ಬೆಂಗಳೂರು
ರಾಜಧಾನಿ ಬೆಂಗಳೂರಿನ ನಮ್ಮ ಮೆಟ್ರೋ ಪಾಲಿಗೆ ಮಾರ್ಚ್21 ಕರಾಳ ದಿನ ಎನ್ನಬಹುದು. ಕಾರಣ ಆ ದಿನ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಕಾನೂನು ವಿದ್ಯಾರ್ಥಿಯೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಹಾಗಾದರೆ ಆತನನ್ನು ಅಲ್ಲಿನ ಸಿಬ್ಬಂದಿ ತಡೆಯಲಿಲ್ಲವೇ? ಯೆಲ್ಲೋ ಲೈನ್ ದಾಟದಂತೆ ನೋಡಿಕೊಳ್ಳುವ ಸಿಬ್ಬಂದಿ ಅಂದು ಎಲ್ಲಿದ್ದರು? ಅಂದಿನ ಘಟನೆ ಬಗ್ಗೆ ಸೆರೆಯಾದ ಸಿಸಿಟಿವಿ ದೃಶ್ಯಗಳು ಹೇಳೋದೇನು? ತಿಳಿಯಿರಿ.
ಸಾಮಾನ್ಯವಾಗಿ ಮೆಟ್ರೋ ನಿಲ್ದಾಣಗಳಲ್ಲಿ ನಿಗದಿತ ಸ್ಥಳ ಬಿಟ್ಟು ಪ್ರಯಾಣಿಕರು ಹಳಿಗಳತ್ತ ಬಂದರೆ, ಮುಂದೆ ಬಂದು ನಿಂತರೆ ಸಾಕು, ವಿಸಿಲ್ ಹೊಡೆದು BMRCL ಸಿಬ್ಬಂದಿ ಎಚ್ಚರಿಸುತ್ತಾರೆ. ಹಿಂದೆ ಸರಿದು ನಿಲ್ಲುವಂತೆ ಸೂಚಿಸುತ್ತಾರೆ. ಈ ಹಿಂದೆ ಮೆಟ್ರೋ ಟ್ರ್ಯಾಕ್‌ಗೆ ಇಳಿದ ಘಟನೆಯಲ್ಲಿ ಕ್ಷಣಾರ್ಧದಲ್ಲಿ ಟ್ರ್ಯಾಕ್ ಪವರ್ ಕಡಿತ ಗೊಳಿಸಿದ ಉದಾಹರಣೆಗಳು ನಮ್ಮ ಮುಂದಿವೆ.
ಇತ್ತೀಚೆಗೆ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ನಡೆದ ಆತ್ಯಹತ್ಯೆಯಲ್ಲಿ ಹಾಗಾಗಲಿಲ್ಲ. ಮುಂಬೈ ಮೂಲದ ಧ್ರುವ್ ಜತಿನ್ ಠಕ್ಕರ್ ಬೆಂಗಳೂರಿನ ಲಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಅಂಕಗಳು ಕಡಿಮೆ ಬಂದ ಕಾರಣ ಮನೆಯವರಿಗೆ ಕೊನೆಯದಾಗಿ ಕರೆ ಮಾಡಿ, ಲೊಕೇಷನ್ ಶೆರ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಲೆ ಕತ್ತರಿಸಿದ ರೀತಿಯಲ್ಲಿ ಶವ ದೊರೆತಿದೆ ಎಂದು ಪೊಲೀಸ್ ಮೂಲಗಳು ಖಚತಿಪಡಿಸಿವೆ.
ಮೃತ ವಿದ್ಯಾರ್ಥಿ ಧ್ರುವ್ ಜತಿನ್ ಠಕ್ಕರ್ ಆತ್ಮಹತ್ಯೆ ಮುನ್ನ ನಿಲ್ದಾಣದಲ್ಲಿ ಓಡಾಡಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ಯುವಕ ನಿಲ್ದಾಣಕ್ಕೆ ಬಂದವನೇ ಒಂದು ಕಡೆ ನಿಲ್ಲದೇ ಸ್ಥಳ ಬದಲಾವಣೆ ಮಾಡುತ್ತಿದ್ದ ಎನ್ನಲಾಗಿದೆ. ಈ ಘಟನೆ ಕೆಲವು ಗೊಂದಲ ಸೃಷ್ಟಿಸಿದೆ.
ಯುವಕ ಹಳದಿ ಟೀ ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿದ್ದ. ಪ್ಲಾಟ್‌ಫಾರ್ಮ್‌ನ ದೂರದ ಮೂಲೆಯಲ್ಲಿ ನಿಂತು ರೈಲಿನ ಆಗಮನಕ್ಕಾಗಿ ಕಾಯುತ್ತಿರುವ ದೃಶ್ಯ ಸೆರೆಯಾಗಿದೆ. ಇನ್ನೇನು ರೈಲು ಬರಲು ಸುಮಾರು 15 ಸೆಕೆಂಡುಗಳ ಮೊದಲು ಆತ ಟ್ರ್ಯಾಕ್ ಕಡೆಗೆ ತೆರಳಿ ನೋಡ ನೋಡುತ್ತಿದ್ದಂತೆ ಟ್ರ್ಯಾಕ್‌ಗೆ ಇಳಿದು ಅಡ್ಡಲಾಗಿ ಮಲಗಿ ಪ್ರಾಣ ಬಿಟ್ಟಿದ್ದಾನೆ.
ಆ ಬದಿಯಲ್ಲಿ ಮತ್ತೊಂದು ಪ್ಲಾಟ್‌ಫಾರ್ಮ್‌ನಲ್ಲಿ ಪ್ರಯಾಣಿಸುತ್ತಿದ್ದ ಒಬ್ಬ ಮಹಿಳಾ ಪ್ರಯಾಣಿಕರು ಈತ ಟ್ರ್ಯಾಕ್‌ಗೆ ಜಿಗಿದಿದ್ದನ್ನು ನೋಡಿ, ಆತುರದಿಂದ ಹೊರ ನಡೆದಿದ್ದಾರೆ. ಈ ವೇಳೆ ಅವರು ಸಿಬ್ಬಂದಿಯನ್ನು ಕೂಗಿರುವುದು ಸೆರೆಯಾಗಿದೆ.
ಮೆಟ್ರೊ ಸಿಬ್ಬಂದಿಯು ನಿಲ್ದಾಣದಲ್ಲಿ ನಿಗಾ ಇಡುವಲ್ಲಿ, ಇಲ್ಲವೇ ವಿದ್ಯಾರ್ಥಿಯ ಚಲನವಲನ ಮೇಲ್ವಿಚಾರಣೆ ಮಾಡಲು ವಿಫಲರಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವಿದ್ಯಾರ್ಥಿ ಟ್ರ್ಯಾಕ್ ಬಳಿ ಹೋಗುವಾಗಲು ಯಾರು ನೋಡಿಲ್ಲ ಎಂಬುದನ್ನು ಸಿಸಿಟಿವಿ ದೃಶ್ಯಾವಳಿ ಹೇಳುತ್ತವೆ.
ಅತೀ ಕಡಿಮೆ ಸಮಯದಲ್ಲಿ ಈ ಘಟನೆ ನಡೆದಿದೆ. ಹೀಗಾಗಿ ಮೆಟ್ರೋ ಸಿಬ್ಬಂದಿಯು ಯುವಕನನ್ನು ತಡೆಯಲು ಸಾಧ್ಯವಾಗಿಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ನಮ್ಮ ಸಿಬ್ಬಂದಿ ನಿಲ್ದಾಣದಲ್ಲಿದ್ದ ಪ್ರಯಾಣಿಕರ ಗುಂಪನ್ನು ನಿರ್ವಹಿಸುವಲ್ಲಿ ನಿರತಾದರು. ಹತ್ತಿರವೇ ಇದ್ದ ಸಿಬ್ಬಂದಿ ನೋಡಿ ಗಮನಿಸುವಷ್ಟರಲ್ಲಿಯೇ ಘಟನೆ ನಡೆದು ಹೋಗಿತ್ತು. ಮೃತ ಯುವಕ ದೂರದ ಮೂಲೆಯೊಂದರಿಂದ ಮೆಟ್ರೋ ಟ್ರ್ಯಾಕ್‌ಗೆ ಇಳಿದಿದ್ದಾರೆ. ಹೀಗಾಗಿ ತಡೆಯಲು ಅಸಾಧ್ಯವಾಗಿದೆ ಎಂದು ಅವರು ‘ಡಿಎಚ್’ಗೆ ಪ್ರತಿಕ್ರಿಯಿಸಿದ್ದಾರೆ.
ಮುಂದಿನ ದಿನಮಾನಗಳಲ್ಲಿ ಇಂತಹ ಘಟನೆಗಳನ್ನು ತಡೆಯಲು BMRCL ಮೆಟ್ರೋ ನಿಲ್ದಾಣಗಳಲ್ಲಿ ಅತ್ಯಧಿಕ ಜನರನ್ನು ನಿಯೋಜಿಸಬೇಕಿದೆ. ಇದರಿಂದ ನಿರ್ವಹಣಾ ವೆಚ್ಚ ಹೆಚ್ಚಾಗಬಹುದು. ಜನ ಹೆಚ್ಚಿರುವ ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚು ಸಿಬ್ಬಂದಿ ನಿಯೋಜಿಸಬೇಕು. ಪ್ರಯಾಣಿಕ ನಡವಳಿಕೆ, ಚಲವಲನ ತಿಳಿಯಲಿ ಗಾರ್ಡ್ಸ್‌ಗೆ ತರಬೇತಿ ನೀಡುವ ಕಾರ್ಯಕ್ರಮದಂತ ಕ್ರಮ ಕೈಗೊಂಡಿದ್ದೇವೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು.