ಚಂಡೀಗಢ:
ಗಣರಾಜ್ಯೋತ್ಸವ ಪರೇಡ್‌ಗೆ ರಾಜ್ಯದ ಟ್ಯಾಬ್ಲೋವನ್ನು ಸೇರಿಸದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಬುಧವಾರ ತೀವ್ರ ವಾಗ್ದಾಳಿ ನಡೆಸಿದ್ದು, ಕೇಂದ್ರ ತಾರತಮ್ಯ ಮಾಡಿದೆ ಎಂದು ಆರೋಪಿಸಿದ್ದಾರೆ.
ಕಳೆದ ವರ್ಷದಂತೆ ಈ ವರ್ಷವೂ ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ಗೆ ಪಂಜಾಬ್‌ನ ಟ್ಯಾಬ್ಲೋವನ್ನು ಸೇರಿಸಿಲ್ಲ ಎಂದು ಭಗವಂತ್ ಮಾನ್ ಹೇಳಿದ್ದಾರೆ.
“ಕೇಂದ್ರ ಸರ್ಕಾರ ಪಂಜಾಬ್ ವಿಚಾರದಲ್ಲಿ ತಾರತಮ್ಯ ಮಾಡಿದೆ” ಎಂದು ಆರೋಪಿಸಿದ ಮಾನ್, ಪಂಜಾಬ್ ಮತ್ತು ದೆಹಲಿ ಎರಡೂ ಆಯ್ಕೆ ಮಾಡಿದ ಪಟ್ಟಿಯಲ್ಲಿಲ್ಲ ಎಂದಿದ್ದಾರೆ.
ಫತೇಘರ್ ಸಾಹಿಬ್‌ಗೆ ಭೇಟಿ ನೀಡಿದ ನಂತರ ಚಂಡೀಗಢದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾನ್, ನನಗೆ ಇಂದು ಕೇಂದ್ರದಿಂದ ಪತ್ರ ಬಂದಿದ್ದು, ಪಂಜಾಬ್‌ನ ಟ್ಯಾಬ್ಲೋವನ್ನು ಸೇರಿಸಲಾಗಿಲ್ಲ ಎಂದು ತಿಳಿಸಿರುವುದಾಗಿ ಹೇಳಿದ್ದಾರೆ.
ನಿರಾಕರಣೆಗೆ ಕಾರಣವನ್ನು ಕೇಳಿದಾಗ, ಟ್ಯಾಬ್ಲೋ ಅನ್ನು ಆಯ್ಕೆ ಮಾಡಿದ ರಾಜ್ಯಗಳ ಪಟ್ಟಿಯ ಬಗ್ಗೆ ಮಾತ್ರ ಮಾಹಿತಿ ನೀಡಲಾಗಿದೆ ಎಂದು ಮಾನ್ ತಿಳಿಸಿದ್ದಾರೆ.
“ಪ್ರತಿ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ, ವಿವಿಧ ರಾಜ್ಯಗಳು ತಮ್ಮ ಟ್ಯಾಬ್ಲೋಗಳ ಮೂಲಕ ತಮ್ಮ ರಾಜ್ಯದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರದರ್ಶಿಸುತ್ತವೆ” ಎಂದು ಅವರು ಹೇಳಿದರು.