ಆಂಧ್ರ
ಹಿಂದಿನ ಮುಖ್ಯಮಂತ್ರಿ ಜಗನ್ ಬಾಬು ಸರ್ಕಾರದ ಅವಧಿಯಲ್ಲಿ ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಕಲಬೆರಕೆ ಮಾಡಲಾಗುತ್ತಿತ್ತು ಎಂದು ಸಾರಿದ್ದ ಹಾಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ನಿನ್ನೆ ಶುಕ್ರವಾರ ದಂಪತಿ ಸಮೇತ ತಿರುಮಲ ಬೆಟ್ಟದಲ್ಲಿ ಪ್ರಾರಂಭವಾದ ಬ್ರಹ್ಮೋತ್ಸವಗಳಲ್ಲಿ ಪಾಲ್ಗೊಂಡಿದ್ದರು. ಶ್ರೀ ವೆಂಕಟೇಶ್ವರ ದೇವರಿಗೆ ಹತ್ತು ವಸ್ತ್ರಗಳನ್ನು ಅರ್ಪಿಸಿದರು. ತನ್ಮೂಲಕ ಹಿಂದಿನ ಸರ್ಕಾರದಲ್ಲಿ ಜರುಗಿತ್ತು ಎನ್ನಲಾದ ಪ್ರಮಾದಕ್ಕೆ ಪ್ರಾಯಶ್ಚಿತ್ತ ಮಾಡಿಕೊಂಡಂತಿತ್ತು ಸಿಎಂ ಚಂದ್ರಬಾಬು ನಾಯ್ಡು ಅವರು ನಿನ್ನೆ ಸಲ್ಲಿಸಿದ ಸೇವೆಗಳನ್ನು ನೋಡಿದಾಗ.
ತಿರುಪತಿ ತಿರುಮಲ ಬೆಟ್ಟದಲ್ಲಿ ನಿನ್ನೆ ಶುಕ್ರವಾರ ಶ್ರೀವಾರಿ ಬ್ರಹ್ಮೋತ್ಸವ ಕಾರ್ಯಕ್ರಮಗಳು ಭಕ್ತರ ಸಂಭ್ರಮ ಸಡಗರಗಳ ಮಧ್ಯೆ ವಿಜೃಂಭಣೆಯಿಂದ ಪ್ರತಿವರ್ಷದಂತೆ ಆರಂಭವಾದವು. ಆಂಧ್ರಪ್ರದೇಶ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಅವರು ರಾಜ್ಯ ಸರ್ಕಾರದ ಪರವಾಗಿ ತಿರುಮಲ ವೇಂಕಟೇಶ್ವರನಿಗೆ ದಶ ರೇಷ್ಮೆ ವಸ್ತ್ರಗಳನ್ನು ಅರ್ಪಿಸಿದರು.
ಶ್ರೀವಾರಿ ಸಾಲಕಟ್ಲ ಬ್ರಹ್ಮೋತ್ಸವದ ಅಂಗವಾಗಿ ಸಂಜೆ 5.45ರಿಂದ 6ರ ನಡುವೆ ಮೀನ ಲಗ್ನದಲ್ಲಿ ಶಾಸ್ತ್ರೋಕ್ತವಾಗಿ ಧ್ವಜಾರೋಹಣ ನೆರವೇರಿಸಿದರು. ಆಂಧ್ರ ಸಿಎಂ ಚಂದ್ರಬಾಬು ದಂಪತಿ ವೇಂಕಣ್ಣನಿಗೆ ರೇಷ್ಮೆ ವಸ್ತ್ರ ಸಮರ್ಪಿಸಿದರು. ರಾತ್ರಿ 7.55ಕ್ಕೆ ಬೇಡಿ ಆಂಜನೇಯಸ್ವಾಮಿ ದೇವಸ್ಥಾನ ತಲುಪಿದ ಚಂದ್ರಬಾಬು ದಂಪತಿ ರಾಜ್ಯ ಸರ್ಕಾರದ ಪರವಾಗಿ 14ನೇ ಬಾರಿಗೆ ಶ್ರೀ ವೆಂಕಟೇಶ್ವರ ಸ್ವಾಮಿಗೆ ರೇಷ್ಮೆ ವಸ್ತ್ರಗಳನ್ನು ಅರ್ಪಿಸಿದರು.
ಬಳಿಕ ಧ್ವಜಸ್ತಂಭಕ್ಕೆ ನಮಿಸಿ ವೇಂಕಟೇಶ್ವರನ ದರ್ಶನ ಪಡೆದರು. ವಕುಳಳಾಮಾತ, ವಿಮಾನ ವೇಂಕಟೇಶ್ವರಸ್ವಾಮಿ, ಭಾಷ್ಯಕರ್ಲ ಸನ್ನಿಧಿ, ಯೋಗ ನರಸಿಂಹಸ್ವಾಮಿ ದರ್ಶನ ಪಡೆದರು. ನಂತರ ರಂಗನಾಯಕ ಮಂಟಪದಲ್ಲಿ ವೈದಿಕರು ವೇದ ಮಂತ್ರ ಪಠಿಸುವ ಮೂಲಕ ದಂಪತಿಗೆ ಆಶೀರ್ವಚನ ನೀಡಿದರು. ಇಒ ಶ್ಯಾಮಲಾ ರಾವ್ ಅವರು ಶ್ರೀವಾರಿಯ ತೀರ್ಥ ಪ್ರಸಾದವನ್ನು ಸಿಎಂಗೆ ಹಸ್ತಾಂತರಿಸಿದರು. ಸಿಎಂ ಜತೆ ರಾಜ್ಯ ಸಾಲ ಮತ್ತು ದತ್ತಿ ಇಲಾಖೆಯ ಸಚಿವ ಅನಂ ರಾಮ್ ನಾರಾಯಣ ರೆಡ್ಡಿ ಸೇರಿದಂತೆ ಹಲವು ಅಧಿಕಾರಿಗಳು, ಶಾಸಕರು ಇದ್ದರು.








