₹ ಚಿಹ್ನೆಯನ್ನು ಅಪಮಾನಿಸುತ್ತಿರುವದು ರಾಷ್ಟ್ರ ಹಿತಾಸಕ್ತಿಯ ವಿರೋಧ ನಡೆ : ಬಿ ವೈ ವಿಜಯೇಂದ್ರ

ಬೆಂಗಳೂರು:

    ಭಾರತದ ಆರ್ಥಿಕ ಶಕ್ತಿಯನ್ನು ಸಂಕೇತಿಸುವ ‘ರೂಪಾಯಿ ಚಿಹ್ನೆ’ ಯನ್ನು ಪಕ್ಕಕ್ಕೆ ಸರಿಸಿರುವ ತಮಿಳುನಾಡು ಸರ್ಕಾರದ ವರ್ತನೆ ಅತ್ಯಂತ ಖಂಡನೀಯ. ರೂಪಾಯಿ ಚಿಹ್ನೆಯನ್ನು ಧಿಕ್ಕರಿಸುವ ಮೂಲಕ ದೇಶದ ಐಕ್ಯತೆಯಲ್ಲಿ ಬಿರುಕು ಮೂಡಿಸುವ ಪ್ರತ್ಯೇಕತಾ ಮನೋಭಾವವನ್ನು ಪ್ರದರ್ಶಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದ್ದಾರೆ.

    ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ದಕ್ಷಿಣ ಭಾರತದಲ್ಲಿ ತಮಿಳುನಾಡಿನ ಭಾಷೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆ ಸೇರಿದಂತೆ ದಕ್ಷಿಣ ಭಾರತದ ಇತರ ರಾಜ್ಯಗಳ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಸಂರಕ್ಷಿಸಿ ಅದನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹಿಂದಿನ ಯುಪಿಎ ಸೇರಿದಂತೆ ಕಾಂಗ್ರೆಸ್ ಸರ್ಕಾರಗಳು ತೋರಿದ ಧೋರಣೆಗಳಿಗೆ ಭಿನ್ನವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್.ಡಿ.ಎ ಸರ್ಕಾರ ಅತೀವ ಕಾಳಜಿ ಹಾಗೂ ಬದ್ಧತೆಯನ್ನು ತೋರುತ್ತಿದೆ.

   ಆದರೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಡಿಎಂಕೆ ಸರ್ಕಾರದ ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್‌ ಅವರು ತಮಿಳುನಾಡಿನ ಜನರ ಭಾವನೆಯಲ್ಲಿ ಭಾಷೆ ಹಾಗೂ ಪ್ರಾಂತೀಯತೆ ಹೆಸರಿನಲ್ಲಿ ದ್ವೇಷ ಬಿತ್ತಲು ಹೊರಟಿರುವುದು ರಾಷ್ಟ್ರದ ಹಿತಾಸಕ್ತಿಗೆ ಮಾರಕ ಉಂಟುಮಾಡುವ ನಡೆಯಾಗಿದೆ.

   ಇಂತಹ ನಡವಳಿಕೆಗಳು ತಮಿಳುನಾಡಿನ ಜನತೆಯೂ ಸಹ ಒಪ್ಪಲು ಸಾಧ್ಯವಿಲ್ಲ, ಅಭಿವೃದ್ಧಿ ಇಲ್ಲದ ಆಡಳಿತದಿಂದ ಕಂಗೆಟ್ಟಿರುವ ಡಿಎಂಕೆ ಸರ್ಕಾರ ಭಾಷೆ ಹಾಗೂ ಪ್ರಾಂತೀಯತೆಯ ಹೆಸರಿನಲ್ಲಿ ಜನತೆಯ ಧಿಕ್ಕು ತಪ್ಪಿಸುವ ಮಾರ್ಗವನ್ನು ಅನುಸರಿಸುತ್ತಿದೆ, ಇದಕ್ಕೆ ತಮಿಳುನಾಡಿನ ಜನರೇ ತಕ್ಕ ಉತ್ತರ ನೀಡಲಿದ್ದಾರ ಈ ರೀತಿಯ ವರ್ತನೆಗಳನ್ನು ಈ ದೇಶದ ಯಾವುದೇ ಭಾಗದಲ್ಲಿ ನಡೆದರೂ ಅದನ್ನು ಯಾರೂ ಒಪ್ಪಲಾರರು.

    ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಯುಪಿಎ ಆಡಳಿತಾವಧಿಯಲ್ಲಿಯೇ ಅಸ್ತಿತ್ವ ಕಂಡುಕೊಂಡ ₹ ಚಿಹ್ನೆಯನ್ನು ಅಪಮಾನಿಸುತ್ತಿರುವ ತನ್ನ ಮಿತ್ರ ಪಕ್ಷದ ರಾಷ್ಟ್ರ ಹಿತಾಸಕ್ತಿಯ ವಿರೋಧದ ನಡೆಯನ್ನು ಕಾಂಗ್ರೆಸ್ ಖಂಡಿಸದೇ ಮೌನ ವಹಿಸಿರುವುದನ್ನು ನೋಡಿದರೆ ಕಾಂಗ್ರೆಸ್ ಪಕ್ಷಕ್ಕೆ ದೇಶದ ಐಕ್ಯತೆಗಿಂತಲೂ ಅಧಿಕಾರ ರಾಜಕಾರಣವೇ ತನ್ನ ಆದ್ಯತೆ ಎಂಬುದನ್ನು ಅದು ತೋರಿಸಿಕೊಳ್ಳುತ್ತಿದೆ ಎಂದಿದ್ದಾರೆ.

Recent Articles

spot_img

Related Stories

Share via
Copy link