಟನೆಯಲ್ಲಿ ಭಾಗಿಯಾದ ಗ್ರಾಮಸ್ಥರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣಗಳು ದಾಖಲಾಗಿವೆ.








