ಹುಬ್ಬಳ್ಳಿ:
ನಟಿ ರನ್ಯಾ ರಾವ್ ಪ್ರಕರಣದಲ್ಲಿ ರಾಜ್ಯ ಸರ್ಕಾರ ನಡೆಯನ್ನು ಗಮನಿಸಿದರೆ ಯಾರದ್ದೊ ರಕ್ಷಣೆಗೆ ನಿಂತಂತಿದೆ. ಅದಕ್ಕಾಗಿಯೇ ಆರೋಪಿಗೆ ಸ್ಟೇಟ್ ಪ್ರೋಟೋಕಾಲ್ ಒದಗಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಪಿಗೆ ಪ್ರೋಟೋಕಾಲ್ ಒದಗಿಸುವ ಅಗತ್ಯವೇನಿತ್ತು. ಯಾರ ಒತ್ತಡಕ್ಕೆ ಮಣಿದು ಸ್ಟೇಟ್ ಪ್ರೊಟೋಕಾಲ್ ನೀಡಲಾಗಿದೆ ಎಂದು ಪ್ರಶ್ನಿಸಿದ ಅವರು, ರಾಜ್ಯ ಸರ್ಕಾರ ಚಿನ್ನದ ಕಳ್ಳಸಾಗಾಣಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಸೂಕ್ತ ತನಿಖೆ ನಡೆಸುವ ಮೂಲಕ ಸತ್ಯವನ್ನು ಹೊರ ತರಬೇಕೇ ಹೊರತು, ಗೃಹ ಸಚಿವರು ಯಾವುದೇ ಒತ್ತಡಕ್ಕೆ ಮಣಿಯಬಾರದು. ಇದೊಂದು ದೇಶದ್ರೋಹದ ಪ್ರಕರಣವಾದ್ದರಿಂದ ಮುಲಾಜಿಲ್ಲದೇ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.
ನಟಿ ರನ್ಯಾ ಅಕ್ರಮವಾಗಿ ತಂದ ಚಿನ್ನ ಎಲ್ಲಿಗೆ ಹೋಗುತ್ತಿತ್ತು. ದೇಶದ್ರೋಹಿಗಳಿಗಾ, ನಕ್ಸಲ್‌ಗಳಿಗಾ, ಎಲ್ಲಿಗೆ ಹೋಗುತ್ತಿತ್ತು? ಎಂಬುದನ್ನು ಸ್ಪಷ್ಟಪಡಿಸಲಿ. ಇಲ್ಲವಾದರೆ, ಯಾವ ಮಂತ್ರಿಯನ್ನು ರಕ್ಷಿಸಲು ಹೊರಟಿದ್ದಾರೆ ಎಂದಾದರೂ ತಿಳಿಸಲಿ. ಪ್ರಕರಣದಲ್ಲಿ ರಾಜ್ಯದ ಡಿಐಜಿ ಮಗಳು ಇದ್ದಾರೆ. ಸರ್ಕಾರವೂ ಶಾಮೀಲಾಗಿದೆ ಎಂಬ ಆರೋಪವಿದ್ದಾಗ ಸಿಐಡಿ ತನಿಖೆಗೆ ನೀಡುವುದು ಸೂಕ್ತವಲ್ಲ. ಒಬ್ಬ ಡಿಐಜಿಯನ್ನು, ಸಿಐಡಿ ಎಸ್ಪಿ ತನಿಖೆ ಮಾಡಲು ಸಾಧ್ಯವೇ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ನೇಮಕವಾಗಿರುವ ಸದಸ್ಯರಿಗೆ ಸರ್ಕಾರ ಕೋಟಿ ಕೋಟಿ ಸಂಬಳ ನೀಡುತ್ತಿದೆ. ಜನರಿಂದ ಆಯ್ಕೆಯಾದ ಜನಪತ್ರಿನಿಧಿಗಳು, ಮಂತ್ರಿಗಳು, ಅಧಿಕಾರಿಗಳು ಇದ್ದಾಗ ಸದಸ್ಯರ ಕೆಲಸವೇನು. ಸರ್ಕಾರವೇನು ಕತ್ತೆ ಕಾಯುತ್ತಿದೆಯಾ. ಸರ್ಕಾರದ ಈ ನಡೆಯನ್ನು ಜನ, ಪತ್ರ, ಇ ಮೇಲ್, ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಬೇಕು. ವಿರೋಧ ವ್ಯಕ್ತಪಡಿಸಬೇಕು. ಸುಳ್ಳು ರಾಮಯ್ಯನ ಆಡಳಿತದಲ್ಲಿ ಕಾಂಗ್ರೆಸ್ ಶಾಸಕರು, ಸಚಿವರೂ ಸಂತೋಷವಾಗಿಲ್ಲ. ಇದು ರಾಜ್ಯದ ಜನರಿಗೆ ಕಾಂಗ್ರೆಸ್ ಬಗೆಯುತ್ತಿರುವ ದ್ರೋಹ ಎಂದು ಕಿಡಿಕಾರಿದರು.
ಧರ್ಮಾಧಾರಿತ ಮೀಸಲಾತಿ ಕುರಿತು ಮಾತನಾಡಿದ ಅವರು, ಈ ಬಗ್ಗೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ಈ ಬಗ್ಗೆ ನಾವೂ ಕಾನೂನು ಹೋರಾಟ ಮಾಡುತ್ತೇವೆ. ಜಮೀರ್ ಅಹ್ಮದ್ ಖಾನ್ ಹೇಳಿಕೆಯಿಂದ ಈ ಹಿಂದೆ ಎಷ್ಟು ಆತ್ಮಹತ್ಯೆಗಳಾಗಿವೆ ಎಂಬುದನ್ನು ಸರ್ಕಾರ
ಪರಾಮರ್ಷಿಸಲಿ ಎಂದರು.
