ಧರ್ಮಸ್ಥಳ:
ಧರ್ಮಸ್ಥಳದ ಅರಣ್ಯದಲ್ಲಿ ಹೆಣಗಳನ್ನು ಹೂಳಲಾಗಿದೆ ಎನ್ನಲಾದ ಕೇಸ್‌ಗೆ ಸಂಬಂಧಿಸಿದಂತೆ ನಡೆದ ಹಲ್ಲೆ ಪ್ರಕರಣಕ್ಕೆ ಇನ್ನೊಂದು ತಿರುವು ದೊರೆತಿದೆ. ಯೂಟ್ಯೂಬರ್‌ಗಳ ಮೇಲೆ ಹಲ್ಲೆ ನಡೆದಿದೆ ಎಂದು ದೂರು ದಾಖಲಾಗಿದ್ದು, 6 ಮಂದಿಯ ಬಂಧನವಾಗಿತ್ತು. ಇದೀಗ ಯೂಟ್ಯೂಬರ್ ಗಳ ವಿರುದ್ಧವೂ ಹಲ್ಲೆಯ ಕುರಿತು ಎಫ್‌ಐಆರ್ ದಾಖಲಾಗಿದೆ. ಸ್ಥಳೀಯರಾದ ಹರೀಶ್ ನಾಯ್ಕ್ ಎಂಬವರು ದೂರು ನೀಡಿದ್ದು, ಆ ದೂರಿನ ಮೇರೆಗೆ ಯೂಟ್ಯೂಬರ್‌ಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಯೂಟ್ಯೂಬರ್‌ಗಳು ಅಡ್ಡಗಟ್ಟಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಬೈಕ್ ಸವಾರನನ್ನು ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಮೂವರು ಯೂಟ್ಯೂಬರ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆ. 6ರಂದು ಘಟನೆ ನಡೆದಿದ್ದು, ಈ ಬಗ್ಗೆ ಹರೀಶ್ ನಾಯ್ಕ ಎಂಬವರು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದಾರೆ. ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿರುವುದಾಗಿ ಹರೀಶ್ ನಾಯ್ಕ ದೂರು ನೀಡಿದ್ದಾರೆ. ಅದರಂತೆ ಧರ್ಮಸ್ಥಳ ಠಾಣೆಯಲ್ಲಿ ಅಪರಾಧ ಕ್ರಮ ಸಂಖ್ಯೆ 50/2025 ಕಲಂ126(2)115(2) 352 ಜೊತೆಗೆ 3(5) ಬಿಎನ್‌ಎಸ್‌ನಂತೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮೊದಲು ಧರ್ಮಸ್ಥಳದ ಪಾಂಗಳ ಕ್ರಾಸ್‌ನಲ್ಲಿ ಆ.6 ರಂದು ಸಂಜೆ 4 ಮಂದಿ ಯೂಟ್ಯೂಬರ್‌ಗಳ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದರು. ಆ.9ರಂದು ಧರ್ಮಸ್ಥಳ ನಿವಾಸಿಗಳಾದ ಪದ್ಮಪ್ರಸಾದ್, ಸುಹಾಸ್, ಗುರುಪ್ರಸಾದ್, ಶಶಿಕುಮಾರ್, ಕಲಂದರ್, ಚೇತನ್ ಎಂಬವರನ್ನು ಬಂಧಿಸಿದ್ದು ಶನಿವಾರ ಸಂಜೆ ಬೆಳ್ತಂಗಡಿ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ ಬಳಿಕ 6 ಮಂದಿಗೂ ಮಧ್ಯಂತರ ಜಾಮೀನು (Bail) ಮಂಜೂರು ಮಾಡಲಾಗಿತ್ತು.








