ಬೆಂಗಳೂರು :
ಪುನೀತ್ ರಾಜ್ಕುಮಾರ್ ಅವರ ಮಾಜಿ ಬಾಡಿಗಾರ್ಡ್, ಚಾಲಕ ಎಲ್ಲವೂ ಆಗಿದ್ದ ಚಲಪತಿ ಪುತ್ರಿ ಅಮೂಲ್ಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಉತ್ತಮ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದಾಳೆ. ಅಮೂಲ್ಯ ಅವರಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 94.33% ಅಂಕಗಳು ಬಂದಿವೆ. ಸಹಜವಾಗಿಯೇ ಛಲಪತಿ ಅವರಿಗೆ ಖುಷಿಯಾಗಿದ್ದು, ಎಲ್ಲವೂ ಯಜಮಾನ್ರ (ಅಪ್ಪು) ಆಶೀರ್ವಾದ ಎಂದಿದ್ದಾರೆ. ಮಾತ್ರವಲ್ಲದೆ ತಮ್ಮ ಮಗಳನ್ನು ಓದಿಸಿದ್ದು ಅಪ್ಪು ಅವರೇ ಎಂದು ಸಹ ಹೇಳಿದ್ದಾರೆ.
ಹುಲ್ಲಹಳ್ಳಿ ಕ್ರೈಸ್ಟ್ ಅಕಾಡೆಮಿಯಲ್ಲಿ ಆಕೆ ವ್ಯಾಸಂಗ ಮಾಡುತ್ತಿದ್ದ ಛಲಪತಿ ಪುತ್ರಿ ಅಮೂಲ್ಯ ಕನ್ನಡ ಭಾಷೆಯಲ್ಲಿ 98 ಅಂಕ. ಎಕನಾಮಿಕ್ಸ್‌ನಲ್ಲಿ 97, ಇಂಗ್ಲೀಷ್ 90, ಬ್ಯುಸಿನೆಸ್ ಸ್ಟಡೀಸ್ 90, ಅಕೌಂಟೆನ್ಸಿಯಲ್ಲಿ 96 ಹಾಗೂ ಸ್ಟಾಟಿಸ್ಟಿಕ್ಸ್‌ನಲ್ಲಿ 95 ಅಂಕ ಸೇರಿ ಒಟ್ಟು 600 ಅಂಕಗಳಿಗೆ 566 ಅಂಕ ಗಳಿಸಿ ಗಮನ ಸೆಳೆದಿದ್ದಾರೆ. ಮುಂದೆ ಬಿ.ಕಾಂ ಓದಿ ಆ ಬಳಿಕ ಸಿಎ ಮಾಡುವ ಕನಸನ್ನು ಅಮೂಲ್ಯ ಹೊಂದಿದ್ದಾರೆ.
ಮಾಧ್ಯಮದ ಜೊತೆ ಮಾತಾಡಿರುವ ಛಲಪತಿ, ‘ನನ್ನ ಮಗಳ ಸಾಧನೆಗೆ ಪುನೀತ್ ರಾಜ್ಕುಮಾರ್ ಅವರ ಆಶೀರ್ವಾದವೂ ಕಾರಣ. ಮಗಳು ಪ್ರಾಥಮಿಕ ಶಾಲೆಯಲ್ಲಿ ಇದ್ದಾಗಿನಿಂದಲೂ ಅವರೇ ಓದಿಸುತ್ತಿದ್ದರು. ನನ್ನ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಅವರೇ ಹೊತ್ತಿದ್ದರು’ ಎಂದಿದ್ದಾರೆ. ಚಲಪತಿ ಪುತ್ರಿ ಅಮೂಲ್ಯ ಮಾತನಾಡಿ, ‘ನಮ್ಮನ್ನು ಓದಿಸಿದ್ದ ಪುನೀತ್ ಅವರು, ಅವರ ಸಹಾಯಕ್ಕೆ ಓದಿನ ಮೂಲಕ ಧನ್ಯವಾದ ಹೇಳಿದ್ದೇನೆ’ ಎಂದಿದ್ದಾರೆ.
ಸುಮಾರು 11 ವರ್ಷಗಳ ಕಾಲ ಛಲಪತಿ ಅವರು ಪುನೀತ್ ರಾಜ್ಕುಮಾರ್ ಅವರಿಗೆ ಬಾಡಿಗಾರ್ಡ್ ಆಗಿ ಕೆಲಸ ಮಾಡಿದರು. ಅವರ ಕುಟುಂಬದಲ್ಲಿ ಒಬ್ಬರಾಗಿದ್ದರು. ಪುನೀತ್ ರಾಜ್ಕುಮಾರ್ ನಿಧನದ ಬಳಿಕ ಅವರು ಬೇರೆ ವೃತ್ತಿಯ ಕಡೆ ಗಮನ ಹರಿಸಿದ್ದಾರೆ. ಪುನೀತ್ ಅವರ ಹುಟ್ಟುಹಬ್ಬ, ಸ್ಮರಣೆ ಇದ್ದಾಗ ಸಮಾಧಿಗೆ ಭೇಟಿ ನೀಡಿ ಪೂಜೆ ಮಾಡುತ್ತಾರೆ.
