ತುಮಕೂರು:
ಗೌಪ್ಯವಾಗಿ ಬಂದಿದ್ದಾದರೂ ಯಾಕೆ..? ಶಾಸಕರು, ರೈತರ ಆಕ್ರೋಶ
ಮಳೆ ಬೆಳೆ ಹಾನಿಗೊಳಗಾದ ರೈತರ ಜಮೀನುಗಳ ವೀಕ್ಷಣೆಗೆ ಕೇಂದ್ರ ತಂಡ ಜಿಲ್ಲೆಗೆ ಶುಕ್ರವಾರ ದಿಢೀರ್ ಭೇಟಿ ನೀಡಿದ್ದು, ರೈತರಿಗೂ, ಜನಪ್ರತಿನಿಧಿಗಳಿಗೆ ಮಾಹಿತಿಯಿಲ್ಲದೆ ಪ್ರದಕ್ಷಿಣೆ ರೂಪದಲ್ಲಿ ಜಿಲ್ಲೆಯ 3 ತಾಲೂಕಿಗೆ ಭೇಟಿಕೊಟ್ಟು ತೆರಳಿರುವುದು ರೈತರು, ಶಾಸಕರ ಆಕ್ರೋಶಕ್ಕೆ ಎಡೆಮಾಡಿದೆ.
ಕಳೆದ ತಿಂಗಳು ಬಿದ್ದ ಅಕಾಲಿಕ ಮಳೆಯಿಂದ ಜಿಲ್ಲೆಯಲ್ಲಿ 1.26 ಲಕ್ಷ ಹೆಕ್ಟೇರ್ ವ್ಯಾಪ್ತಿಯಲ್ಲಿ ಬೆಳೆ ಹಾನಿಯಾಗಿದ್ದು, ಸಾವಿರಾರು ಮನೆಗಳು ಕುಸಿದು, ಕೆರೆಕಟ್ಟೆಗಳು ಒಡೆದು ಕೋಟ್ಯಾಂತರ ನಷ್ಟ ಸಂಭವಿಸಿತ್ತು. ಈ ಸಂಬಂಧ ಕೇಂದ್ರ ಮತ್ತು ರಾಜ್ಯ ಸರಕಾರ ತ್ವರಿತವಾಗಿ ಪರಿಶೀಲನೆ ನಡೆಸಿ ಪರಿಹಾರ ಬಿಡುಗಡೆ ಮಾಡಬೇಕೆಂಬ ಆಗ್ರಹ ರೈತರು ಹಾಗೂ ಜನಪ್ರತಿನಿಧಿಗಳಿಂದ ವ್ಯಕ್ತವಾಗಿತ್ತು. ಏತನ್ಮಧ್ಯೆ ಎದುರಾದ ವಿಧಾನಪರಿಷತ್ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆ ರೈತರ ಬೆಳೆ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಆಡಳಿತದ ಕಾರ್ಯಕ್ಕೂ ಅಡ್ಡಿಯಾಯಿತು.
ಚುನಾವಣೆ ಮುಗಿದು ಫಲಿತಾಂಶ ಪ್ರಕಟವಾಗುತ್ತಲೇ ಡಿ.13ರಿಂದ ಬೆಳಗಾವಿಯಲ್ಲಿ ಪ್ರಾರಂಭವಾದ ಅಧಿವೇಶನಕ್ಕೆ ಜಿಲ್ಲೆಯ ಶಾಸಕರು, ಪರಿಷತ್ ಸದಸ್ಯರು ದೌಡಾಯಿಸಿದರು. ಲೋಕಸಭಾ ಸದಸ್ಯರುಗಳು ಸಹ ಸಂಸತ್ ಅಧಿವೇಶನದಲ್ಲಿ ಪಾಲ್ಗೊಂಡಿದ್ದರು. ಇಂತಹ ಸಂದರ್ಭದಲ್ಲಿ ದಿಢೀರನೇ ಜಿಲ್ಲೆಯಲ್ಲಿ ಬೆಳೆಹಾನಿ ವೀಕ್ಷಣೆಗೆ ಬಂದ ಕೇಂದ್ರ ತಂಡ ಯಾವ ಪುರುಷಾರ್ಥಕ್ಕೆ ಭೇಟಿ ನೀಡಿದರು ಎಂಬ ಪ್ರಶ್ನೆಯನ್ನು ರೈತರು, ಶಾಸಕರೇ ಎತ್ತಿದ್ದಾರ
ತಂಡದಲ್ಲಿದ್ದವರು:
ಕೇಂದ್ರದ ಹಣಕಾಸು ನಿರ್ವಹಣಾ, ನಿಯಂತ್ರಣಾಧಿಕಾರಿ ಸುಶೀಲ್ ಪಾಲ್ ನೇತೃತ್ವದ ಕೇಂದ್ರದ ಕೃಷಿ ನಿರ್ದೇಶಕ ಡಾ: ಸುಭಾಷ್‍ಚಂದ್ರ, ರಾಜ್ಯದ ಅಪರ ಕೃಷಿ ನಿರ್ದೇಶಕ ಬಿ.ಶಿವರಾಜ್ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಅವರನ್ನೊಳಗೊಂಡ ಕೇಂದ್ರ ತಂಡ ಜಿಲ್ಲಾಧಿಕಾರಿ,ಜಿಪಂ ಸಿಇಓ ಕೃಷಿ, ತೋಟಗಾರಿಕಾ, ಕಂದಾಯ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ತುಮಕೂರು, ಗುಬ್ಬಿ ಹಾಗೂ ಕುಣಿಗಲ್ ತಾಲೂಕಿಗೆ ಭೇಟಿಕೊಟ್ಟು ಹಾನಿಗೀಡಾದ ಪ್ರದೇಶಗಳ ಸಾಂಕೇತಿಕ ವೀಕ್ಷಣೆ ಮಾಡಿದರು.
ಬೆಳೆಹಾನಿ, ಕೆರೆ ಕೋಡಿ, ಮನೆ ಹಾನಿ ವೀಕ್ಷಣೆ: ಮೊದಲಿಗೆ ತುಮಕೂರು ತಾಲ್ಲೂಕು ಗೂಳೂರು ಅಮಾನಿಕೆರೆ ಹಾಗೂ ಎ.ಕೆ.ಕಾವಲ್ ರೈತರು ಜಮೀನು ಭೇಟಿ ಶಾಸ್ತ್ರ ಮುಗಿಸಿದ ತಂಡ, ನಂತರ ಗುಬ್ಬಿ ತಾಲ್ಲೂಕು ಎಂ.ಹೆಚ್.ಪಟ್ಟಣಕ್ಕೆ ಭೇಟಿ ನೀಡಿ ಕೆರೆ ನೀರಿನಿಂದ ರಾಗಿ, ಹೂ, ತರಕಾರಿ ಬೆಳೆಹಾನಿಯನ್ನು ವೀಕ್ಷಿಸಿತು. ನಂತರ ತಂಡವು ಗುಬ್ಬಿ ತಾಲ್ಲೂಕು ನಿಟ್ಟೂರಿನಲ್ಲಿ ಮಳೆಯಿಂದ ಹಾಳಾದ ಸೇತುವೆ, ರಸ್ತೆ ವೀಕ್ಷಿಸಿೂ ನಿಟ್ಟೂರು ಬಳಿಕ ಕಡಬ ಕೆರೆ ಸುತ್ತಮುತ್ತಲಿನ ಜಮೀನಿಗೆ ಭೇಟಿ ಕೊಟ್ಟಿತು. ಬಳಿಕ ಕುಣಿಗಲ್ ತಾಲ್ಲೂಕಿನ ಮಾರ್ಕೋನಹಳ್ಳಿ ಜಲಾಶಯಕ್ಕೆ ಭೇಟಿ ನೀಡಿದರು.
ಭೇಟಿ ಶಾಸ್ತ್ರ ಮಾಡಲು ಇಲ್ಲಿಗೆ ಬರಬೇಕಿರಲಿಲ್ಲ ಆದರೆ ಈ ಭೇಟಿಯನ್ನು ಬರೀ ಭೇಟಿ ಶಾಸ್ತ್ರವೆಂದು ಜರಿದಿರುವ ರೈತ ಸಂಘಟನೆ ಮುಖಂಡರು, ಜಿಲ್ಲೆಯ ಹತ್ತು ತಾಲೂಕುಗಳಲ್ಲೂ ಬೆಳೆಹಾನಿಯಾಗಿದೆ. ಬರುವ ಮುನ್ನಾ ವ್ಯಾಪಕ ಪ್ರಚಾರ ಮಾಡಿ ಬರಬೇಕಿತ್ತು ಆದರೆ ರೈತರು ಎಲ್ಲಿ ಹೆಚ್ಚು ಸೇರಿ ಪರಿಹಾರ ಕೇಳುತ್ತಾರೋ ಎಂದು ಅಧಿಕಾರಿಗಳು ಗೌಪ್ಯತೆಯಿಂದ ಪರಿಹಾರ ವೀಕ್ಷಣೆ ಶಾಸ್ತ್ರ ಮಾಡಿ ಮುಗಿಸಿದ್ದಾರೆ. ಇಂತಹ ಸಂಪತ್ತಿಗೆ ದೂರದ ದೆಹಲಿಯಿಂದ ಜನರ ತೆರಿಗೆ ಹಣ ವೆಚ್ಚ ಮಾಡಿ ಬರುವ ಔಚಿತ್ಯವಾದರು ಏನಿತ್ತು.
ಜನರೂ ಇಲ್ಲ, ಜನಪ್ರತಿನಿಧಿಗಳು ಇಲ್ಲ, ಬರೀ ಅಧಿಕಾರಿಗಳ ಮಾಹಿತಿ ವರದಿ ಪಡೆಯಲು ಬರಬೇಕಿತ್ತು. ಇಂತಹ ತಂಡದ ಅಧ್ಯಯನ ವರದಿಯಿಂದ ಜಿಲ್ಲೆಯಲ್ಲಿ ಮಳೆಹಾನಿಗೊಳಗಾದ ರೈತರಿಗೆ ಯಾವುದೇ ಪ್ರಯೋಜನವಿಲ್ಲವೆಂದು ಶಾಸಕರಾದ ಡಾ.ಎಚ್.ಡಿ.ರಂಗನಾಥ್, ಎಸ್.ಆರ್.ಶ್ರೀನಿವಾಸ್, ರೈತ ಚಿಂತಕ ಸಿ.ಯತಿರಾಜು, ರೈತ ಸಂಘದ ಜಿಲ್ಲಾಧ್ಯಕ್ಷ ಅಳಿಲುಘಟ್ಟದ ಗೋವಿಂದರಾಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಸ್ತೆ ಬದಿ ನೋಡ್ಕೊಂಡು ಹೋಗಿದ್ದಾರಷ್ಟೇ..!
ಕೇಂದ್ರ ತಂಡ ಬರುವ ಮಾಹಿತಿ ಶಾಸಕರಾದ ನಮಗೆ ಸರಿಯಾಗಿಲ್ಲ, ಅಧಿಕಾರಿಗಳು ತಮಗೆ ತೋಚಿದಂತೆ ನಡೆದುಕೊಳ್ಳುತ್ತಿದ್ದಾರೆ. ಜಿಲ್ಲೆಯ ಎಲ್ಲಾ ಶಾಸಕರು ಉಸ್ತುವಾರಿ ಸಚಿವರು ಬೆಳಗಾವಿಯಲ್ಲಿರುವಾಗ ಕೇಂದ್ರ ತಂಡದವರು ಜಿಲ್ಲೆಗೆ ಬಂದು ಮಾಡಿದಾದ್ದರೂ ಏನು? ಗುಬ್ಬಿ ತಾಲೂಕಲ್ಲಿ ಐದಾರು ಹಳ್ಳಿಗಳಲ್ಲಿ ಸಂಪರ್ಕ ರಸ್ತೆಯೇ ಮಳೆಯಿಂದ ಕಡಿತಗೊಂಡಿದೆ. ಅಲ್ಲಿಗೆ ಇವರು ಹೋಗಿದ್ದಾರಾ? ಮೂಕ್ಕನಹಳ್ಳಿ ಪಟ್ಟಣದಗೇಟ್ ಬಳಿ ಬೆಳೆ ಹಾನಿ ನೋಡಿಕೊಂಡು ಹೋದರೆ ಸಾಕೆ? ಕಾಟಾಚಾರಕ್ಕೆ ಬಂದು ಮಾರ್ಕೋನಹಳ್ಳಿ ಡ್ಯಾಂ ನಲ್ಲಿ ಊಟ ಮಾಡಿಕೊಂಡು ಹೋಗಿದ್ದಾರೆ.
-ಎಸ್.ಆರ್.ಶ್ರೀನಿವಾಸ್, ಗುಬ್ಬಿ ಶಾಸಕರು.
ಬೆಳಿಗ್ಗೆ ತಹಸೀಲ್ದಾರ್ ಫೋನ್ ಮಾಡಿ ಕೇಂದ್ರ ತಂಡ ಬರುತ್ತಾರೆ ಅಂದರು. ಅಧಿವೇಶನ ನಡೆಯುತ್ತಿರುವಾಗ ಬರುವ ಔಚಿತ್ಯವಾದರೂ ಏನಿತ್ತು. ರಾಜ್ಯ, ಜಿಲ್ಲೆಯ ಅಧಿಕಾರಿಗಳಿಗೆ ಸೆಷನ್ಸ್ ನಡೆಯುತ್ತಿರುವುದು ಗೊತ್ತಿಲ್ಲ. ಯಾರನ್ನು ಕೇಳಿ ಭೇಟಿ ದಿನಾಂಕ ನಿಗದಿ ಮಾಡಿದರು. ಕೇಂದ್ರ ತಂಡದ ಈ ಸಸ್ಪೆನ್ಸ್ ಭೇಟಿಯ ಬಗ್ಗೆ ನನ್ನ ಧಿಕ್ಕಾರವಿದೆ.
-ಡಾ.ಎಚ್.ಡಿ.ರಂಗನಾಥ್, ಕುಣಿಗಲ್ ಶಾಸಕರು.
ಸಿಗುವುದಾ ರಾಗಿಗೆ 30000 ಪರಿಹಾರ
ಅಕ್ಟೋಬರ್-ನವೆಂಬರ್ ಮಾಹೆಯಲ್ಲಿ ಸುರಿದ ಭಾರಿ ಮಳೆಯಿಂದ ಬೆಳೆ ನಷ್ಟ ಹೊಂದಿದ ರೈತರಿಗೆ ಪ್ರತಿ ಹೆಕ್ಟೇರ್ ಮಳೆಯಾಶ್ರಿತ ರಾಗಿ ಬೆಳೆಗೆ ಸರ್ಕಾರ ನೀಡುತ್ತಿರುವ 6800 ರೂ.ಗಳ ಪರಿಹಾರ ಧನವನ್ನು 30,000ಕ್ಕೆ ಹೆಚ್ಚಿಸಬೇಕೆಂದು ಕೇಂದ್ರ ತಂಡಕ್ಕೆ ಗುಬ್ಬಿಯಲ್ಲಿ ರೈತ ಸಂಘಟನೆಗಳು ಮನವಿ ಮಾಡಿದರು. ಆದರೆ ಕೇಂದ್ರ ತಂಡದ ಅಧಿಕಾರಿಗಳು ಪರಿಶೀಲನೆಯ ಭರವಸೆ ಸಿಕ್ಕಿತೆ ಹೊರತು ಪರಿಹಾರ ಹೆಚ್ಚಳದ ಸ್ಪಷ್ಟ ವಾಗ್ದಾನ ಸಿಗಲಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ