ಸದ್ಯದಲ್ಲೆ ಜಾತಿ ಗಣತಿ ವರದಿ ಸಲ್ಲಿಕೆ : ಜಯಪ್ರಕಾಶ್‌ ಹೆಗ್ಡೆ

ಬೆಂಗಳೂರು:

    ವಿವಾದಿತ ಜಾತಿ ಗಣತಿ ವರದಿಯನ್ನು ನವೆಂಬರ್ 24 ರೊಳಗೆ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಶನಿವಾರ ಹೇಳಿದ್ದಾರೆ. ಆದಾಗ್ಯೂ, ಜನಗಣತಿ ಪರ ಅಥವಾ ವಿರೋಧವಾಗಿ ನೀಡಿರುವ ಹೇಳಿಕೆಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು. 

    ಸುದ್ದಿಗಾರರೊಂದಿಗೆ ಮಾತನಾಡಿದ ಹೆಗ್ಡೆ, ಜಾತಿ ಗಣತಿ ವರದಿಯನ್ನು ಸರ್ಕಾರ ಅಂಗೀಕರಿಸುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ನಡುವೆ ಈ ರೀತಿಯ ಹೇಳಿಕೆ ನೀಡಿದರು.

    ಜಾತಿ ಗಣತಿ ವರದಿಯನ್ನು ತಿರಸ್ಕರಿಸಲು ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದ ಒಕ್ಕಲಿಗ ಸಮುದಾಯ ಕೈಗೊಂಡಿರುವ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿಯ ಪ್ರತಿಕ್ರಿಯೆಯ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಯಾವ ಆಧಾರದಲ್ಲಿ ಬಿಜೆಪಿಯ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಟೀಕೆ ಮಾಡಿದ್ದಾರೆ ಎಂದರು. 

    ನಿರ್ಮಲಾನಂದನಾಥ ಸ್ವಾಮೀಜಿ ಜಾತಿ ಗಣತಿ ವರದಿ ದೋಷಪೂರಿತ ಮತ್ತು ಅವೈಜ್ಞಾನಿಕ ಎಂದು ಕರೆದಿದ್ದು, ಮರು ಸಮೀಕ್ಷೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಅದು ಬೆಂಕಿಯಲ್ಲಿ ಎಸೆಯಲು ಅರ್ಹವಾಗಿದೆ ಎಂದು ಈಶ್ವರಪ್ಪ ಹೇಳಿಕೆ ನೀಡಿದ್ದರು.

   “ಕಾರ್ಯಕ್ಕೆ ನಿಯೋಜನೆಗೊಂಡಿರುವ ಶಿಕ್ಷಕರು ಕ್ಷೇತ್ರಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ. ಜಾತಿ ಗಣತಿ ವರದಿಯ ಪರಾಮರ್ಶೆಗೆ ಸರ್ಕಾರ ಕರೆ ನೀಡಬೇಕಾಗುತ್ತದೆ.  ವರದಿಯಲ್ಲಿ ದೋಷವಿದೆ ಎಂದು ಯಾವ ನೆಲೆಯಲ್ಲಿ ಹೇಳಲಾಗಿದೆಯೋ ಗೊತ್ತಿಲ್ಲ. ನವೆಂಬರ್ 24ರೊಳಗೆ ವರದಿ ಸಲ್ಲಿಸುತ್ತೇನೆ’ ಎಂದು ಹೆಗ್ಡೆ ಪುನರುಚ್ಚರಿಸಿದರು.

    ಜಾತಿ ಗಣತಿ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸುವಂತೆ ಹಿಂದುಳಿದ ವರ್ಗಗಳ ಆಯೋಗಕ್ಕೆ ತಿಳಿಸಲಾಗಿದೆ. ವರದಿ ಸಲ್ಲಿಕೆಯಾದ ನಂತರ ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲದಿನಗಳ ಹಿಂದೆ ಹೇಳಿಕೆ ನೀಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ