ಗುಬ್ಬಿ :
ದನ ಮೇಯಿಸಲು ಹೋಗಿದ್ದ ಮಹಿಳೆಯ ಮೇಲೆರಗಿದ ಚಿರತೆ ಕತ್ತು ಸೀಳಿ ಆಕೆಯನ್ನು ಬಲಿ ಪಡೆದ ದುರ್ಘಟನೆ ತಾಲ್ಲೂಕಿನ ಗಡಿಭಾಗ ಮಣೆಕುಪ್ಪೆ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಮಣೆಕುಪ್ಪೆ ಗ್ರಾಮದ ವಾಸಿ ಭಾಗ್ಯಮ್ಮ(35) ಎಂದಿನಂತೆ ದನಗಳನ್ನು ಮೇಯಿಸಲು ಹೊಲದತ್ತ ತೆರಳಿದ್ದ ಸಂದರ್ಭದಲ್ಲಿ ಮಧ್ಯಾಹ್ನ ವೇಳೆ ಪೊದೆಯಿಂದ ಜಿಗಿದ ಚಿರತೆ ಭಾಗ್ಯಮ್ಮ ಮೇಲೆರಗಿ ಕತ್ತು ಹಿಡಿದು ಸುಮಾರು ದೂರ ಎಳೆದೊಯ್ದು ಅರಣ್ಯದಲ್ಲಿ ಕತ್ತು ಸೀಳಿ ಬಲಿ ಪಡೆದು ನಾಪತ್ತೆಯಾಗಿದೆ. ಈ ಘಟನೆ ಮಣೆಕುಪ್ಪೆ ಗ್ರಾಮಸ್ಥರಿಗೆ ಶಾಕ್ ನೀಡಿದೆ. ಈ ಹಿಂದೆ ಸಮರ್ಥಗೌಡ ಎಂಬ ಪುಟ್ಟ ಬಾಲಕನ ಬಲಿ ಪಡೆದ ಬಳಿಕ ನಿರಂತರವಾಗಿ ಈ ಭಾಗದಲ್ಲಿ ಜನರ ಮೇಲೆ ದಾಳಿ ಮಾಡುವ ಪ್ರವೃತ್ತಿ ಚಿರತೆ ಬೆಳೆಸಿಕೊಂಡಿದೆ. ಈ ಬಗ್ಗೆ ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗುಬ್ಬಿ, ಕುಣಿಗಲ್ ಹಾಗೂ ತುಮಕೂರು ಗ್ರಾಮಾಂತರ ತಾಲ್ಲೂಕಿನ ಗಡಿ ಭಾಗದಲ್ಲಿ ಕಾಣಿಸಿಕೊಂಡ ನರಭಕ್ಷಕ ಚಿರತೆ ಒಂದು ವರ್ಷದಲ್ಲಿ ಐದು ಮಂದಿ ಬಲಿ ಪಡೆದಿರುವ ಬಗ್ಗೆ ಕ್ರಮ ವಹಿಸುವಲ್ಲಿ ಅರಣ್ಯ ಇಲಾಖೆ ವೈಫಲ್ಯ ಕಾಣುತ್ತಿದೆ ಎಂಬ ಚರ್ಚೆ ಆತಂಕಕ್ಕೆ ಒಳಗಾದ ಸ್ಥಳೀಯರಲ್ಲಿ ಕೇಳಿ ಬರುತ್ತಿದೆ. ರಸ್ತೆ ಬದಿ ಹಾಗೂ ಸರ್ಕಾರಿ ಬೀಳು, ಹೊಲಗಳಲ್ಲಿ ಬೆಳೆದ ಪೊದೆ ತೆರೆವು ಮಾಡುವ ಕಾರ್ಯವಷ್ಟೇ ನಡೆದು ಚಿರತೆ ಹಿಡಿಯಲಾಗಲಿಲ್ಲ ಎಂಬ ಅಳಲು ಗ್ರಾಮಸ್ಥರಿಂದ ಕೇಳಿ ಬಂದಿದೆ.
ಕೆಲ ದಿನಗಳ ನಂತರ ಬೋನಿನಲ್ಲಿ ಚಿರತೆ ಬಂಧಿಸಿರುವುದಾಗಿ ಈ ಹಿಂದೆ ಅರಣ್ಯ ಇಲಾಖೆ ಕಾರ್ಯಾಚರಣೆ ಮಾಡಿದಂತೆ ಕೈ ತೊಳೆದುಕೊಂಡಿತ್ತು. ಆದರೆ ಮತ್ತೆ ಮತ್ತೆ ಚಿರತೆ ದಾಳಿ ಈ ಭಾಗದಲ್ಲಿ ನಡೆದಿರುವುದು ಆತಂಕ ತಂದಿದೆ. ಬೋನಿಗೆ ಬಿದ್ದ ಚಿರತೆ ಯಾವುದು ಎಂದು ಪ್ರಶ್ನಿಸಿದ ಮುಖಂಡ ವಿಜಯ್‍ಕುಮಾರ್, ಸ್ಥಳೀಯರ ಆಕ್ರೋಶಕ್ಕೆ ಬೋನಿನ ಹೈಡ್ರಾಮ ನಡೆದಿದೆಯೇ ಎಂದು ಅನುಮಾನ ವ್ಯಕ್ತಪಡಿಸಿದರು. ಗಡಿಭಾಗದಲ್ಲಿ ಚಿರತೆಗೆ ಮತ್ತಷ್ಟು ಬಲಿ ಆಗುವ ಮುನ್ನಾ ಜಿಲ್ಲಾಡಳಿತವು ಅರಣ್ಯ ಇಲಾಖೆಯ ವಿಶೇಷ ತಂಡ ಕರೆಸಿ ನರಭಕ್ಷಕ ಚಿರತೆ ಬಂಧಿಸಬೇಕು ಎಂದು ಆಗ್ರಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ