ಚಾಮರಾಜನಗರ
ಜಿಲ್ಲೆಯ ಗುಂಡ್ಲುಪೇಟೆಯ ಅರಣ್ಯದಂಚಿನ ಗ್ರಾಮದಲ್ಲಿ ಹುಲಿ ಹಿಡಿಯಲು ವಿಫಲರಾದ ಹಿನ್ನಲೆ ರೊಚ್ಚಿಗೆದಿದ್ದ ರೈತರು ಅಧಿಕಾರಿಗಳನ್ನೇ ಬೋನಿನಲ್ಲೇ ಕೂಡಿ ಹಾಕಿದ್ದರು. ಇದು ಸಾಕಷ್ಟು ಚರ್ಚೆಗೆ ಕೂಡ ಗ್ರಾಸವಾಗಿತ್ತು. ಕರ್ತವ್ಯಕ್ಕೆ ಅಡ್ಡಿ ಎಂದು ಐವರು ರೈತರ ಮೇಲೆ ಎಫ್ಐಆರ್ ದಾಖಲಾಗಿತ್ತು. ಆದರೆ ಇದೀಗ ಅಧಿಕಾರಿಗಳ ಮೇಲೂ ಕೇಸ್ ಬಿದ್ದಿದೆ.
ಹುಲಿ ಸೆರೆ ಹಿಡಿಯದ ಹಿನ್ನಲೆ ಬೋನಿನಲ್ಲಿ ಅರಣ್ಯಾಧಿಕಾರಿಗಳನ್ನ ಕೂಡಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ದೂರು, ಪ್ರತಿ ದೂರುಗಳು ದಾಖಲಾಗುತ್ತಿವೆ. ಜಮೀನಿಗೆ ನುಗ್ಗಿ ಹಲ್ಲೆ ಆರೋಪ ಹಿನ್ನಲೆ ರೈತ ಮಹಿಳೆ ಕಮಲಮ್ಮ ನೀಡಿದ ದೂರಿನ ಅನ್ವಯ ಬರೋಬ್ಬರಿ 15 ಮಂದಿ ಅರಣ್ಯ ಸಿಬ್ಬಂದಿ ಮೇಲೆ BNS ACT 2023 (U/S 109 115 (2) 74 190 126 (2) 351 (2) ಅಡಿ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಅರಣ್ಯದಂಚಿನ ಗ್ರಾಮದಲ್ಲಿ, ಹುಲಿ, ಚಿರತೆ ಕಾಟ ಮಿತಿ ಮಿರಿತ್ತು. ಜಾನುವಾರುಗಳನ್ನ ಮೃಗಗಳು ಕೊಂದು ಹಾಕಿದ್ದವು. ಅರಣ್ಯ ಇಲಾಖೆ ರೈತರ ಜಮೀನಿನಲ್ಲಿ ಬೋನಿರಿಸಿದ್ದನ್ನ ಬಿಟ್ಟರೇ, ಏನೂ ಮಾಡಿರಲಿಲ್ಲ. ಇದರಿಂದ ರೊಚ್ಚಿಗೆದಿದ್ದ ರೈತರು, ಜಮೀನಿನಲ್ಲಿದ್ದ ಬೋನಿನಲ್ಲೇ ಅಧಿಕಾರಿಗಳನ್ನ ಅರ್ಧ ಗಂಟೆ ಕಾಲ ಕೂಡಿ ಹಾಕಿ ಬಿಸಿ ಮುಟ್ಟಿಸಿದ್ದರು.
ಮೃಗಗಳ ಸೆರೆಗೆ ಆಗ್ರಹಿಸಿ ಬಳಿಕ ಬಿಡುಗಡೆ ಮಾಡಿದ್ದರು. ಅರಣ್ಯ ಸಿಬ್ಬಂದಿ ಕೂಡಿ ಹಾಕಿದ್ದಕ್ಕೆ, ಬಂಡೀಪುರ ಸಿಎಫ್ ಕೆರಳಿದ್ದರು. ಅವರ ಸೂಚನೆಯಂತೆ ಐವರು ರೈತರ ವಿರುದ್ಧ ಗುಂಡ್ಲುಪೇಟೆ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿ ಎಂದು ಅರಣ್ಯ ಸಿಬ್ಬಂದಿ ದೂರು ಹಿನ್ನಲೆ ಎಫ್ಐಆರ್ ದಾಖಲಿಸಲಾಗಿತ್ತು. ಇದಕ್ಕೆ ರೈತರು ಮತ್ತಷ್ಟು ಕೆರಳಿದ್ದರು. ತಕ್ಷಣವೇ ಪ್ರಕರಣ ರದ್ದು ಮಾಡಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಮಾಡೋದಾಗಿ ಎಚ್ಚರಿಸಿದ್ದರು.
