ಬೆಂಗಳೂರು:
ಹೆಚ್’ಡಿ ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಟಿಕೆಟ್ ವಿಚಾರ ಮೈತ್ರಿ ಪಕ್ಷದಲ್ಲಿನ ದಂಗಲ್‌ಗೆ ಕಾರಣವಾಗಿದ್ದು, ಲೋಕಸಭೆಯಲ್ಲಿ ಜೊಡೆತ್ತಿನ ರೀತಿ ಒಂದಾಗಿದ್ದ ಪಕ್ಷಗಳ ನಾಯಕರು ಇದೀಗ ಚುನಾವಣೆಗೆ ಪ್ರತ್ಯೇಕವಾಗಿ ರಣತಂತ್ರ ರೂಪಿಸುವಲ್ಲಿ ನಿರತರಾಗಿದ್ದಾರೆ.
ಸಿಪಿ ಯೋಗೇಶ್ವರ್‌ಗೆ ಟಿಕೆಟ್ ನೀಡಬೇಕು ಎಂದು ಬಿಜೆಪಿ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ಅತ್ತ ಟಿಕೆಟ್ ತನ್ನಲ್ಲೇ ಉಳಿಸಿಕೊಳ್ಳಲು ಜೆಡಿಎಸ್ ಕಸರತ್ತು ನಡೆಸುತ್ತಿದೆ. ಈಗಾಗಲೇ ರಾಮನಗರ ಜಿಲ್ಲಾ ಬಿಜೆಪಿ ಘಟಕವೂ ಯೋಗೇಶ್ವರ್ ಅವರಿಗೆ ಬೆಂಬಲ ನೀಡಿದೆ. ಹೀಗಾಗಿ, ಎನ್’ಡಿಎಗೆ ಯೋಗೇಶ್ವರ್ ಅವರು ಕಗ್ಗಂಟಾಗಿ ಪರಿಣಮಿಸಿದ್ದಾರೆ.
ಯೋಗೇಶ್ವರ್ ಅವರನ್ನು ಎನ್‌ಡಿಎ ಅಭ್ಯರ್ಥಿಯನ್ನಾಗಿ ಸ್ವೀಕರಿಸಲು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ನಿರಾಕರಿಸಿದ್ದರೂ, ಯೋಗೇಶ್ವರ್ ಅವರು ಈಗಾಗಲೇ ಚುನಾವಣೆಗೆ ಸಿದ್ಧತೆ ಆರಂಭಿಸಿ, ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಪಕ್ಷದ ಮೇಲೆ ಒತ್ತಡ ಹೇರುತ್ತಿದ್ದಾರೆನ್ನಲಾಗಿದೆಯ
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಾತನಾಡಿ, ಯೋಗೇಶ್ವರ ಅವರು ಎನ್‌ಡಿಎ ಅಭ್ಯರ್ಥಿಯಾದರೆ ಒಳ್ಳೆಯದು ಎಂದು ಈಗಾಗಲೇ ಹೈಕಮಾಂಡ್’ಗೆ ತಿಳಿಸಿದ್ದೇವೆ. ಕುಮಾರಸ್ವಾಮಿ ಅವರ ನಿರ್ಧಾರವೇ ಪ್ರಮುಖವಾಗಿರುವುದರಿಂದ ಅವರೊಂದಿಗೂ ಮಾತನಾಡಿದ್ದೇವೆ. ನಮ್ಮ ಮಿತ್ರ ಪಕ್ಷ ಜೆಡಿಎಸ್ ಕೂಡ ಒಳಗೊಂಡಿರುವ ಕೇಂದ್ರ ಸಂಸದೀಯ ಮಂಡಳಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಉಪಚುನಾವಣೆ ಘೋಷಣೆಯಾದ ನಂತರ ನಾವು ಕೇಂದ್ರ ನಾಯಕರನ್ನು ಭೇಟಿ ಮಾಡಿ ಯೋಗೇಶ್ವರ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವಂತೆ ಮನವಿ ಮಾಡುತ್ತೇವೆಂದು ಹೇಳಿದರು.
ಈ ನಡುವೆ ಪಕ್ಷದಿಂದ ಟಿಕೆಟ್ ಸಿಗದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಸಲು ಯೋಗೇಶ್ವರ್ ಅವರು ನಿರ್ಧರಿಸಿದ್ದು, ಅವರು ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡುವುದು ಕಷ್ಟಕರವಾಗುವುದರಿಂದ ಬಿಜೆಪಿ ಕೇಂದ್ರ ನಾಯಕತ್ವ ಹಾಗೂ ಮಾಜಿ ಪ್ರಧಾನಿ ಹೆಚ್’ಡಿ.ದೇವೇಗೌಡ ಅವರು ಮಧ್ಯಸ್ಥಿಕೆ ವಹಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಜಿಲ್ಲಾ ಮುಖಂಡರಾದ ಪ್ರಸಾದಗೌಡ ಮಾತನಾಡಿ, ಯೋಗೇಶ್ವರ್ ನೀರಾವರಿಯಲ್ಲಿ ಕ್ರಾಂತಿ ಮಾಡಿ ಚನ್ನಪಟ್ಟಣ ಜನರ ಮನ ಗೆದ್ದಿದ್ದಾರೆ. ಯೋಗೇಶ್ವರ್ ಅವರನ್ನು ಕಣಕ್ಕಿಳಿಸಿದರೆ ಈ ಭಾಗದಲ್ಲಿ ಪಕ್ಷ ಬೆಳೆಯಲು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.ಯೋಗೇಶ್ವರ್ ಅವರಿಗೆ ಟಿಕೆಟ್ ನೀಡದಿದ್ದರೆ ಸ್ಥಳೀಯ ಬಿಜೆಪಿ ನಾಯಕರು ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸುತ್ತಾರೆಯೇ ಎಂಬುದು ಇನ್ನೂ ತಿಳಿದಿಲ್ಲ ಎಂದು ರಾಜಕೀಯ ತಜ್ಞರು ಹೇಳಿದ್ದಾರೆ.
ಆದರೆ, ಈ ಭಾಗದಲ್ಲಿ ಜೆಡಿಎಸ್ ಶಕ್ತಿಯಾಗಿ ಉಳಿಯಬೇಕು ಎನ್ನುವ ಕುಮಾರಸ್ವಾಮಿ ಛಲ ಬಿಡಲು ತಯಾರಿಲ್ಲ ಎನ್ನಲಾಗುತ್ತಿದೆ.ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸುವ ಮುನ್ನ ಚನ್ನಪಟ್ಟಣ ಕ್ಷೇತ್ರವನ್ನು ಬಿಟ್ಟುಕೊಡುವ ಬಗ್ಗೆ ಕುಮಾರಸ್ವಾಮಿಯವರು ಎನ್’ಡಿಎ ಜೊತೆಗೆ ಯಾವುದೇ ಒಪ್ಪಂದ ಮಾಡಿಕೊಂಡಿರಲಿಲ್ಲ ಎನ್ನಲಾಗಿದ್ದು, ಹೀಗಾಗಿ ಕುಮಾರಸ್ವಾಮಿ ಅವರು ಪುತ್ರ ನಿಖಿಲ್ ಅವರನ್ನು ಕಣಕ್ಕಿಳಿಸಲು ತಯಾರಿ ಆರಂಭಿಸಿದ್ದಾರೆಂದು ಮೂಲಗಳು ತಿಳಿಸಿವೆ. ಶನಿವಾರ ಬಿಡದಿ ಅತಿಥಿಗೃಹದಲ್ಲಿ ಪ್ರಮುಖ ನಾಯಕರೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಿದ್ದಾರೆಂದು ವರದಿಗಳು ತಿಳಿಸಿವೆ.