APPLE ಕಂಪನಿಗೆ ನೋಟಿಸ್‌ ನೀಡಿದ ಕೇಂದ್ರ….!

ವದೆಹಲಿ:

      ದೇಶದಲ್ಲಿ ಭಾರೀ ಸದ್ದು ಮಾಡಿರುವ ಐಫೋನ್​ ಹ್ಯಾಕಿಂಗ್​ ಪ್ರಯತ್ನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಆಯಪಲ್​ ಕಂಪನಿಗೆ ಗುರುವಾರ ನೋಟಿಸ್​ ಕಳುಹಿಸಿದ್ದು, ಸರ್ಕಾರಿ ಪ್ರಾಯೋಜಿತ ದಾಳಿ ನಡೆದಿದೆ ಎನ್ನುವುದಕ್ಕೆ ಸಾಕ್ಷ್ಯಾಧಾರವನ್ನು ಒದಗಿಸುವಂತೆ ಕೇಳಿದೆ.

    ಎಲೆಕ್ಟ್ರಾನಿಕ್ಸ್​ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಗುರುವಾರ ಆಯಪಲ್​ ಕಂಪನಿಗೆ ನೋಟಿಸ್​ ನೀಡಿದ್ದು, ತಕ್ಷಣ ಪ್ರತಿಕ್ರಿಯೆ ನೀಡುವಂತೆ ನಿರ್ದೇಶನ ನೀಡಿದೆ. ಸರ್ಕಾರಿ ಪ್ರಾಯೋಜಿತ ದಾಳಿಯ ಬಗ್ಗೆ ಅಂತಿಮ ನಿರ್ಣಯವನ್ನು ತಿಳಿಸುವಂತೆ ಆಯಪಲ್​ ಕಂಪನಿಯ ಅಧಿಕಾರಿಗಳಿಗೆ ಸಚಿವಾಲಯ ತಿಳಿಸಿದೆ.

    ಅಂದಹಾಗೆ ಈ ವಿವಾದ ಶುರುವಾಗಿದ್ದೇ ಅ.31ರಂದು. ಇಂಡಿಯಾ ಒಕ್ಕೂಟದ ಸದಸ್ಯರುಗಳಾದ ಕಾಂಗ್ರೆಸ್​ ಸಂಸದ ಶಶಿ ತರೂರ್​, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಪ್ರಿಯಾಂಕಾ ಚೆತುರ್ವೇದಿ , ಅಸಾದುದ್ದೀನ್​ ಒವೈಸಿ , ರಾಘವ್​ ಚಡ್ಡಾ ಮತ್ತು ಐಎನ್​ಸಿ ವಕ್ತಾರರಾದ ಪವನ್​ ಖೇರಾ ಮತ್ತು ಸುಪ್ರಿಯಾ ಶ್ರೀನಾಥೆ ಅವರುಗಳಿಗೆ ಸೋಮವಾರ ರಾತ್ರಿ ಆಯಪಲ್​ ಕಂಪನಿಯಿಂದ ಎಚ್ಚರಿಕೆ ಸಂದೇಹಗಳು ಹೋಗಿದ್ದು, ಇದು ಸರ್ಕಾರಿ ಪ್ರಾಯೋಜಕತ್ವದ ಹ್ಯಾಕಿಂಗ್​ ಯತ್ನ ಎಂದು ಆರೋಪಿಸಲಾಗಿದೆ. ಆದರೆ, ಈ ಆರೋಪವನ್ನು ಕೇಂದ್ರ ಸರ್ಕಾರ ನಯವಾಗಿ ತಿರಸ್ಕರಿಸಿದೆ.

     ಈ ಬಗ್ಗೆ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸಚಿವ ಅಶ್ವಿನಿ ವೈಷ್ಣವ್​ ಅವರು ಪ್ರತಿಕ್ರಿಯೆ ನೀಡಿದ್ದು, ಫೋನ್​ ಹ್ಯಾಕಿಂಗ್​ ಬಗ್ಗೆ ಯಾರೆಲ್ಲ ರಾಜಕಾರಣಿಗಳು ಧ್ವನಿ ಎತ್ತಿದ್ದಾರೋ ಅದನ್ನು ಪರಿಗಣಿಸಿ, ಪರಿಶೀಲಿಸುವುದಾಗಿ ತಿಳಿಸಿದ್ದಾರೆ.

   APPLE​ ಕಂಪನಿಯು ಸಂಸತ್ತಿನ ಉಭಯ ಸದನಗಳ ಸದಸ್ಯರಿಗೆ ಎಸ್​ಎಂಎಸ್​ ಮತ್ತು ಇಮೇಲ್ ಮೂಲಕ ಎಚ್ಚರಿಕೆಗಳನ್ನು ಕಳುಹಿಸಿದೆ ಮತ್ತು ಇತ್ತೀಚಿನ iOS 17.1 ಅಪ್‌ಡೇಟ್‌ಗೆ ಮೊಬೈಲ್​ ಅನ್ನು ಅಪ್‌ಗ್ರೇಡ್ ಮಾಡಲು ಒತ್ತಾಯಿಸಿದೆ. ಏಕೆಂದರೆ, ಅಪ್​ಗ್ರೇಡ್​ ಮಾಡದಿದ್ದರೆ, ಅದು ಭದ್ರತಾ ಲೋಪದೋಷಗಳನ್ನು ಪ್ಲಗ್ ಮಾಡುವ ಹಲವಾರು ಸೆಕ್ಯುರಿಟಿ ಪ್ಯಾಚ್‌ಗಳನ್ನು ಹೊಂದಿದ್ದು, ಐಫೋನ್‌ ಹ್ಯಾಕ್​ಗೆ ಅನುಮತಿಸಬಹುದು ಎಂಬುದು ಎಚ್ಚರಿಕೆ ಸಂದೇಶದಲ್ಲಿದೆ.

      ಯಾವುದೇ ನಿರ್ದಿಷ್ಟ ಸರ್ಕಾರ ಪ್ರಾಯೋಜಿತ ಹ್ಯಾಕಿಂಗ್​ ಬೆದರಿಕೆ ನೋಟಿಫಿಕೇಶನ್​ಗಳ ಬಗ್ಗೆ ಆಯಪಲ್ ಕಂಪನಿ ಆರೋಪ ಮಾಡುವುದಿಲ್ಲ. ಸರ್ಕಾರ ಪ್ರಾಯೋಜಿತ ಹ್ಯಾಕರ್​ಗಳು ಉತ್ತಮ ಹಣ ಮತ್ತು ಅತ್ಯಾಧುನಿಕರಾಗಿರುತ್ತಾರೆ. ಈ ಹ್ಯಾಕರ್​ಗಳ ದಾಳಿಗಳು ಕಾಲಾನಂತರದಲ್ಲಿ ವಿಕಸನಗೊಳ್ಳುತ್ತವೆ. ಇಂತಹ ಹ್ಯಾಕರ್​ಗಳನ್ನು ಪತ್ತೆಹಚ್ಚುವುದು ಸಾಮಾನ್ಯವಾಗಿ ಅಪೂರ್ಣ ಮತ್ತು ಅಪೂರ್ಣವಾಗಿರುವ ಬೆದರಿಕೆ ಗುಪ್ತಚರ ಸಂಕೇತಗಳ ಮೇಲೆ ಅವಲಂಬಿತವಾಗಿದೆ.

      ಕೆಲವು ಆಯಪಲ್ ಬೆದರಿಕೆ ನೋಟಿಫಿಕೇಶನ್​ಗಳು ತಪ್ಪು ಎಚ್ಚರಿಕೆ ಸಂದೇಶಗಳಾಗಿರಬಹುದು ಅಥವಾ ಕೆಲವು ದಾಳಿಗಳು ಪತ್ತೆಯಾಗದಿರುವ ಸಾಧ್ಯತೆಯೂ ಇದೆ. ಬೆದರಿಕೆ ನೋಟಿಫಿಕೇಶನ್​ಗಳು ಬರಲು ಕಾರಣವೇನು ಎಂಬುದರ ಕುರಿತು ಮಾಹಿತಿಯನ್ನು ಒದಗಿಸಲು ನಮಗೆ ಸಾಧ್ಯವಾಗುತ್ತಿಲ್ಲ, ಏಕೆಂದರೆ ಭವಿಷ್ಯದಲ್ಲಿ ಪತ್ತೆಹಚ್ಚುವಿಕೆಯನ್ನು ತಪ್ಪಿಸುವ ಸಲುವಾಗಿ ಸರ್ಕಾರಿ ಪ್ರಾಯೋಜಿತ ಹ್ಯಾಕರ್​ಗಳು ತಮ್ಮ ನಡವಳಿಕೆಯನ್ನು ಹೊಂದಿಕೊಳ್ಳಲು ಮಾಹಿತಿ ಸಹಾಯ ಮಾಡಬಹುದು ಎಂದು ಆಯಪಲ್​ ಕಂಪನಿ ಹೇಳಿದೆ.

     APPLE ಸುಮಾರು 150 ರಾಷ್ಟ್ರಗಳಿಗೆ ಹ್ಯಾಕ್ ಆಗುವ ಅಪಾಯದಲ್ಲಿರುವ ಜನರಿಗೆ ಇದೇ ರೀತಿಯ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಿದೆ ಎಂಬುದನ್ನು ಇಲ್ಲಿ ಗಮನಿಸಬೇಕು. 2021ರಲ್ಲಿ ಪೆಗಾಸೆಸ್​ ಸ್ಪೈವೇರ್ ಹಗರಣದ ನಂತರ ಆಯಪಲ್ ಕಂಪನಿಯು ತನ್ನ ಫೀಚರ್​ನಲ್ಲಿ ಲಾಕ್​ಡೌನ್​ ಮೋಡ್​ ಪರಿಚಯಿಸಿತ್ತು. ಈ ಫೀಚರ್​ ಹ್ಯಾಕರ್​ಗಳಿಗೆ ಫೋಟೋಗಳನ್ನು ಹೊರತುಪಡಿಸಿ ಬೇರೆ ಯಾವುದೇ ಅಟ್ಯಾಚ್​ಮೆಂಟ್​ಗಳನ್ನು ತೆಗೆಯದಂತೆ ನೋಡಿಕೊಳ್ಳುತ್ತದೆ ಎಂದು ಹೇಳಲಾಗಿದೆ.

    ಸದ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಹ್ಯಾಕಿಂಗ್​ ಸುದ್ದಿ ಸದ್ದು ಮಾಡುತ್ತಿದ್ದು, ಇದು ಮುಂದೆ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap