ಲಖನೌ:
ಛಂಗೂರ್ ಬಾಬಾ ಧಾರ್ಮಿಕ ಮತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಉತ್ತರ ಪ್ರದೇಶದ ಬಲರಾಂಪುರ್‌ನ 12 ಕಡೆಗೆ ಮುಂಬೈನ ಎರಡು ಸೇರಿದಂತೆ 14 ಸ್ಥಳಗಳಲ್ಲಿ ಶೋಧ ನಡೆಸಿತು . ಬಲರಾಂಪುರ್‌ನ ಉತ್ರೌಲಾ ಮತ್ತು ಮುಂಬೈನ ಬಾಂದ್ರಾ ಮತ್ತು ಮಾಹಿಮ್‌ನಲ್ಲಿ ಬೆಳಿಗ್ಗೆ 5 ಗಂಟೆಗೆ ದಾಳಿ ಪ್ರಾರಂಭವಾಯಿತು. ಮತಾಂತರ ದಂಧೆಯ ಆರೋಪಿ ನವೀನ್ ಅವರ ಬ್ಯಾಂಕ್ ಖಾತೆಯಿಂದ ಸುಮಾರು 2 ಕೋಟಿ ರೂ.ಗಳನ್ನು ಶೆಹಜಾದ್ ಶೇಖ್ ಎಂಬ ವ್ಯಕ್ತಿಗೆ ವರ್ಗಾಯಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
ಶೆಹಜಾದ್ ಶೇಖ್‌ನ ಎರಡು ನಿವಾಸಗಳಲ್ಲಿ ಶೋಧ ಕಾರ್ಯ ಮುಂದುವರಿಸಲಾಗಿದೆ. ಉತ್ತರ ಪ್ರದೇಶದ ಸ್ವಯಂಘೋಷಿತ ದೇವಮಾನವ, ಧಾರ್ಮಿಕ-ಮತಾಂತರ ದಂಧೆಯ ಮಾಸ್ಟರ್ ಮೈಂಡ್ ಜಮಾಲುದ್ದೀನ್ ಅಲಿಯಾಸ್ ಛಂಗೂರ್ ಬಾಬಾ ವಿರುದ್ಧದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಜೋರಾಗಿ ತನಿಖೆ ಆರಂಭಿಸಿದೆ. ಸಹ ಆರೋಪಿಗಳಾದ ಯುಪಿ ಎಟಿಎಸ್ ದೂರಿನ ಆಧಾರದ ಮೇಲೆ, ಜುಲೈ 9 ರಂದು ಇಡಿ ಮತಾಂತರ ದಂಧೆಗೆ ಸಂಬಂಧಿಸಿದ ಹಣ ವರ್ಗಾವಣೆ ಅಪರಾಧಗಳ ತನಿಖೆಗಾಗಿ ಪ್ರಕರಣ ದಾಖಲಿಸಿತು .
ಕೆಲವು ವರ್ಷಗಳಲ್ಲಿ ಛಂಗೂರ್ ಬಾಬಾ 100 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಗಳಿಸಿದ್ದಾನೆ ಎಂದು ಆರೋಪಿಸಲಾಗಿದೆ. ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಿ, ಲವ್ ಜಿಹಾದ್ ನಡೆಸಿ ಮತಾಂತರ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ. ಇದಕ್ಕಾಗಿ ಭರ್ಜರಿ ಹಣವನ್ನು ಕೂಡ ಪಡೆದುಕೊಂಡಿದ್ದಾನೆ ಎಂದು ಇ.ಡಿ.ಯ ಪ್ರಾಥಮಿಕ ಸಂಶೋಧನೆಗಳು ತಿಳಿಸಿವೆ. ಮತಾಂತರ ಮಾಡಲು ಸುಮಾರು 106 ಕೋಟಿ ರೂಪಾಯಿಗಳ ವಿದೇಶಿ ನಿಧಿ ಪಡೆದಿದ್ದಾನೆ ಎನ್ನಲಾಗಿದೆ. ಈ ಹಣದ ಬಹುಪಾಲು ಮಧ್ಯಪ್ರಾಚ್ಯದ ದೇಶಗಳಿಂದ ಬಂದಿದೆ ಎಂದು ವರದಿಯಾಗಿದೆ. ಭಾರತದ ವಿವಿಧ ಭಾಗಗಳಲ್ಲಿ ಛಂಗೂರ್‌ಗೆ ಸಂಬಂಧಿಸಿದ ಅಕ್ರಮ ಆಸ್ತಿಗಳನ್ನು ಸಹ ಸಂಸ್ಥೆ ಪತ್ತೆ ಹಚ್ಚಿದೆ. ಸೈಕಲ್‌ನಲ್ಲಿ ಉಂಗುರ, ತಾಯತ ಮಾರುತ್ತಿದ್ದ ಛಂಗೂರ್ ಬಾಬಾ ಈ ದಂಧೆಯ ಮೂಲಕ ಕೋಟ್ಯಾಂತರ ರೂಪಾಯಿ ಗಳಿಸಿದ್ದಾನೆ.
ಛಂಗೂರ್ ಬಾಬಾ ಬಲರಾಂಪುರ ಜಿಲ್ಲೆಯ ಉತ್ತರೌಲಾದವನು. ಗೊಂಡಾ ಜಿಲ್ಲೆಯಲ್ಲೂ, ವಿಶೇಷವಾಗಿ ಧನೇಪುರದ ರೇತವಾಗಡ ಪ್ರದೇಶದಲ್ಲಿ ಅವನಿಗೆ ಬಲವಾದ ನೆಟ್‌ವರ್ಕ್ ಇತ್ತು. ವಜೀರ್‌ಗಂಜ್ ಮತ್ತು ನವಾಬ್‌ಗಂಜ್‌ನಲ್ಲಿ ತನ್ನ ಜಾಲವನ್ನು ಹೆಣೆದಿದ್ದ. ಈತನ ಟೀಮ್ ಪ್ರೀತಿ ಪ್ರೇಮದ ನಾಟಕವಾಡಿ ಬಳಿಕ ಮದುವೆಯಾಗಿ ಮತಾಂತರ ಮಾಡಿ ವಂಚಿಸುತ್ತಿದ್ದರು.
