ತುಮಕೂರು:
ರಾಜ್ಯ ಸರ್ಕಾರ ಕೋವಿಡ್ ನಿರ್ಬಂಧಗಳನ್ನು ಸಡಿಲಗೊಳಿಸಿರುವ ಹಿನ್ನೆಲೆಯಲ್ಲಿ ಇತಿಹಾಸ ಪ್ರಸಿದ್ದ ಸಿದ್ದಗಂಗಾ ಕ್ಷೇತ್ರದಲ್ಲಿ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಜಾತ್ರೆಯ ಅಂಗವಾಗಿ ಈ ಬಾರಿ ದನಗಳ ಜಾತ್ರೆ ಮೈದುಂಬಿ ನಡೆಯುತ್ತಿದ್ದು, ರಾಜ್ಯದ ನಾನಾ ಕಡೆಗಳಿಂದ ರಾಸುಗಳ ಬಂದು ಸೇರುವ ಮೂಲಕ ದನಗಳ ಜಾತ್ರೆ ಕಳೆಗಟ್ಟಿದೆ.
ಕಳೆದ ಎರಡು ವರ್ಷದಿಂದ ಕೋವಿಡ್ ಕಾರಣದಿಂದಾಗಿ ಜಾತ್ರೆ, ಉತ್ಸವಗಳಿಗೆ ಸರ್ಕಾರ, ಜಿಲ್ಲಾಡಳಿತಗಳು ಮುನ್ನೆಚ್ಚರಿಕೆ ಯಾಗಿ ಬಿಗಿ ನಿಯಮಗಳನ್ನು ಜಾರಿ ಮಾಡಿದ್ದವು. ಹಾಗಾಗಿ ಜಾತ್ರೆ, ಉತ್ಸವಗಳು ಕಳೆಗುಂದಿದ್ದವು.
ಆದರೆ ಈ ವರ್ಷ ಕೊರೊನಾ ಸೋಂಕಿನ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ನಿರ್ಬಂಧಗಳನ್ನು ಸಡಿಲಗೊಳಿಸಿ ರುವುದರಿಂದ ಸಿದ್ದಗಂಗೆಯಲ್ಲಿ ದನಗಳ ಜಾತ್ರೆ ಪ್ರತಿ ವರ್ಷಕ್ಕಿಂತ ಈ ಬಾರಿ ಬಲು ಜೋರಾಗಿದೆ.
ಸಿದ್ದಗಂಗಾ ಮಠದ ನೂರಾರು ಎಕರೆ ಜಾಗದಲ್ಲಿ ಎತ್ತ ಕಣ್ಣಾಯಿಸಿದರೂ ದನಗಳ ಜಾತ್ರೆಯದ್ದೇ ಕಾರುಬಾರು. ಶ್ರೀಕ್ಷೇತ್ರದಲ್ಲಿ ದನಗಳ ಜಾತ್ರೆಯ ವಿಹಂಗಮ ನೋಟ ನೋಡುಗರ ಕಣ್ಮನ ಸೆಳೆಯುತ್ತಿದೆ.
ರಾಜ್ಯದ ನಾನಾ ಕಡೆಗಳಿಂದ ರೈತರು ತಾವು ಸಾಕಿ ಸಲಹಿರುವ ಎತ್ತುಗಳನ್ನು ಕರೆ ತಂದಿದ್ದು, ರಾಸುಗಳಿಗೆ ಬಿಸಿಲಿನ ಝಳ ತಾಗದಂತೆ ಕೆಲ ರೈತರು ಪೆಂಡಾಲ್ ಹಾಕಿ ಮನೆ ಮಕ್ಕಳಂತೆ ಸಲಹುತ್ತಿರುವದೂ ಸಹ ಸಾಮಾನ್ಯ ದೃಶ್ಯವಾಗಿದೆ.
ಸಿದ್ದಗಂಗೆ ದನಗಳ ಜಾತ್ರೆ ಎಂದಾಕ್ಷಣ ರಾಜ್ಯದ ಮೂಲೆ ಮೂಲೆಗಳಿಂದ ರೈತರು ದನಗಳು ಕರೆತಂದು ಮಾರಾಟ ಮಾಡುವ ಪದ್ದತಿ ಹತ್ತಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.
ಹಾಗೆಯ ಈ ಬಾರಿಯೂ ಗದಗ, ವಿಜಯಪುರ, ಬಳ್ಳಾರಿ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ರಾಮನಗರ, ದಾವಣಗೆರೆ, ತುಮಕೂರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ಉತ್ತರ ಕರ್ನಾಟಕ ಭಾಗಗಳಿಂದ ರೈತ ಸಮೂಹ ದನಗಳ ಮಾರಾಟ ಮತ್ತು ಖರೀದಿಗಾಗಿ ಶ್ರೀಕ್ಷೇತ್ರಕ್ಕೆ ಬಂದು ವಾಸ್ತವ್ಯ ಹೂಡಿದ್ದು, ರಾಸುಗಳ ಮಾರಾಟ ಮತ್ತು ಖರೀದಿಯಲ್ಲಿ ತೊಡಗಿರುವುದು ಕಂಡು ಬರುತ್ತಿದೆ.
ಸಿದ್ದಗಂಗೆಗೆ ದನಗಳ ಜಾತ್ರೆಯಲ್ಲಿ ಮಾರಾಟಕ್ಕಾಗಿ ಬಂದು ಸೇರಿರುವ ದನಗಳು ಮತ್ತು ರೈತರಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ, ಊಟ, ಶೌಚಾಲಯ ಸೇರಿದಂತೆ ಅವಶ್ಯಕ ವ್ಯವಸ್ಥೆಗಳನ್ನು ಶ್ರೀಮಠದ ವತಿಯಿಂದ ಮಾಡಲಾಗಿದೆ.
ಈ ವರ್ಷ ಈಗಲೇ ಬಿಸಿಲಿನ ಝಳ ಬಲು ಜೋರಾಗಿರುವ ಹಿನ್ನೆಲೆಯಲ್ಲಿ ರಾಸುಗಳಿಗೆ ಮೈ ಸುಡಬಾರದು ಎಂಬ ಉದ್ದೇಶದಿಂದ ಶಾಮಿಯಾನ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ.
ವಿವಿಧ ತಳಿಗಳ ಆಕರ್ಷಣೆ :
ರಾಸುಗಳ ಜಾತ್ರೆಗೆ ಈ ಬಾರಿ ಹಳ್ಳಿಕಾರ್, ಅಮೃತ್ ಮಹಲ್, ಕಿಲಾರಿ, ಗಿಡ್ಡ ಹೋರಿ, ನಾಟಿ ಹಸು, ಮಲೆನಾಡ ಗಿಡ್ಡ, ಕೃಷ್ಣ ವ್ಯಾಲಿ ಸೇರಿದಂತೆ ವಿವಿಧ ತಳಿಗಳ ರಾಸುಗಳು ರಾಜ್ಯದ ವಿವಿಧ ಮೂಲೆಗಳಿಂದ ಬಂದು ಸೇರಿದ್ದು, ಇಷ್ಟೂ ತಳಿಗಳನ್ನು ಒಂದೇ ಕಡೆ ನೋಡುವ ಭಾಗ್ಯ ಶ್ರೀಕ್ಷೇತ್ರದಲ್ಲಿ ದೊರೆತಿದೆ.
ಈ ಬಾರಿ ಜಾತ್ರೆಯಲ್ಲಿ ಸುಮಾರು 6 ರಿಂದ 8 ಸಾವಿರ ಹೋರಿಗಳು ಸೇರಿದ್ದು, ಕನಿಷ್ಠ 20 ಸಾವಿರ ರೂ.ಗಳಿಂದ ಗರಿಷ್ಠ 15-20 ಲಕ್ಷ ರೂ.ವರೆಗಿನ ಹೋರಿಗಳು, ಹಸುಗಳು ಬಂದು ಸೇರಿವೆ.
ಈಗಾಗಲೆ ದನಗಳ ಜಾತ್ರೆಯಲ್ಲಿ ರಾಸುಗಳ ಮಾರಾಟ ಮತ್ತು ಖರೀದಿ ಬಲು ಜೋರಾಗಿ ನಡೆದಿದ್ದು, ರೈತರುಗಳು ರಾಸುಗಳ ಗುಣಗಾನ ಹಾಗೂ ರಾಸುಗಳಲ್ಲಿ ಇರುವ ತಪ್ಪುಗಳನ್ನು ಹುಡುಕಿ ಅಲ್ಲಗಳೆಯುವಿಕೆ ಮಾಡುತ್ತಿರುವುದು ಸಹ ಸಾಮಾನ್ಯವಾಗಿದೆ.
ತಮಗೆ ಗಿಟ್ಟಿದ ದರದಲ್ಲಿ ರೈತರು ರಾಸುಗಳನ್ನು ಖರೀದಿಸಿ ತಮ್ಮ ಊರುಗಳಿಗೆ ಟೆಂಪೆÇೀ ಸೇರಿದಂತೆ ಸರಕು ಸಾಗಣೆ ವಾಹನಗಳಲ್ಲಿ ಕೊಂಡೊಯ್ಯುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.
ಜಾತ್ರೆಗೆ ಬಂದಿರುವ ರಾಸುಗಳಿಗೆ ಯಾವುದೇ ರೋಗ ರುಜಿನಗಳು ಅಂಟದಂತೆ ಪಶುಪಾಲನಾ ಇಲಾಖೆ ವತಿಯಿಂದ ಲಸಿಕೆ ಹಾಕುವ ವ್ಯವಸ್ಥೆಯನ್ನು ಮಾಡಲಾಗಿದೆ.
ಸಿದ್ದಗಂಗೆ ಜಾತ್ರೆಯಲ್ಲಿ ರೈತರು ಮತ್ತು ಜಾನುವಾರುಗಳಿಗೆ ಮಾಡಿರುವ ಮೂಲಭೂತ ಸೌಕರ್ಯದ ವ್ಯವಸ್ಥೆ, ಊಟದ ವ್ಯವಸ್ಥೆಯನ್ನು ಕಂಡು ಬೇರೆ ಜಿಲ್ಲೆಗಳ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರದರ್ಶನ-ಬಹುಮಾನ :
ಪ್ರತಿ ವರ್ಷದಂತೆ ಈ ಬಾರಿಯೂ ಸಿದ್ದಗಂಗೆ ದನಗಳ ಜಾತ್ರೆಗೆ ಬರುವ ಉತ್ತಮ ರಾಸುಗಳ ಪ್ರದರ್ಶನ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ.
ಜಾತ್ರೆಯಲ್ಲಿ ಸೇರಿರುವ ಉತ್ತಮ ರಾಸುಗಳ ಆಯ್ಕೆಯಾಗಿ ಜಾನುವಾರುಗಳ ಪೆರೇಡ್ ಸಹ ನಡೆಸಲಾಗುತ್ತದೆ. ಜಿಲ್ಲೆಯ ಜನ ಮಾತ್ರವಲ್ಲದೆ ವಿವಿಧ ಜಿಲ್ಲೆಗಳ ಸಾವಿರಾರು ಜನ ಈ ಸಂಭ್ರಮನವನ್ನು ಕಣ್ತುಂಬಿಕೊಳ್ಳಲು ಆಗಮಿಸಲಿದ್ದು, ಪಶುಪಾಲನಾ ಇಲಾಖೆಯ ವೈದ್ಯರು, ಜಾತ್ರೆ ಸಮಿತಿ ಸದಸ್ಯರು ಹಾಗೂ ತಜ್ಞರು ಇದರ ತೀರ್ಪುಗಾರರಾಗಿರುತ್ತಾರೆ
ಕಳೆದ 40 ವರ್ಷದಿಂದ ನಾನು ಸಿದ್ದಗಂಗೆ ದನಗಳ ಜಾತ್ರೆಗೆ ಬರುತ್ತಿದ್ದೇನೆ. ಅಂದಿನಿಂದಲೂ ಅತ್ಯಂತ ಹೆಚ್ಚಿನ ಬೆಲೆಯ ಹೋರಿಗಳನ್ನೆ ತಂದು ಮಾರಾಟ ಮಾಡುತ್ತಿದ್ದೇನೆ.
ಈ ಬಾರಿ 8 ಲಕ್ಷ ರೂ. ಬೆಲೆಯ ಹೋರಿಗಳನ್ನು ಮಾರಾಟ ಮಾಡಲು ಬಂದಿದ್ದೇನೆ. ಶ್ರೀಕ್ಷೇತ್ರದಲ್ಲಿ ಊಟದ ವ್ಯವಸ್ಥೆ, ಜಾಗದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಒದಗಿಸಲಾಗಿದೆ.
– ಹೊನ್ನಗಂಗಯ್ಯ, ವಿರೂಪಸಂದ್ರ, ರಾಮನಗರ ಜಿಲ್ಲೆ ರೈತ.
ರಾಸುಗಳಿಗೆ ಬಿಸಿಲು ಬೀಳಬಾರದೆಂದು ಶಾಮಿಯಾನದ ವ್ಯವಸ್ಥೆ ಮಾಡಲಾಗಿದೆ. ಜಾತ್ರೆಗೆ ಬಂದಿರುವುದು ತುಂಬಾ ಖುಷಿ ತಂದಿದೆ. ಇಂತಹ ದನಗಳ ಜಾತ್ರೆ, ಉತ್ಸವಗಳು ನಡೆಯುತ್ತಿರಬೇಕು.
-ಚಂದ್ರಶೇಖರ್, ಮಂಡ್ಯ ರೈತ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ