ಬೆಂಗಳೂರು:
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿಗಳು ಇಹಲೋಕ ತ್ಯಜಿಸಿದ್ದಾರೆ. ಆಗಸ್ಟ್ 14ರಂದು ಕಲಬುರ್ಗಿಯ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಯಾಗಿದ್ದ ಡಾ. ಶರಣಬಸವಪ್ಪ ಅಪ್ಪಾಜಿಯವರು ಲಿಂಗೈಕ್ಯರಾಗಿದ್ದರು. ಅವರ ಪರಂಧಾಮದ ಬೆನ್ನಲ್ಲಿಯೇ ಚಂದ್ರಶೇಖರ ಸ್ವಾಮೀಜಿ ಕೂಡ ಕೊನೆಯುಸಿರು ಎಳೆದಿದ್ದಾರೆ. ಅವರು ಕೆಂಗೇರಿ ಬಳಿಯ ವಿಶ್ವ ಒಕ್ಕಲಿಗರ ಮಠದ ಮಠಾಧೀಶರಾಗಿದ್ದರು.
ಕಳೆದ ಕೆಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಅನಾರೋಗ್ಯದ ಕಾರಣ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅವರನ್ನು ಮಠದ ಪೀಠಾಧ್ಯಕ್ಷರನ್ನಾಗಿ ಮಾಡಿದ್ದರು. ಮಧ್ಯಾಹ್ನ 3 ಗಂಟೆಗೆ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಅಂತಿಮ ವಿಧಿವಿಧಾನ ನಡೆಯಲಿದ್ದು, ಕೆಂಗೇರಿಯಲ್ಲಿನ ಮಠದ ಆವರಣದಲ್ಲೇ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಶ್ರೀ ಚಂದ್ರಶೇಖರ ಸ್ವಾಮೀಜಿ ತಮ್ಮ ಕೆಲವು ವಿವಾದಾತ್ಮಕ ಹೇಳಿಕೆಗಳ ಮೂಲಕ ಗಮನ ಸೆಳೆದಿದ್ದರು. ವಕ್ಫ್ ಬೋರ್ಡ್ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಚಂದ್ರಶೇಖರ ಸ್ವಾಮೀಜಿ, “ಮುಸ್ಲಿಂ ಸಮುದಾಯಕ್ಕೆ ಮತದಾನದ ಹಕ್ಕು ನಿರಾಕರಿಸುವ ಕಾನೂನು ತರಬೇಕು” ಎಂದು ಹೇಳಿದ್ದರು. ಕೆಲ ತಿಂಗಳ ಹಿಂದೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಇಬ್ಬರೂ ಇರುವ ವೇದಿಕೆಯಲ್ಲಿ, “ಸಿದ್ದರಾಮಯ್ಯ ಅವರು ಮನಸ್ಸು ಮಾಡಿದ್ರೆ ಡಿ ಕೆ ಶಿವಕುಮಾರ್ ಅವರು ಸಿಎಂ ಆಗ್ತಾರೆ. ಸಿಎಂ ಕುರ್ಚಿ ಬಿಟ್ಟುಕೊಡಬೇಕು” ಎಂಬ ಹೇಳಿಕೆ ನೀಡಿ ಮುಜುಗರ ಉಂಟು ಮಾಡಿದ್ದರು.
