ಚೇಳೂರು :
ಕೊರೊನಾ ಸಂಕಷ್ಟದಲ್ಲಿರುವ ಕಾರ್ಮಿಕರು ಹಾಗೂ ಕೂಲಿಕಾರರು ಮತ್ತು ವಲಸೆ ಕೆಲಸಗಾರರಿಗೆ ಸಹಾಯವಾಗಲಿ ಎಂದು ಸರಕಾರದ ವತಿಯಿಂದ ಆಹಾರದ ಕಿಟ್‍ಗಳನ್ನು ನೀಡಲಾಗುತ್ತಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಗುಬ್ಬಿ ತಾಲೂಕಿನ ಚೇಳೂರು ಹೋಬಳಿಯ ಹನುಪನಕುಂಟೆಯಲ್ಲಿ ಎತ್ತಿನಹೊಳೆ ಯೋಜನೆಯ ಕೆಲಸಗಾರರಿಗೆ ಆಹಾರದ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು ಈ ಕಾರ್ಮಿಕರಲ್ಲದೆ ತಾಲೂಕಿನ ಇತರೆ ಕಾರ್ಮಿಕರಿಗೂ ಆಹಾರದ ಕಿಟ್‍ಗಳನ್ನು ಸರಕಾರದಿಂದ ನೀಡುತ್ತಿದ್ದು, ಕಿಟ್‍ಗಳನ್ನು ಕಾರ್ಮಿಕರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಎತ್ತಿನಹೊಳೆ ಯೋಜನೆಯ ಕಾಮಗಾರಿ ತಾಲ್ಲೂಕಿನಲ್ಲಿ ಬಹುತೇಕ ಮುಗಿದಿದ್ದು, ಕೆಲವು ತಾಲೂಕುಗಳಲ್ಲಿ ಇನ್ನೂ ಆರಂಭವಾಗಿಲ್ಲ. ಲಾಕ್‍ಡೌನ್ ಆದ ಪರಿಣಾಮ ಕೆಲಸ ಕಾರ್ಯಗಳು ಬಹಳ ನಿಧಾನಗತಿಯಲ್ಲಿ ಸಾಗಿದ್ದು ಈಗ ಅವೆಲ್ಲವು ಮುಗಿದಿದ್ದು, ಇನ್ನೂ ಮುಂದೆ ಕಾಮಾಗಾರಿಗಳು ಬೇಗ ಮುಗಿದು ನಮ್ಮ ಭಾಗಕ್ಕೆ ಹೆಚ್ಚಿನ ನೀರು ಹರಿದರೆ ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ನೀರಾವರಿಯಾಗುತ್ತದೆ.
ಎತ್ತಿನಹೊಳೆ ಯೋಜನೆಯು ನಮ್ಮ ತಾಲ್ಲೂಕಿನಲ್ಲಿ ಬಹಳ ವಿಶೇಷವಾಗಿ ರೂಪುಗೊಂಡಿದ್ದು, ನಮ್ಮ ತಾಲೂಕಿನಲ್ಲಿ ಅತ್ಯಂತ ಎತ್ತರದಲ್ಲಿ ನೀರು ಹರಿಯುತ್ತದೆ. ಬಹುಶಹ ಇದು ಭಾರತದಲ್ಲೆ ಬಹಳ ಎತ್ತರದಲ್ಲಿ ನೀರು ಹರಿಯುವ ಸ್ಥಳವೆಂದು ಗುರುತು ಮಾಡಲಾಗಿದೆ. ಮುಂದಿನ ದಿನದಲ್ಲಿ ಇದೇ ಒಂದು ಪ್ರವಾಸಿ ತಾಣವಾಗಿ ನಿರ್ಮಾಣವಾಗುವ ಸಾಧ್ಯತೆ ಇದೆ. ಸರಕಾರ ಇಂತಹ ವಿಶೇಷತೆಯನ್ನು ಗಮನಿಸಿ ಇಲ್ಲಿನ ಪ್ರವಾಸಿ ತಾಣಗಳನ್ನು ಗುರುತು ಮಾಡಿದರೆ ಒಳ್ಳೆಯದು ಎಂದು ತಿಳಿಸಿದರು.
ತಹಶೀಲ್ದಾರ್ ಡಾ.ಪ್ರದೀಪ್‍ಕುಮಾರ್ ಮಾತನಾಡಿ ತಾಲೂಕಿನಲ್ಲಿ ಸಾಕಷ್ಟು ಕೊರೊನಾ ಸೊಂಕು ಕಡಿಮೆಯಾಗಿದೆ ಆದರೂ ಸಹ ಪ್ರತಿಯೊಬ್ಬರು ಮಾಸ್ಕ್ ಮತ್ತು ಅಂತರವನ್ನು ಕಾಪಾಡಿಕೊಳ್ಳಬೇಕಾಗಿದೆ. ಕಾರ್ಮಿಕ ಇಲಾಖೆಯ ವತಿಯಿಂದ ಆಹಾರದ ಕಿಟ್ ವಿತರಣೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಬೇರೆ ವಲಸೆ ಕಾರ್ಮಿಕರುಗಳಿಗೂ ನೀಡಲಾಗುತ್ತದೆ ಎಂದು ತಿಳಿಸಿದರು.
ಕಾರ್ಮಿಕ ನೀರಿಕ್ಷಕಿ ಸುಶೀಲಾ ಮಾತನಾಡಿ, ತಾಲೂಕಿನಲ್ಲಿ ಕಾರ್ಮಿಕರಿಗೆ ಆಹಾರದ ಕಿಟ್ ನೀಡಲು ಆರಂಭ ಮಾಡಲಾಗಿದೆ. ನೋಂದಾಯಿತ ಕಟ್ಟಡ ಕಾರ್ಮಿಕರುಗಳಿಗೆ ಇತರೆ ಫಲಾನುಭವಿಗಳಿಗೆ ದೂರವಾಣಿ ಕರೆ ಮಾಡಿ ಕಿಟ್‍ಗಳನ್ನು ಅವರಿಗೆ ತಲುಪಿಸುವ ಕೆಲಸವನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎತ್ತಿನಹೊಳೆ ಯೋಜನೆಯ ಎಇಇ ಸುರೇಶ್, ಕಾರ್ಮಿಕ ಇಲಾಖೆಯ ಡಿಇಒ ವಸಂತ ಹಾಗೂ ಎತ್ತಿನ ಹೊಳೆ ಯೋಜನೆಯ ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
