ಬೆಂಗಳೂರು
ಬೆಂಗಳೂರಿನಲ್ಲಿ ಜಿ-20 ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್ಗಳ ಸಭೆ ಆರಂಭವಾಗಲಿದೆ.
ಮೊದಲ ಜಿ-20 ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್ಗಳ ಸಭೆ ಹಿನ್ನೆಲೆಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬೆಂಗಳೂರಿನಲ್ಲಿಂದು ಅಮೆರಿಕ ಹಣಕಾಸು ಕಾರ್ಯದರ್ಶಿ ಜೆನೆಟ್ ಎಲ್ ಯೆಲ್ಲೆನ್ ಅವರನ್ನು ಭೇಟಿ ಮಾಡಿದ್ದು, ಉಭಯ ನಾಯಕರು ಜಿ-20 ಹಣಕಾಸು ಸಭೆಯ ಆದ್ಯತೆ ಕುರಿತು ವಿಚಾರ ವಿನಿಮಯ ನಡೆಸಿದರು ಎಂದು ಹಣಕಾಸು ಸಚಿವಾಲಯ ಟ್ವೀಟ್ ಮಾಡಿದೆ.
ನಿರ್ಮಲಾ ಸೀತಾರಾಮನ್ ಇಟಲಿಯ ಆರ್ಥಿಕ ಮತ್ತು ಹಣಕಾಸು ಸಚಿವ ಗಿಯಾನ್ ಕಾರ್ಲೋ ಗಿಯೊರ್ ಗೆಟ್ಟಿ ಅವರನ್ನು ಸಹ ಭೇಟಿ ಮಾಡಿದ್ದು, ಭಾರತ ಅಧ್ಯಕ್ಷತೆ ವಹಿಸಿರುವ ಜಿ-20 ಯಶಸ್ಸಿಗೆ ಇಟಲಿ ಸಚಿವರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಭೆ ಆರಂಭಕ್ಕೂ ಮುನ್ನ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇಂದು ಬೆಳಗ್ಗೆ ಕ್ರಿಪ್ಟೋ ಆಸ್ತಿ ಮತ್ತು ನೀತಿ ನಿರೂಪಣೆ ಕುರಿತು ಸೆಂಟ್ರಲ್ ಬ್ಯಾಂಕ್ ಗವರ್ನರ್ಗಳು ಚರ್ಚಿಸಿದರು. ನಂತರ ಡಿಜಿಟಲ್ ಸಾರ್ವಜನಿಕ ಮೂಲ ಸೌಕರ್ಯ ಕುರಿತು ಸಚಿವರ ಮಟ್ಟದ ಸಭೆ ನಡೆಯಿತು. ಮಧ್ಯಾಹ್ನ ಗಡಿಯಾಚೆಗಿನ ಪಾವತಿ ವ್ಯವಸ್ಥೆ ಹೆಚ್ಚಿಸಲು ಸೆಂಟ್ರಲ್ ಬ್ಯಾಂಕ್ ಉಪ ಗವರ್ನರ್ ಗಳು ಚರ್ಚೆ ನಡೆಸಲಿದ್ದಾರೆ.
ಜಿ-20 ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್ಗಳು ಹಾಗೂ ವಿವಿಧ ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ ಸುಮಾರು 500 ವಿದೇಶಿ ಪ್ರತಿನಿಧಿಗಳು ಬೆಂಗಳೂರಿಗೆ ಆಗಮಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ