ಚಾಮುಂಡೇಶ್ವರಿ ಬೆಟ್ಟ ಪ್ರಾಧಿಕಾರ : ರಾಜ್ಯ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ ರಾಜಮಾತೆ

ಮೈಸೂರು:

   ಚಾಮುಂಡೇಶ್ವರಿ ಬೆಟ್ಟ ಪ್ರಾಧಿಕಾರ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ರಾಜಮನೆತನದ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಹೇಳದೆಯೇ ಅವರ ವಿರುದ್ಧ ಪ್ರಮೋದಾ ದೇವಿ ಒಡೆಯರ್ ವಾಗ್ದಾಳಿ ನಡೆಸಿದ್ದಾರೆ.

   ಚಾಮುಂಡೇಶ್ವರಿ ದೇವಿ ರಾಜಮನೆತನದ ಅಧಿದೇವತೆಯಾಗಿದ್ದು, ಚಾಮುಂಡಿ ಬೆಟ್ಟದ ಮೇಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಮತ್ತು ಇತರ ದೇವಾಲಯಗಳು ಕುಟುಂಬದ ಖಾಸಗಿ ಆಸ್ತಿಗಳಾಗಿವೆ. ಆದರೆ, ಸರ್ಕಾರವು ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿ ಮತ್ತು ನಿರ್ವಹಣೆಯ ನೆಪದಲ್ಲಿ ದೇವಾಲಯಗಳ ಮಾಲೀಕತ್ವ, ನಿಯಂತ್ರಣ ಮತ್ತು ನಿರ್ವಹಣೆಯನ್ನು ಸ್ವಾಧೀನಪಡಿಸಿಕೊಳ್ಳಲು ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ 2024 ಅನ್ನು ಜಾರಿಗೆ ತಂದಿದೆ. ಈ ಕಾಯ್ದೆಯ ವಿರುದ್ದ ನಾವು ನ್ಯಾಯಾಲಯದ ಮೆಟ್ಟಿಲೇರಿದ್ದು, ಪ್ರಾಧಿಕಾರದ ರಚನೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

   ಹೀಗಾಗಿ ಈ ಕಾಯಿದೆ ಅಸಂವಿಧಾನಿಕ ಎಂದು ಹೇಳಿದರು. 1971ರಲ್ಲಿ ಸಂವಿಧಾನಕ್ಕೆ ನಡೆದ 26ನೇ ತಿದ್ದುಪಡಿಯಲ್ಲಿ ರಾಜಮನೆತನಗಳು ತಮ್ಮ ಆಸ್ತಿಯ ವಿವರಗಳನ್ನು ಸಲ್ಲಿಸುವ ಪಟ್ಟಿಯನ್ನು ನೀಡಬೇಕೆಂದು ಅಂದಿನ ಕೇಂದ್ರ ಸರ್ಕಾರ ತಿಳಿಸಿತ್ತು. ಅದರಂತೆ ಮೈಸೂರು ರಾಜಮನೆತನ ಚಾಮುಂಡಿ ಬೆಟ್ಟದಲ್ಲಿ ದೇವಸ್ಥಾನವೂ ಸೇರಿದಂತೆ ಹಲವಾರು ಆಸ್ತಿಗಳು ತಮಗೆ ಸೇರಿವೆ ಎಂದು ಪಟ್ಟಿ ನೀಡಿತ್ತು. ರಾಜ್ಯ ಸರ್ಕಾರದ ಅಂದಿನ ಮುಖ್ಯ ಕಾರ್ಯದರ್ಶಿ ಅವರು 1972ರಲ್ಲಿ ಸಹಿ ಹಾಕಿ ಅನುಮೋದಿಸಿದ್ದಾರೆ. ಇದು ಸರ್ಕಾರಿ ಆಸ್ತಿ ಅಲ್ಲ ಎಂದರು.

   ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೂ ಬಂದ ಎಲ್ಲಾ ಸರ್ಕಾರಗಳು ನಮಗೆ ತೊಂದರೆ ನೀಡಿವೆ. 2001ರಲ್ಲಿ ದಿ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಚಾಮುಂಡಿಬೆಟ್ಟದಲ್ಲಿ ಇರುವ ಚಾಮುಂಡೇಶ್ವರಿ ದೇವಸ್ಥಾನ ಸೇರಿದಂತೆ ಇನ್ನಿತರ ದೇವಸ್ಥಾನಗಳು ಹಾಗೂ ಇತರೆ ಆಸ್ತಿಗಳು ಮೈಸೂರು ರಾಜಮನೆತನಕ್ಕೆ ಸೇರಿದ್ದು ಎಂದು ನ್ಯಾಯಾಲಯದಲ್ಲಿ ದಾವೆ ಹಾಕಿದ್ದರು. ಇದು ಹೈಕೋರ್ಟಿನ ವಿಭಾಗೀಯ ಪೀಠದಲ್ಲಿ ಇನ್ನೂ ವಿಚಾರಣೆ ಹಂತದಲ್ಲೇ ಇದೆ.

   ದೇವಾಲಯಗಳ ದೈವಿಕತೆ ಮತ್ತು ಧಾರ್ಮಿಕ ಪವಿತ್ರತೆಯನ್ನು ವಾಣಿಜ್ಯಿಕವಾಗಿ ಬಳಸಿಕೊಳ್ಳಲು ಸರ್ಕಾರಕ್ಕೆ ಅನುಮತಿ ನೀಡಲಾಗುವುದಿಲ್ಲ. ಕೆಲವರು ಲ್ಯಾಂಡ್ ಕಳೆದುಕೊಂಡೆ ಎಂದು ಭೂಮಿ ಕೇಳ್ತಾರೆ. ಹಾಗಾದರೆ ನಾವು ಕಳೆದುಕೊಂಡದ್ದು ಭೂಮಿ ಅಲ್ಲವೇ? ನಮಗೂ ಲ್ಯಾಂಡ್ ಟು ಲ್ಯಾಂಡ್ ಕೊಡಬೇಕು ಅಲ್ಲವೇ? ಎಂದು ಪ್ರಶ್ಮಿಸಿದರು. ಬೇರೆಯವರು ಕೇಳಿದಾಗ ಕೊಡುವವರು ನಾವು ಕೇಳಿದಾಗ ಯಾಕೆ ಕೊಡುವುದಿಲ್ಲ? ಎಂದು ಸಿಡಿಮಿಡಿಗೊಂಡರು.

Recent Articles

spot_img

Related Stories

Share via
Copy link
Powered by Social Snap