ಬೆಂಗಳೂರು :
ಕಲರ್ಸ್ ಕನ್ನಡ ವಾಹಿನಿಯಲ್ಲಿ ವಾರದ ದಿನಗಳಲ್ಲಿ ಧಾರಾವಾಹಿಗಳು ಪ್ರಸಾರ ಕಂಡರೆ, ವಾರಾಂತ್ಯದಲ್ಲಿ ವಿವಿಧ ರೀತಿಯ ರಿಯಾಲಿಟಿ ಶೋಗಳು ಪ್ರಸಾರ ಕಾಣುತ್ತವೆ. ಈಗ ‘ಕ್ವಾಟ್ಲೆ ಕಿಚನ್’ ಹೆಸರಿನ ಶೋ ಆರಂಭ ಆಗಿದೆ. ಈ ಶೋನಲ್ಲಿ ಅಡುಗೆಯ ಜೊತೆಗೆ ನಗುವನ್ನೂ ಬಡಿಸುವ ಕೆಲಸ ಆಗುತ್ತಿದೆ. ಈ ಶೋನ ಅನುಪಮಾ ಗೌಡ ಹಾಗೂ ಕುರಿ ಪ್ರತಾಪ್ ನಡೆಸಿಕೊಡುತ್ತಾರೆ. ಈ ಶೋನ ಸ್ಪರ್ಧಿ ಆಗಿದ್ದ ಕೆಂಪಮ್ಮ ಅವರು ಶೂಟ್‌ನಿಂದ ದಿಢೀರ್ ಆಚೆ ನಡೆದಿದ್ದಾರೆ.
ಕೆಂಪಮ್ಮ ಅಡುಗೆಯನ್ನೇ ನಂಬಿಕೊಂಡಿದ್ದವರು. ಕಳೆದ 25 ವರ್ಷಗಳಿಂದ ಬೆಂಗಳೂರಿನ ವಿಧಾನಸೌಧ ಸಮೀಪ ಶುಚಿ-ರುಚಿ ಅಡುಗೆಯನ್ನು ಮಾಡುತ್ತಾ ಬರುತ್ತಿದ್ದಾರೆ. ಅವರಿಗೆ ‘ಕ್ವಾಟ್ಲೆ ಕಿಚನ್’ನಲ್ಲಿ ಕುಕ್ ಆಗಿ ಸ್ಪರ್ಧಿಸೋ ಅವಕಾಶ ಸಿಕ್ಕಿತು. ಅವರು ತಮ್ಮ ಭಿನ್ನ ಮ್ಯಾನರಿಸಂನಿಂದ ಕರ್ನಾಟಕದಾದ್ಯಂತ ಮನೆಮಾತಾಗಿದ್ದರು. ಅವರು ಶೋನಿಂದ ಹೊರ ನಡೆದಿದ್ದಾರೆ.
ವಿಧಾನಸೌಧದ ಸಮೀಪ ಪ್ರತಿದಿನವೂ ಎರಡು ಸಾವಿರಕ್ಕೂ ಹೆಚ್ಚು ಜನರಿಗೆ ಇವರ ಕೈರುಚಿ ತಲುಪುತ್ತದೆ. ಮುದ್ದೆ, ಅನ್ನ, ಸಾರು ಸೇರಿದಂತೆ ವಿವಿಧ ರೀತಿಯ ಅಡುಗೆ ಮಾಡಿ ಬಡಿಸುತ್ತಾರೆ. ಅವರು ಅಕ್ಷರ ಕಲಿಯದೇ ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಅವರು ಪತಿಯನ್ನು ಕೂಡ ಕಳೆದುಕೊಂಡಿದ್ದಾರೆ. ಅವರು ಒಬ್ಬರೇ ಮೆಸ್ ನಡೆಸಿಕೊಂಡು ಬಂದಿರುವುದು ಇವರ ಹಿರಿಮೆ.
ಕ್ವಾಟ್ಲೆ ಕಿಚನ್‌ನಲ್ಲಿ ಕುಕ್ ಆಗಿ ತಮ್ಮ ಕೈಚಳಕ ತೋರಿಸಿದ ಕೆಂಪಮ್ಮ ಎಲ್ಲರ ಮನ ಸೆಳೆದರು. ಶೆಫ್ ಕೌಷಿಕ್, ಜಡ್ಜ್ ಶೃತಿ ಸೇರಿದಂತೆ ಕಿಚನ್‌ನಲ್ಲಿ ಎಲ್ಲರಿಗೂ ಇವರೆಂದರೆ ಅಚ್ಚುಮೆಚ್ಚಾಗಿತ್ತು. ಅವರು ‘ಕುಕ್ ಆಫ್ ದ ವೀಕ್’ ಬಿರುದು ಕೂಡ ಪಡೆದಿದ್ದರು. ಕ್ವಾಟ್ಲೆ ಕಿಚನ್‌ನಲ್ಲಿ ನೂಡಲ್ಸ್, ಬರ್ಗರ್ ಸೇರಿದಂತೆ ಹಲವು ರೀತಿಯ ಕಾಂಟಿನೆಂಟಲ್ ಅಡುಗೆಯನ್ನೂ ಮಾಡಿ ಕೆಂಪಮ್ಮ ಭೇಷ್ ಎನಿಸಿಕೊಂಡವರು. ಇವರು ಡೇಂಜರ್ ಜೋನ್‌ಗೆ ಬಂದಿದ್ದರು. ಇದರಿಂದ ಹತಾಶರಾಗಿ ಅಚಾನಕ್ಕಾಗಿ ಸ್ಪರ್ಧೆಯಿಂದ ಹೊರನಡೆದಿದ್ದಾರೆ. ಈಗಾಗಲೇ ಸೋನಿಯಾ ಪೊನ್ನಮ್ಮ ಮತ್ತು ಪ್ರೇರಣಾ ಕಂಬಂ ಎಲಿಮಿನೇಟ್ ಆಗಿದ್ದು, ಇದೀಗ ಕೆಂಪಮ್ಮ ಸ್ಪರ್ಧೆಯಿಂದ ಹೊರ ಹೋಗಿದ್ದಾರೆ.








