
ಚಾಮರಾಜನಗರ : ಗುಂಡ್ಲುಪೇಟೆ ತಾಲೂಕಿನ ಚೆನ್ನಮಲ್ಲಿಪುರ ಗ್ರಾಮದಲ್ಲಿ ಸೋಮವಾರ ಸಂಜೆ, ರೈತರ ಜಮೀನುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಹುಲಿಯನ್ನು ಅರಣ್ಯ ಇಲಾಖೆ ಯಶಸ್ವಿಯಾಗಿ ಸೆರೆ ಹಿಡಿದಿದೆ.
ಸೆರೆ ಸಿಕ್ಕ ಹುಲಿಯು ಅಂದಾಜು ಒಂದೂವರೆ ವರ್ಷದ ವಯೋಮಾನದ ಗಂಡು ಹುಲಿಯಾಗಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ಅರಣ್ಯ ವಲಯ ವ್ಯಾಪ್ತಿಗೆ ಒಳಪಡುವ ಕಗ್ಗಳದಹುಂಡಿ, ಚೆನ್ನಮಲ್ಲಿಪುರ ಸುತ್ತಮುತ್ತಲು ಓಡಾಡಿ ಆತಂಕ ಸೃಷ್ಟಿಸಿದ ಹುಲಿಯನ್ನು ಸೆರೆ ಹಿಡಿಯಬೇಕೆಂದು ರೈತರು ಒತ್ತಾಯಿಸಿದ್ದರು.
ಡ್ರೋಣ್ ಹಾಗೂ ಜಯಪ್ರಕಾಶ್, ಧರ್ಮ ಎಂಬ ಸಾಕಾನೆಗಳನ್ನು ಬಳಸಿಕೊಂಡು ಮದ್ದೂರು ವಲಯದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಮೊದಲಿಗೆ ಕಗ್ಗಳದಹುಂಡಿ ಅನಿಲ್ ಎಂಬವರ ಜಮೀನಿನಲ್ಲಿ ಹುಲಿ ಇರುವುದನ್ನು ಪತ್ತೆ ಹಚ್ಚಿದರು. ಬಳಿಕ, ನಿಗಾ ವಹಿಸಿ ಚೆನ್ನಮಲ್ಲಿಪುರ ಗ್ರಾಮದ ನಾಗಪ್ಪ ಎಂಬವರ ಬಾಳೆ ತೋಟದಲ್ಲಿ ಹುಲಿಗೆ ಅರವಳಿಕೆ ಚುಚ್ಚುಮದ್ದು ನೀಡಿ ಹುಲಿಯನ್ನು ಸೆರೆ ಹಿಡಿಯಲಾಗಿದೆ.ಹುಲಿಯು ಮೇಲ್ನೋಟಕ್ಕೆ ಆರೋಗ್ಯಕರವಾಗಿದ್ದು, ಅದರ ಮೇಲೆ ನಿಗಾ ಇಡಲು ಮೈಸೂರಿನ ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ರವಾನೆ ಮಾಡಲಾಗಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ 40 ಕ್ಕೂ ಅಧಿಕ ಸಿಬ್ಬಂದಿ, ಪೊಲೀಸ್ ಇಲಾಖೆಯ 20 ಕ್ಕೂ ಅಧಿಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.








