ಬೆಂಗಳೂರು
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕನಿಷ್ಠ ತಾಪಮಾನ ದಾಖಲಾಗುತ್ತಿದ್ದು, ಚಳಿಯಿಂದ ಜನರು ನಡುಗುತ್ತಿದ್ದಾರೆ. ಇತ್ತ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ವಿಪರೀತ ಚಳಿ ಆರಂಭವಾಗಿದೆ. ಉದ್ಯಾನ ನಗರಿಯಲ್ಲಿ ನ. 30ರಂದು ರಾತ್ರಿ ಈ ಹಿಂದೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಚಳಿ ಆವರಿಸಿತ್ತು ಕಳೆದ ಏಳೆಂಟು ವರ್ಷಗಳಲ್ಲೇ ಅತ್ಯಧಿಕ ಪ್ರಮಾಣದ ಚಳಿ ದಾಖಲಾಗಿತ್ತು.
ಭಾನುವಾರ ಬೆಳಗ್ಗೆ ತಾಪಮಾನ 21.6 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದು, ಜನರು ಮನೆಯಿಂದ ಹೊರಗೆ ಕಾಲಿಡಲು ನೂರು ಬಾರಿ ಯೋಚಿಸುವಂತಾಗಿತ್ತು. ಈಗಲೂ ಇಬ್ಬನಿಯಿಂದಾಗಿ ಹೊರಗೆ ತಣ್ಣನೆಯ ವಾತಾವರಣವಿದ್ದು, ಮೈ ನಡುಗಿಸುವ ಚಳಿ ಇದೆ. ನಗರ ಮತ್ತು ಹೊರವಲಯದಾದ್ಯಂತ ಮಂಜು ದಟ್ಟವಾಗಿ ಹರಡುತ್ತಿದ್ದು, ಬೆಳಗ್ಗೆ 9 ಗಂಟೆ ಕಳೆದು, ಸೂರ್ಯ ನೆತ್ತಿ ಮೇಲೆ ಬಂದರೂ ಎದುರಿಗಿರುವವರ ಮುಖ, ವಾಹನ ಕಾಣಿಸದಷ್ಟು ಮಂಜು ಆವರಿಸುತ್ತಿದೆ.
ನಗರದ ಸುತ್ತಮುತ್ತ ಕಳೆದ ನಾಲ್ಕೈದು ದಿನಗಳಿಂದ ವಾತಾವರಣದಲ್ಲಿ ಏರುಪೇರಾಗಿ ಬೆಳಗ್ಗೆ ಎಂಟಾದರೂ ಆವರಿಸಿದ ಮಂಜು, ಚುಮು ಚುಮು ಚಳಿ ಜನರನ್ನು ಥರಗುಟ್ಟಿಸುತ್ತಿದೆ. ಸೂರ್ಯ ಮುಳಗುತ್ತಿದ್ದಂತೆ ಆರಂಭವಾಗುವ ತಣ್ಣನೆಯ ಚಳಿ ರಾತ್ರಿ ಪೂರಾ ವಾತಾವರಣದೊಂದಿಗೆ ಬೆರೆತು ಬೆಳಗ್ಗೆ 9 ಗಂಟೆಯಾದರೂ ಮಂಜು ಆವರಿಸಿಕೊಂಡು ಜನರನ್ನು ಮನೆಯಿಂದ ಹೊರಬಾರದಂತೆ ಮಾಡಿದೆ. ನವೆಂಬರ್‌ನಲ್ಲಿ ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 23–24 ಡಿಗ್ರಿ ಸೆಲ್ಸಿಯಸ್ ಇರತ್ತದೆ. ಆದರೆ ಭಾನುವಾರ ಮಾತ್ರ ನಗರದಲ್ಲಿ ದಾಖಲೆ ಮಟ್ಟದ ಚಳಿಯ ವಾತಾವರಣ ಕಂಡು ಬಂದಿದ್ದು, ಬೆಂಗಳೂರಿನಲ್ಲಿ ದಾಖಲಾದ ಅತಿ ಕಡಿಮೆ ತಾಪಮಾನ ಇದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಮಂಜಿನ ಆವೃತವಾದ ಸಿಲಿಕಾನ್ ಸಿಟಿಯ ಚಿತ್ರಣವನ್ನು ರಾಜಶ್ರೀ ಭುಯಾನ್ ಎಂಬವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಆ ಫೋಟೊಗೆ ‘ಫ್ರಿಡ್ಜ್‌ನೊಳಗಿನ ಬೆಂಗಳೂರು’ ಎಂಬ ಕ್ಯಾಪ್ಷನ್ ನೀಡಿದ್ದು, ಇಡೀ ನಗರ ಮೂರು-ನಾಲ್ಕು ದಿನಗಳಿಂದ ಚಳಿಯಿಂದ ನಡುಗುತ್ತಿದೆ. ಶನಿವಾರ ಬೆಂಗಳೂರಿನ ವಾತಾವರಣ ವಿಶೇಷ ಅನುಭವ ನೀಡಿದೆ ಎಂದು ಬರೆದುಕೊಂಡಿದ್ದಾರೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೊ ವೈರಲ್ ಆಗಿದೆ. ಮಂಜಿನ ಎಫೆಕ್ಟ್‌ನಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗಿದ್ದು, ವಾಹನ ಸವಾರರು ತೀವ್ರ ಪರದಾಡುವಂತಾಗಿದೆ. ದಟ್ಟ ಮಂಜಿನಿಂದಾಗಿ ಒಂಬತ್ತು ಗಂಟೆಯಾದರೂ ವಾಹನಗಳು ಹೆಡ್‌ಲೈಟ್ ಹಾಕಿಕೊಂಡು ಸಂಚರಿಸಬೇಕಾದ ಸ್ಥಿತಿ ಉಂಟಾಗಿದೆ. ನಿತ್ಯ ಕೆಲಸಕ್ಕೆ ಹೋಗುವವರು, ಪರಸ್ಥಳಕ್ಕೆ ಕೆಲಸಕ್ಕೆ ತೆರಳುವವರು ಮತ್ತು ಶಾಲಾ-ಕಾಲೇಜಿಗೆ ತೆರಳುವವರು ಅನಿವಾರ್ಯವಾಗಿ ಮನೆಯಿಂದ ಹೊರಬರುವಂತಾಗಿದೆ.
ತಾಪಮಾನ ಕುಸಿತಕ್ಕೆ ಭಾರತೀಯ ಹವಾಮಾನ ಇಲಾಖೆ (IMD)ಯ ಸಿಎಸ್ ಪಾಟೀಲ್ ಕಾರಣ ನೀಡಿದ್ದಾರೆ. “ತಾಪಮಾನ ಕುಸಿತಕ್ಕೆ ಮೋಡ ಮುಚ್ಚಿದ ವಾತಾವರಣ, ಗಾಳಿಯಲ್ಲಿ ಹೆಚ್ಚಿದ ತೇವಾಂಶ ಮತ್ತು ದಿತ್ವಾ ಚಂಡಮಾರುತ ಕಾರಣ. ಸಾಮಾನ್ಯವಾಗಿ ತಾಪಮಾನ 1–2 ಡಿಗ್ರಿ ಕುಸಿಯುತ್ತದೆ. ಆದರೆ ಈ ಬಾರಿ 3–4 ಡಿಗ್ರಿ ಕುಸಿತ ಕಂಡು ಬಂದಿದೆ” ಎಂದು ಹೇಳಿದ್ದಾರೆ.








