ಇಂದು ವರ್ಷದ ಕೊನೆಯ ಚಂದ್ರಗ್ರಹಣ……!

ಬೆಂಗಳೂರು

     ಈ ವರ್ಷದ ಕೊನೆಯ ಚಂದ್ರಗ್ರಹಣ ಇಂದು ನಡೆಯಲಿದೆ. ಭಾರತದಲ್ಲಿ ಮಧ್ಯರಾತ್ರಿ ಭಾಗಶಃ ಚಂದ್ರಗ್ರಹಣ ಗೋಚರಿಸಲಿದೆ. ಮಧ್ಯರಾತ್ರಿ 1:5 ಗಂಟೆಗೆ ಚಂದ್ರಗ್ರಹಣ ಶುರುವಾಗಿ, 2:24ಕ್ಕೆ ಮುಕ್ತಾಯಗೊಳ್ಳಲಿದೆ. ಒಟ್ಟಾರೆ ಗ್ರಹಣದ ಅವಧಿ 1 ತಾಸು 19 ನಿಮಿಷ ಆಗಿದೆ.

    ಗ್ರಹಣದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ದೇವಾಲಯಗಳಲ್ಲಿ ಸಂಜೆಯ ಮಹಾಪೂಜೆಯ ಸಮಯ ಬದಲಾಗಿದ್ದು, ದೇವಾಲಯವನ್ನು ಕೆಲವೆಡೆ ಬೇಗನೆ ಬಂದ್‌ ಮಾಡಿದರೆ, ಕೆಲವೆಡೆ ಗ್ರಹಣ ಕಾಲದಲ್ಲಿ ಭಕ್ತರಿಗೆ ವಿಶೇಷಪೂಜೆ, ಪುನಸ್ಕಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

    ಇದು ವರ್ಷದ ಕೊನೆಯ ಗ್ರಹಣವಾಗಿದ್ದು, ಇದಾದ ಬಳಿಕ ದೇಶದಲ್ಲಿ 2025ರ ಸೆ.7ರಂದು ಖಗ್ರಾಸ ಚಂದ್ರಗ್ರಹಣ ಸಂಭವಿಸಲಿದೆ. ಕಳೆದ ಬಾರಿ ನ.8, 2022ರಂದು ಚಂದ್ರಗ್ರಹಣ ಸಂಭವಿಸಿತ್ತು. ಇಡೀ ದೇಶದಲ್ಲಿ ಚಂದ್ರಗ್ರಹಣ ಕಾಣಲಿದ್ದು, ಇದರ ಜೊತೆಗೆ ಏಷ್ಯಾ ಖಂಡ ಸೇರಿ ಎಲ್ಲ ಕಡೆಗಳಲ್ಲಿಯೂ ವೀಕ್ಷಿಸಬಹುದಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

    ಆದರೆ ಚಂದ್ರಗ್ರಹಣದ ಈ ಸಮಯದಲ್ಲಿ ದೇವಸ್ಥಾನವನ್ನು ಮುಚ್ಚಲಾಗುತ್ತದೆ. ಹೀಗಾಗಿ ಭಕ್ತರು ಈ ಸಮಯದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುವುದನ್ನು ತಪ್ಪಿಸಬೇಕು ಎಂದು ಸೂಚನೆ ನೀಡಲಾಗಿದೆ. ಅಕ್ಟೋಬರ್ 28ರ ಸಂಜೆ 7ರಿಂದ ಅಕ್ಟೋಬರ್ 29 ಬೆಳಗಿನ ಜಾವ 3.15ರವರೆಗೆ ದೇವಸ್ಥಾನದಲ್ಲಿ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ನೀಡಲಾಗುವುದಿಲ್ಲ.
    ಮೈಸೂರಿನ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನವನ್ನು ಸಂಜೆ 6ಕ್ಕೆ ಬಂದ್ ಮಾಡಲಾಗುವುದು. ಅ.29 ರಂದು ಬೆಳಗ್ಗೆ 7.30ರ ನಂತರ ಭಕ್ತಾದಿಗಳ ದರ್ಶನಕ್ಕೆ ತೆರೆಯಲು ನಿರ್ಧರಿಸಲಾಗಿದೆ. ಹುಬ್ಬಳಿಯ ವಿವಿಧ ದೇವಾಲಯಗಳಲ್ಲಿ ಗ್ರಹಣ ಸಂದರ್ಭದಲ್ಲಿ ಅಭಿಷೇಕ, ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ರಾತ್ರಿ ಗ್ರಹಣ ಅವಧಿಯಲ್ಲಿ ದೇವಾಲಯಗಳಲ್ಲಿ ವಿಶೇಷ ಅಭಿಷೇಕ ನಡೆಯಲಿದೆ. ಇನ್ನು, ಗ್ರಹಣ ನಿಮಿತ್ತ ಗೋಕರ್ಣ ಮಹಾಬಲೇಶ್ವರ ದೇವಾಲಯದಲ್ಲಿ ಸಂಜೆ 4ರಿಂದ 5.30ರ ತನಕ ಮಾತ್ರ ಆತ್ಮಲಿಂಗದ ಸ್ಪರ್ಶ ದರ್ಶನಕ್ಕೆ ಅವಕಾಶ ಇದೆ.
    ಚಂದ್ರಗ್ರಹಣ ಹಿನ್ನೆಲೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ಅಕ್ಟೋಬರ್​ 28ರಂದು ಶನಿವಾರ ಕರಾವಳಿ ದೇವಾಲಯಗಳ ದೇವರ ದರ್ಶನಗಳಲ್ಲಿ ವ್ಯತ್ಯಯ ಆಗಲಿದೆ. ಕುಕ್ಕೆ ದೇವಳದ ಪ್ರಧಾನ ಅರ್ಚಕರ ನಿರ್ದೇಶನದಂತೆ ಭಕ್ತರಿಗೆ ಶ್ರೀದೇವರ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಅ. 28ರಂದು ಶನಿವಾರ ರಾತ್ರಿಯ ಮಹಾಪೂಜೆ ಸಾಯಂಕಾಲ 6.30ಕ್ಕೆ ಮುಕ್ತಾಯಗೊಳ್ಳಲಿದೆ. ಆ ಬಳಿಕ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಅಲ್ಲದೆ ಈ ದಿನ ಸಂಜೆಯ ಆಶ್ಲೇಷ ಬಲಿ ಸೇವೆ ನೆರವೇರುವುದಿಲ್ಲ. ರಾತ್ರಿ ಪ್ರಸಾದ ಭೋಜನದ ಪ್ರಸಾದ ವಿತರಣೆ ಇರುವುದಿಲ್ಲ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap