ಕೇಂದ್ರ ಬಜೆಟ್: ಚುನಾವಣೆ ಕೇಂದ್ರಿತವೇ? ಜನಸ್ಪರ್ಶಿಯಾಗುವುದೇ?

ತುಮಕೂರು:

ತುಮಕೂರಿಗೆ ಮೆಟ್ರೋ, ಭದ್ರಾ ಮೇಲ್ದಂಡೆ, ಜವಳಿ ಪಾರ್ಕ್, ರೈಲ್ವೆ ಯೋಜನೆ ವೇಗದ ನಿರೀಕ್ಷೆ

ಕಳೆದೆರೆಡು ವರ್ಷಗಳಿಂದ ಕೋವಿಡ್ ಅಲೆಯಿಂದ ತತ್ತರಿಸಿರುವ ದೇಶದ ಕೃಷಿ, ಕೈಗಾರಿಕೆ, ಸಹಕಾರ, ವಾಣಿಜ್ಯ, ಬ್ಯಾಂಕಿಂಗ್ ಸೇರಿ ವಿವಿಧ ವಲಯಗಳಿಗೆ ಇಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್ ಬೂಸ್ಟರ್ ಆಗುವುದೇ? ಇಲ್ಲವೇ ದೇಶದ ಮುಂಬರುವ ರಾಜಕೀಯ ಭವಿಷ್ಯ ನಿರ್ಧರಿಸಿರುವ ಪಂಚರಾಜ್ಯ ಚುನಾವಣೆಗೆ ಭರವಸೆಯ ಯೋಜನೆಗಳ ಘೋಷಣೆಗೆ ಸೀಮಿತವಾಗುವುದೇ ಎಂಬ ಚರ್ಚೆಯನ್ನು ಹುಟ್ಟಿಹಾಕಿದೆ.

ಶತಕೋಟಿ ದಾಟಿದ ದೇಶದ ಜನರ ಚಿತ್ತ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮೇಲೆ ನೆಟ್ಟಿದ್ದು, ಕೋವಿಡ್‍ನೊಂದಿಗೆ ತೈಲ ಬೆಲೆ, ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ನಲುಗಿರುವ ಜನಸಾಮಾನ್ಯವರ್ಗಕ್ಕೆ ತೆರಿಗೆ ಕಡಿತದ ಲಾಭವನ್ನು ಕೇಂದ್ರ ಸರಕಾರ ಕೊಡುವುದೇ ಎಂಬ ನಿರೀಕ್ಷೆ ಶ್ರೀ ಸಾಮಾನ್ಯರಲ್ಲಿ ಹೆಚ್ಚಾಗಿದೆ.

ಮತ್ತೊಂದೆಡೆ ಏರುತ್ತಿರುವ ಹಣದುಬ್ಬರ, ನಿರುದ್ಯೋಗ ಪ್ರಮಾಣ, ಬಡತನ, ಅಗತ್ಯ ವಸ್ತುಗಳ ಬೆಲೆಯೇರಿಕೆ, ಕುಸಿಯುತ್ತಿರುವ ಜಿಡಿಪಿಗೆ ಕಡಿವಾಣ, ಶಿಕ್ಷಣ, ಆರೋಗ್ಯ, ಸಾರಿಗೆ ಸೇರಿದಂತೆ ಮೂಲ ಸೌಕರ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು, ಕೃಷಿ, ಕೈಗಾರಿಕೆ, ಸಹಕಾರಿ ಕ್ಷೇತ್ರಗಳ ಪುನಃಶ್ಚೇತನಕ್ಕೆ ಒತ್ತು ಹಾಗೂ ತೆರಿಗೆ ನೀತಿಯಲ್ಲಿ ಸರಳೀಕರಣ, ದುಬಾರಿಯಾದ ಗೃಹ ಬಳಕೆ ಎಲೆಕ್ಟ್ರಾನಿಕ್ ಉಪಕರಣಗಳು, ಆಟೊಮೊಬೈಲ್ ವಾಹನಗಳ ದರ ಇಳಿಕೆ ಕ್ರಮಗಳು, ಬಜೆಟ್‍ನಲ್ಲಿ ಷೋಷಣೆಯಾಗುವುದೇ ಎಂಬ ನಿರೀಕ್ಷೆಯನ್ನು ಗರಿಗೆದರಿಸಿದೆ.

ಐವರು ಸಚಿವರು, 25 ಸಂಸದರನ್ನು ಕೊಟ್ಟ ರಾಜ್ಯಕ್ಕೆ ಧಕ್ಕುವುದೇನು?:

ಪ್ರಮುಖವಾಗಿ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ 25 ಜನ ಬಿಜೆಪಿ ಸಂಸದರು, ಅವರಲ್ಲಿ ಐವರು ಕೇಂದ್ರ ಸಚಿವರಿದ್ದು, ಹಣಕಾಸು ಸಚಿವರು ರಾಜ್ಯವನ್ನೇ ಪ್ರತಿನಿಧಿಸಿರುವುದರಿಂದ ಬಂಪರ್ ಕೊಡುಗೆ ಸಿಗುವುದೇ ಕಾದು ನೋಡಬೇಕಾಗಿದೆ. ವಿಶೇಷವಾಗಿ ರಾಜ್ಯದ ನೀರಾವರಿ ಯೋಜನೆಗಳಾದ ಮೇಕೆದಾಟು ಯೋಜನೆ, ಭದ್ರಾಮೇಲ್ದಂಡೆ, ಕಳಸಾಬಂಡೂರಿ ನಾಲಾ ಯೋಜನೆಗೆ ಅನುದಾನ ಮೀಸಲು,

ತುಮಕೂರು-ದಾವಣಗೆರೆ, ತುಮಕೂರು-ರಾಯದುರ್ಗ ಸೇರಿದಂತೆ ರಾಜ್ಯದ ಹಲವು ರೈಲ್ವೆ ಯೋಜನೆಗಳಿಗೆ ವೇಗ, ಮೆಟ್ರೊ ವಿಸ್ತರಣೆ, ಇನ್ನಷ್ಟು ನಗರಗಳಿಗೆ ಸ್ಮಾರ್ಟ್‍ಸಿಟಿ, ಎನ್‍ಇಪಿ ಅನುಷ್ಠಾನ, ಕನ್ನಡಭಾಷೆ ಶಾಸ್ತ್ರೀಯಸ್ಥಾನಮಾನಕ್ಕೆ ವಿಶೇಷ ಅನುದಾನ, ಹೊಸ ವಿಮಾನನಿಲ್ದಾಣಗಳ ಸ್ಥಾಪನೆ, ಕೃಷಿ ರೈತರ ಸ್ವಾವಲಂಬನೆ, ಕೃಷಿ ಪೂರಕ ಕೈಗಾರಿಕೆಗಳು, ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆಗಳು ಪ್ರಕಟವಾಗುವುದೇ ಎಂಬ ನಿರೀಕ್ಷೆಯಲ್ಲಿ ರಾಜ್ಯದ ಜನತೆಯಿದ್ದಾರೆ.

ಜಿಲ್ಲೆಯ ನಿರೀಕ್ಷೆಗಳು:

ವಿಶೇಷವಾಗಿ ತುಮಕೂರು ಜಿಲ್ಲೆಗೆ ಸಂಬಂಧಿಸಿದಂತೆ ಕೊರಟಗೆರೆ, ಮಧುಗಿರಿ, ಶಿರಾ ಭಾಗವನ್ನು ಕೇಂದ್ರಿಕರಿಸಿ ಸ್ಥಾಪಿಸಬೇಕೆಂದಿರುವ ಜವಳಿಪಾರ್ಕ್, ಬಯಲುಸೀಮೆ ನೀರಿನ ದಾಹ ನೀಗಿಸುವ ಭದ್ರಾ ಮೇಲ್ದಂಡೆಯೋಜನೆ ರಾಷ್ಟ್ರೀಯ ಯೋಜನೆಗೆ ಅಧಿಕೃತ ಘೋಷಣೆ, ತುಮಕೂರು-ರಾಯದುರ್ಗ, ತುಮಕೂರು-ದಾವಣಗೆರೆ ರೈಲುಮಾರ್ಗಕ್ಕೆ ವೇಗ, ತುಮಕೂರಿನ ವಸಂತಾನರಸಾಪುರ ಕೈಗಾರಿಕಾ ಪ್ರದೇಶದವರೆಗೂ ಮೆಟ್ರೊ ವಿಸ್ತರಣೆ, ವಿಮಾನ ನಿಲ್ದಾಣ,

ಮೆಗಾ ಡೇರಿ ಸ್ಥಾಪನೆ, ಇಸ್ರೋ ಕಾರ್ಯಾರಂಭ, ಸ್ಮಾರ್ಟ್ ಸಿಟಿ ಯೋಜನೆಯಡಿ ಮತ್ತಷ್ಟು ಅನುದಾನ ಸೇರಿದಂತೆ ಹಲವು ನಿರೀಕ್ಷೆಗಳನ್ನು ಜಿಲ್ಲೆಯ ಜನತೆ ಇಟ್ಟುಕೊಂಡಿದ್ದಾರೆ. ಜಿಲ್ಲೆಯನ್ನು ಪ್ರತಿನಿಧಿಸುವ ಮೂವರು ಸಂಸದರಲ್ಲಿ ಇಬ್ಬರು ಬಿಜೆಪಿಯವರಿದ್ದು ಒಬ್ಬರು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರಾಗಿದ್ದಾರೆ. ಐವರು ಬಿಜೆಪಿ ಶಾಸಕರಿದ್ದಾರೆ. ಹೀಗಾಗಿ ಜಿಲ್ಲೆಗೆ ಹೆಚ್ಚಿನ ಕೊಡುಗೆಗಳು ಸಿಗಲಿದೆಯೆಂಬ ನಿರೀಕ್ಷೆ ಜಿಲ್ಲೆಯ ಜನರದ್ದಾಗಿದೆ.

ಇಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್ ಕುರಿತು ವಿವಿಧ ಕ್ಷೇತ್ರದ ಪ್ರಮುಖರು ತಮ್ಮ ನಿರೀಕ್ಷೆ, ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದು  ಹೀಗಿವೆ.

ಭಾರತೀಯರ ತುಟಿಗೆ ತುಪ್ಪ ಸವರುವ ಬಜೆಟ್ ಮಂಡನೆಯಾಗಲಿದೆಯಷ್ಟೇ.

ಪಂಚರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ಮಂಡನೆಯಾಗುತ್ತಿರುವ ಈ ಬಜೆಟ್ 135 ಕೋಟಿ ಭಾರತೀಯರ ತುಟಿಗೆ ತುಪ್ಪ ಸವರುವ ಬಜೆಟ್ ಅಷ್ಟೇ, ಬೇರೆನೂ ಇರೋಲ್ಲ. ಆಂತರಿಕ ವೆಚ್ಚ ಮಾಡ ಹೆಚ್ಚಳ ಮಾಡೋದೆ ಸಾಲ ಮಾಡಿ ಅನುದಾನ ಹಂಚಿಕೆ ಮಾಡೋದು ಸಾಲ ಮಾಡಿ ಹಬ್ಬ ಮಾಡಿದಂತೆ. ದೇಶದ ಪರಿಸ್ಥಿತಿ ಬದಲಾಯಿಸಲಾಗದ ಮಟ್ಟಿಗೆ ಹಾಳಾಗಿದೆ.

ಪೆಗಾಸಿಸ್ ಹಗರಣ ನೋಡಿದರೆ ಇದು ಪ್ರಜಾಪ್ರಭುತ್ವವೇ ಎಂಬ ಅನುಮಾನ ಮೂಡುತ್ತಿದೆ. 2018ಕ್ಕೆ ಜಿಲ್ಲೆಯ ಎಚ್‍ಎಎಲ್‍ನಿಂದ ಹೆಲಿಕ್ಯಾಪ್ಟರ್ ಆರುತ್ತವೆ ಎಂದಿದ್ದರು, 6 ವರ್ಷವಾದರೂ ರೆಕ್ಕಿಬಿಚ್ಚಿಲ್ಲ. ಇಸ್ರೊ, ನೀರಾವರಿ ಯೋಜನೆ ಎಲ್ಲವೂ ಹುಸಿಯಾಗಿದೆ. ಬಿಜೆಪಿ ಪ್ರಣಾಳಿಕೆಯ ತದ್ದಿರುದ್ದ ನಡೆ ಕೇಂದ್ರ ಸರಕಾರ ಅನುಸರಿಸುತ್ತಿದೆ.ಸಣ್ಣ ಕೈಗಾರಿಕೆಗಳು ಬಾಗಿಲು ಹಾಕಿ ವರುಷಗಳೇ ಕಳೆಯುತ್ತಿವೆ. ಇದಕ್ಕೆ ಬಜೆಟ್‍ನಲ್ಲಿ ಪರಿಹಾರ ಸಿಗುವುದೇ?

-ಟಿ.ಬಿ.ಜಯಚಂದ್ರ, ಕಾನೂನು, ಕೃಷಿ ಖಾತೆ ಮಾಜಿ ಸಚಿವರು.

ರೈತಪರ ಬಜೆಟ್ ನಿರೀಕ್ಷೆಯಿಲ್ಲ

ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು 700 ಜನ ರೈತರ ಸಾವಿಗೆ ಕಾರಣವಾಗಿ ನಂತರ ವಾಪಸ್ ಪಡೆದ ಕೇಂದ್ರ ಸರಕಾರ ಕೃಷಿಪರವಾದ ಬಜೆಟ್ ಮಂಡಿಸುತ್ತದೆಂಬ ನಿರೀಕ್ಷೆ ಇಲ್ಲ. ರೈತರ ಸಾಲ ಮನ್ನಾ, ಸ್ವಾಮಿನಾಥನ್ ವರದಿ ಜಾರಿಗೆ ತರುತ್ತೇವೆಂದು ಆಡಳಿತಕ್ಕೆ ಬಂದ ಪ್ರಧಾನಿ ಮೋದಿಯವರು ಆ ಬಗ್ಗೆ ಚಕಾರವೆತ್ತುತ್ತಿಲ್ಲ.

ರಾಜ್ಯದವರೇ ಕೇಂದ್ರದ ಕೃಷಿ ಖಾತೆ ರಾಜ್ಯ ಸಚಿವರಿದ್ದರೂ, ಕರ್ನಾಟಕದ ಕೃಷಿಕರಿಗೆ ಯಾವ ಲಾಭ ಆಗಿದೆ. ರೈತರು ಭರವಸೆ ಕಳೆದುಕೊಂಡಿದ್ದಾರೆ. ಪಂಚರಾಜ್ಯ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕೆಲವು ಯೋಜನೆಗಳನ್ನು ಪ್ರಕಟಿಸಬಹುದು ಬಿಟ್ಟರೆ, ಈ ಸರಕಾರ ಬರೀ ಕಾರ್ಪೋರೇಟ್ ಪರವಾಗಿಯೇ ಕಳೆದ 7 ವರ್ಷಗಳಿಂದ ನಿಂತಿದೆ. ಅಗತ್ಯವಸ್ತುಗಳು, ಕೃಷಿ ವೆಚ್ಚ ದುಬಾರಿಯಾಗಿರುವ ಈ ಸಂದರ್ಭದಲ್ಲಿ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ತೀರ್ಮಾನ ತೆಗೆದುಕೊಳ್ಳುತ್ತೇವೆಂದು ಹೇಳಿ ತಿಂಗಳಾದರೂ ಕ್ರಮವಾಗಿಲ್ಲ.

-ಅಳಿಲುಘಟ್ಟ ಗೋವಿಂದರಾಜು, ಜಿಲ್ಲಾ ರೈತ ಸಂಘದ ಅಧ್ಯಕ್ಷರು.

ಕೇಂದ್ರದ ಬಜೆಟ್ ಇಡೀ ದೇಶದ ಸಮಗ್ರ ಅಭಿವೃದ್ಧಿಯನ್ನು ಕೇಂದ್ರಿಕರಿಸಿ ಮಂಡನೆಯಾಗಲಿದೆ. ಜಿಲ್ಲೆಗೆ, ರಾಜ್ಯಕ್ಕೆ ಪ್ರತ್ಯೇಕವಾಗಿ ಅನುದಾನಗಳನ್ನು ಮೀಸಲಿರಿಸುವುದಿಲ್ಲ. ಕರ್ನಾಟಕಕ್ಕೆ ಹಲವು ಕೊಡುಗೆಗಳನ್ನು ಕೇಂದ್ರ ಸರಕಾರ ನೀಡುತ್ತಾ ಬಂದಿದ್ದು, ತುಮಕೂರಿಗೆ ಸ್ಮಾರ್ಟ್‍ಸಿಟಿ, ಎಚ್‍ಎಎಲ್, ನೀರಾವರಿ ಯೋಜನೆಗಳಿಗೆ ಅನುದಾನ ಎಲ್ಲವೂ ಕೇಂದ್ರದ ಕೊಡುಗೆಯೆ. ಎಲ್ಲಾ ವರ್ಗದವರಿಗೂ ಅನುಕೂಲಕರವಾದ ಯೋಜನೆಗಳು ಪ್ರಕಟವಾಗುವ ನಿರೀಕ್ಷೆ ಇದೆ.

-ಜಿ.ಬಿ.ಜ್ಯೋತಿಗಣೇಶ್, ಶಾಸಕ, ತುಮಕೂರು ನಗರ.

ತೆರಿಗೆ, ಕಡಿತ, ಪ್ರಕ್ರಿಯೆ ಸರಳೀಕರಣದ ನಿರೀಕ್ಷೆ

ಪ್ರಸ್ತುತ ಕೋವಿಡ್ ಸಂಕಷ್ಟದ ಕಾಲಘಟ್ಟದಲ್ಲಿ ಪ್ರತ್ಯಕ್ಷ, ಪರೋಕ್ಷ ಎಲ್ಲಾ ತೆರಿಗೆದಾರರು ತೆರಿಗೆ ಕಡಿತದ ನಿರೀಕ್ಷೆಯಲ್ಲಿದ್ದಾರೆ. ತೆರಿಗೆ ಪ್ರಕ್ರಿಯೆ ಸರಳೀಕರಣವಾಗಬೇಕು. ಪದೇ ಪದೇ ಐಟಿ ಸರ್ವರ್ ಪ್ರಾಬ್ಲಂನಿಂದಾಗಿ ದಿನಾಂಕ ವಿಸ್ತರಿಸಿದರೂ ಬಡ್ಡಿಯ ಹೊರೆ ತೆರಿಗೆದಾರರ ಮೇಲೆ ಹಾಕಲಾಗುತ್ತಿದೆ. ಇದಕ್ಕೆಲ್ಲ ಪರಿಹಾರವನ್ನು ಹಣಕಾಸು ಸಚಿವರು ಬಜೆಟ್‍ನಲ್ಲಿ ಘೋಷಿಸುವರೇ?.

   -ಟಿ.ಆರ್.ಆಂಜಿನಪ್ಪ, ಹಿರಿಯ ಲೆಕ್ಕ ಪರಿಶೋಧಕರು.ತುಮಕೂರು.

ಸಹಕಾರಿ ಬ್ಯಾಂಕ್‍ಗಳಲ್ಲಿ ಆರ್‍ಬಿಐನ ಅನಗತ್ಯ ಮಧ್ಯಪ್ರವೇಶ ತಪ್ಪಿಸಬೇಕು. ಸಹಕಾರಿ ಕ್ಷೇತ್ರದ ಲಾಭಾಂಶಕ್ಕೆ ತೆರಿಗೆವಿನಾಯಿತಿ ಕೊಡಬೇಕು. ಕಟ್ಟಡಸಾಲದ ಮಿತಿ ತೆಗೆಯಬೇಕು. ಹೊಸ ಶಾಖಾ ಲೈಸೆನ್ಸ್ ನೀಡಲಿರುವ ಅಡೆತಡೆಯನ್ನು ನಿವಾರಿಸಿ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರ ಪ್ರವರ್ದಮಾನಕ್ಕೆ ಪೂರಕ ಕ್ರಮವನ್ನು ಬಜೆಟ್‍ನಲ್ಲಿ ಘೋಷಿಸಬೇಕೆಂದು ಈಗಾಗಲೇ ಸಹಕಾರಿ ಬ್ಯಾಂಕುಗಳ ರಾಷ್ಟ್ರೀಯ ಒಕ್ಕೂಟದಿಂದ ಕೇಂದ್ರ ಹಣಕಾಸು ಸಚಿವರು, ಸಹಕಾರಿ ಸಚಿವರಿಗೆ ಮನವಿ ಮಾಡಲಾಗಿದೆ. ಬಜೆಟ್‍ನಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ಸಿಗುವ ನಿರೀಕ್ಷೆ ಇದೆ.

 -ಎನ್.ಎಸ್.ಜಯಕುಮಾರ್, ಟಿಎಂಸಿಸಿ ಅಧ್ಯಕ್ಷರು ಹಾಗೂ ನಿರ್ದೇಶಕರು ನ್ಯಾಫ್ಕಾಬ್ ಫೆಡರೇಶನ್,

ಬಡ್ಡಿ, ಸಾಲ ವಿನಾಯಿತಿ ಅವಧಿ ವಿಸ್ತರಣೆಯಾಗುವುದೇ?

ನಗರ, ಪಟ್ಟಣ ಸಹಕಾರಿ ಬ್ಯಾಂಕುಗಳ ಬಗ್ಗೆ ಯಾವ ಸರಕಾರಗಳು ಗಮನಹರಿಸುತ್ತಿಲ್ಲ. ಪ್ರಸ್ತುತ ಕೋವಿಡ್ ಕಾರಣ, ಗ್ರಾಹಕರ ಆರ್ಥಿಕ ವಹಿವಾಟಿಗೆ ಹೊಡೆತ ಬಿದ್ದಿದ್ದು, 2022ರವರೆಗೆ ಘೋಷಿಸಿದ್ದ ಬಡ್ಡಿ, ಸಾಲ ಪಾವತಿಯಲ್ಲಿನ ಅವಧಿ ವಿನಾಯಿತಿ ಕ್ರಮಗಳನ್ನು 2023ರವರೆಗೆ ಮುಂದುವರಿಸಬೇಕೆಂಬುದು ರಾಷ್ಟ್ರೀಕೃತ ಬ್ಯಾಂಕುಗಳು ಸೇರಿ ಸಹಕಾರಿ ಬ್ಯಾಂಕುಗಳ ಒತ್ತಾಯವಾಗಿದೆ. ಈ ಬಗ್ಗೆ ಹಣಕಾಸು ಸಚಿವರು ಯಾವ ನಿಲುವು ತಳೆಯುವರು ಎಂಬುದು ಇಂದಿನ ಬಜೆಟ್‍ನಲ್ಲಿ ತಿಳಿಯಲಿದೆ.

-ಎನ್.ಆರ್.ಜಗದೀಶ್, ಹಿರಿಯ ಸಹಕಾರಿಗಳು ಹಾಗೂ ಅಧ್ಯಕ್ಷರು ಟಿಜಿಎಂಸಿ ಬ್ಯಾಂಕ್ ತುಮಕೂರು.

ಪೆಟ್ರೋಲ್, ಡೀಸೆಲ್ ಜಿಎಸ್‍ಟಿ ವ್ಯಾಪ್ತಿಗೆ ತರುವ ನಿರೀಕ್ಷೆ

ಕೇಂದ್ರ ಬಜೆಟ್‍ನಲ್ಲಿ ಕಚ್ಚಾವಸ್ತುಗಳು, ಕೈಗಾರಿಕೆಗಳ ಮೇಲೆ ವಿವಿಧ ತೆರಿಗೆ ಕಡಿತಗೊಳಿಸುವ ನಿರೀಕ್ಷೆಹೊಂದಲಾಗಿದೆ. ಐಟಿ ಕ್ಷೇತ್ರದ ಸ್ಲ್ಯಾಬ್ ಜಾಸ್ತಿ ಮಾಡುವ ಜೊತೆಗೆ ಸ್ಟೀಲ್, ಸಿಮೆಂಟ್ ದರ ಕಡಿಮೆಮಾಡುವ ನಿರೀಕ್ಷೆ ಇದೆ. ಪ್ರಮುಖವಾಗಿ ಪೆಟ್ರೋಲ್, ಡೀಸೆಲ್ ಅನ್ನು ಜಿಎಸ್‍ಟಿ ವ್ಯಾಪ್ತಿಗೆ ತರುವ ನಿರೀಕ್ಷೆಯನ್ನು ಔದ್ಯಮಿಕ ವಲಯ ಪ್ರಬಲವಾಗಿ ಹೊಂದಿದ್ದು,

ತುಮಕೂರು ವಸಂತಾ ನರಸಾಪುರದವರೆಗೆ ಮೆಟ್ರೋ ರೈಲು ವಿಸ್ತರಣೆ, ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ, ಮೂಲೆಗೆ ತಳ್ಳಲ್ಪಟ್ಟಿರುವ ಫುಡ್ ಪಾರ್ಕ್ ಮುನ್ನೆಲೆಗೆ ತರುವ ಯೋಜನೆ, ಸ್ಮಾರ್ಟ್ ಸಿಟಿ ವ್ಯಾಪ್ತಿಗೆ ನಗರ ಸಾರಿಗೆಯನ್ನು ಸೇರಿಸಿ ತುಮಕೂರಿನ ಎಲ್ಲಾ ವಾರ್ಡ್‍ಗಳಿಂದಲೂ ಕಾರ್ಮಿಕರು ಕೈಗಾರಿಕೆ ಉದ್ಯೋಗಕ್ಕೆ ಬರಲು ಅನುಕೂಲ ಕಲ್ಪಿಸುವ ನಿರೀಕ್ಷೆ ಹೊಂದಲಾಗಿದೆ.

-ಎಂ.ಎನ್.ಲೋಕೇಶ್, ಅಧ್ಯಕ್ಷರು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ.

ಮೆಗಾಟೆಕ್ಸ್‍ಟೈಲ್ ಪಾರ್ಕ್, ಭದ್ರಾ ಮೇಲ್ದಂಡೆ ನಿರೀಕ್ಷೆ

          16ಸಾವಿರ ಕೋಟಿ ವೆಚ್ಚದ ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಿ ಅಧಿಕೃತ ಘೋಷಣೆಯಾಗುವ ನಿರೀಕ್ಷೆಇದೆ. ದಿಶಾ ಸಮಿತಿ ಸಭೆ ಮೂಲಕ ಸಂಸದರು ಪ್ರಸ್ತಾವನೆ ಸಲ್ಲಿಸಿರುವ ಮೆಗಾ ಟೆಕ್ಸ್‍ಟೈಲ್ ಪಾರ್ಕ್ ಅನ್ನು (ಮಧುಗಿರಿ, ಕೊರಟಗೆರೆ, ಶಿರಾ) ಜಿಲ್ಲೆಗೆ ತರುವ ಯೋಜನೆ, ಮೆಗಾ ಡೇರಿ ಸೇರಿದಂತೆ ಹಲವು ಯೋಜನೆ ಜಾರಿ ನಿರೀಕ್ಷೆ ಇದೆ.

-ಕುಂದರನಹಳ್ಳಿ ರಮೇಶ್, ರಾಜ್ಯ ಜಿಲ್ಲಾ ದಿಶಾ ಸಮಿತಿ ಸದಸ್ಯ.

                        – ಎಸ್.ಹರೀಶ್ ಆಚಾರ್ಯ ತುಮಕೂರು

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap