ಬೆಂಗಳೂರು : ಅರವಳಿಕೆಗೂ ಬಗ್ಗದ ಚಿರತೆ….!

ಬೆಂಗಳೂರು

    ಬೆಂಗಳೂರಿನಲ್ಲಿ ಆತಂಕ ಮೂಡಿಸಿರುವ ಚಿರತೆಯನ್ನು ಪತ್ತೆ ಹಚ್ಚುವಲ್ಲಿ ಕೊನೆಗೂ ಅಧಿಕಾರಿಗಳು ಯಶಸ್ವಿಯಾಗಿದ್ದಾರೆಯಾದರೂ, ಆದರೆ ಅದು ವೈದ್ಯರ ಮೇಲೆ ದಾಳಿ ಮಾಡಿ ಮತ್ತೆ ಪರಾರಿಯಾಗಿದೆ.

    ಬೆಂಗಳೂರಿನ ಆನೇಕಲ್ ತಾಲೂಕಿನ ಬೊಮ್ಮನಹಳ್ಳಿಯ ಕೂಡ್ಲು ಗೇಟ್‌ ಬಳಿ‌ ಇರುವ ಕೃಷ್ಣಾ ರೆಡ್ಡಿ ಬಡಾವಣೆಯ ನಿರ್ಮಾಣ ಹಂತದಲ್ಲಿರುವ ಪಾಳು ಬಿದ್ದ ಕಟ್ಟಡದಲ್ಲಿ ಚಿರತೆ ಇರುವಿಕೆ ಕುರಿತು ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ನಡೆಸಿದರು. ಆದರೆ ಚಿರತೆ ಆ ತಂಡದಲ್ಲಿದ್ದ ವೈದ್ಯ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ದಾಳಿ ಮಾಡಿ ಪರಾರಿಯಾಗಿದೆ ಎಂದು ತಿಳಿದುಬಂದಿದೆ.

    ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಇರುವಿಕೆ ಕಂಡು ಕಾರ್ಯಾಚರಣೆ ನಡೆಸಿದ್ದು ಈ ವೇಳೆ ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಿದ್ದಾರೆ. ಆದರೆ ಚುಚ್ಚುಮುದ್ದಿಗೂ ಬಗ್ಗದ ಚಿರತೆ ಕಟ್ಟಡದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಜಿಗಿದು ಪರಾರಿಯಾಗುತ್ತಿದೆ. ಚಿರತೆಗೆ ಮೊದಲ ಸುತ್ತಿನ ಅರಿವಳಿಕೆ ನೀಡಲಾಗಿದೆ. ಆದರೆ ಮಂಪರು ಕಡಿಮೆಯಾದಂತೆ ಚಿರತೆ ಕೆಲವೇ ನಿಮಿಷದಲ್ಲಿ ಎಚ್ಚೆತ್ತು ಸಿಬ್ಬಂದಿ ಮೇಲೆ ದಾಳಿ ಮಾಡಿದೆ. ದಾಳಿ ಮಾಡಿದ ಬಳಿಕ ಅದು ಬೇಸ್‌ಮೆಂಟ್‌ನಿಂದ ತಪ್ಪಿಸಿಕೊಂಡಿದ್ದು ಬೇರೆ ಮಹಡಿಗೆ ಹೋಗಿದೆ. ಈಗ ಅದನ್ನು ಬೆನ್ನಟ್ಟಲು ಅಧಿಕಾರಿಗಳು ಮುಂದಾಗಿದ್ದಾರೆ. ಕಾರ್ಯಾಚರಣೆಗೆ ಹುಣಸೂರಿನಿಂದ ವನ್ಯ ಜೀವಿ ರಕ್ಷಣಾ ತಂಡ ಆಗಮಿಸಿತ್ತು. ಜತೆಗೆ ವನ್ಯ ಜೀವಿ ಸಂರಕ್ಷಣಾ ವಿಭಾಗದ ಶಾರ್ಪ್ ಶೂಟರ್ಸ್ ಕೂಡಾ ಬಂದಿದ್ದರು. 

   ಬುಧವಾರ ಮುಂಜಾನೆ ಕಟ್ಟಡದ ಎಲ್ಲ ಸ್ಕೆಚ್‌ಗಳೊಂದಿಗೆ ಕಾಲಿಟ್ಟ ಅರಣ್ಯಾಧಿಕಾರಿಗಳು, ವೈದ್ಯಾಧಿಕಾರಿಗಳಿಗೆ ಕಟ್ಟಡದ ಬೇಸ್‌ಮೆಂಟ್‌ನಲ್ಲೇ ಚಿರತೆ ಕಂಡಿದೆ. ಕೂಡಲೇ ಸಜ್ಜಿತರಾದ ಅಧಿಕಾರಿಗಳು ಅದಕ್ಕೆ ಅರಿವಳಿಕೆ ಪ್ರಯೋಗವನ್ನು ನಡೆಸಿದ್ದಾರೆ. ಆದರೆ ಆ ಹೊತ್ತಿಗೇ ಚಿರತೆ ಇಬ್ಬರು ವೈದ್ಯಾಧಿಕಾರಿಗಳ ಮೇಲೆ ದಾಳಿ ಮಾಡಿ ಅಲ್ಲಿಂದ ಪರಾರಿಯಾಗಿದೆ ಎಂದು ತಿಳಿದುಬಂದಿದೆ. ಗಾಯಗೊಂಡ ವೈದ್ಯರನ್ನು ಕೂಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

   ಸಾಮಾನ್ಯವಾಗಿ ಯಾವುದೇ ಪ್ರಾಣಿಗೆ ಅರವಳಿಕೆ ಮದ್ದು ನೀಡಬೇಕಾದ್ರೆ ಹೆಚ್ಚು ಮಾಂಸ ಇರುವ ಸ್ಥಳ ನೋಡಿ ಹೊಡೆಯಬೇಕು. ಆದರೆ, ಅರಿವಳಿಕೆ ಹಾಕುವ ಪ್ರಯತ್ನದಲ್ಲಿ ವೈದ್ಯರು ವಿಫಲವಾಗಿದ್ದಾರೆ. ಎರಡು ಬಾರಿ ಅರವಳಿಕೆ ಮದ್ದು ಹೊಡೆದರೂ ಸರಿಯಾದ ಜಾಗಕ್ಕೆ ಬಿದ್ದಿರಲಿಲ್ಲ. ಎರಡನೇ ಬಾರಿ ಹೊಡೆದ ಅರಿವಳಿಕೆ ಯಶಸ್ವಿಯಾಗಿದೆ ಎಂದು ತಿಳಿದು ಡಾ. ಕಿರಣ್‌ ಅವರು ಪರಿಶೀಲನೆಗೆ ಮುಂದಾಗಿದ್ದರು. ಆದರೆ ಅಷ್ಟರಲ್ಲಿ ಚಿರತೆ ಕಿರಣ್ ಮೇಲೆ ದಾಳಿ ಮಾಡಿ ಪರಾರಿಯಾಗಿದೆ. ಕಿರಣ್ ಅವರ ಕುತ್ತಿಗೆ ಭಾಗ ಮತ್ತು ಕೈಗೆ ಪರಚಿ ಚಿರತೆ ಓಡಿ ಹೋಗಿದೆ. ಓಡುವ ಭರದಲ್ಲಿ ಇನ್ನಿಬ್ಬರ ಮೇಲೆಯೂ ದಾಳಿ ಮಾಡಿದೆ ಎಂದು ತಿಳಿದುಬಂದಿದೆ.

    ಕೂಡ್ಲು ಸಮೀಪದ ಕೃಷ್ಣಾರೆಡ್ಡಿ ಬಡಾವಣೆಯಲ್ಲಿ ಕಳೆದ ಭಾನುವಾರ ರಾತ್ರಿ ಚಿರತೆಯೊಂದು ಓಡಾಡಿತ್ತು. ರಾತ್ರಿ 11 ಗಂಟೆಗೆ ಕಾಂಪೌಂಡ್ ಗೋಡೆ ಜಿಗಿದು ಓಡಿದ್ದನ್ನು ಪರಪ್ಪನ ಅಗ್ರಹಾರ ಲಾ ಆ್ಯಂಡ್ ಆರ್ಡರ್ ಪೊಲೀಸರು ಗಮನಿಸಿದ್ದರು. ಮರುದಿನ ಗಮನಿಸುವಾಗ ಅಲ್ಲಿ ಚಿರತೆಯ ಹೆಜ್ಜೆಗಳು ಪತ್ತೆಯಾಗಿತ್ತು. ಕಡೆಂಜಾ ಅಪಾರ್ಟ್‌ಮೆಂಟ್‌ನಲ್ಲಿ ಮಧ್ಯಾಹ್ನದ ಹೊತ್ತಿಗೇ ಚಿರತೆ ಮೆಟ್ಟಿಲು ಹತ್ತಿ ಹೋಗುವುದು ಸಿಸಿ ಟಿವಿಯಲ್ಲಿ ದಾಖಲಾಗಿತ್ತು.

   ಚಿರತೆ ಸೆರೆ ಕಾರ್ಯಾಚರಣೆಗೆ ಬೆಂಗಳೂರು ನಗರ ವಿಭಾಗದ ಅರಣ್ಯ ಸಿಬ್ಬಂದಿ, ಮೈಸೂರಿನಿಂದ ಆಗಮಿಸಿರುವ ಚಿರತೆ ಕಾರ್ಯಪಡೆ ಸಿಬ್ಬಂದಿ, ಬನ್ನೇರಘಟ್ಟ ಜೈವಿಕ ಉದ್ಯಾನದ ತಂಡದೊಂದಿಗೆ ಜಂಟಿ ಕಾರ್ಯಾಚರಣೆ ನಡದಿದೆ. ಪೊಲೀಸರು ಭದ್ರತೆಯನ್ನು ಒದಗಿಸಿದ್ದಾರೆ. ಖುದ್ದು ಪಿಸಿಸಿಎಫ್‌( ವನ್ಯಜೀವಿ) ಸುಭಾಷ್‌ ಮಳಖೆಡ್‌, ಬೆಂಗಳೂರು ಸಿಸಿಎಫ್‌ ಲಿಂಗರಾಜು ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದಾರೆ. ಎರಡು ಥರ್ಮಲ್‌ ಡ್ರೋಣ್‌ ಬಳಸಿ ಚಿರತೆ ಇರುವಿಕೆಯನ್ನು ಪತ್ತೆ ಮಾಡಲಾಗಿತ್ತು. ಆಹಾರವಿಲ್ಲದೇ ನಿತ್ರಾಣಗೊಂಡಂತಿರುವ ಚಿರತೆಯನ್ನು ಇಂದೇ ಸೆರೆಹಿಡಿಯಲು ಅರಣ್ಯ ಇಲಾಖೆ ಕಾರ್ಯಯೋಜನೆ ರೂಪಿಸಿಕೊಂಡು ಕಾರ್ಯಾಚರಣೆ ನಡೆಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap