ಬೆಳಗಾವಿ:
ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಬೆಲೆ ಏರಿಕೆ ಸಾಮಾನ್ಯ ಎಂದು ಹೇಳುವ ಮೂಲಕ ರಾಜ್ಯದಲ್ಲಿ ಇತ್ತೀಚೆಗೆ ಹಾಲು ಮತ್ತು ಇಂಧನ ಬೆಲೆ ಏರಿಕೆಯಾಗುತ್ತಿರುವುದನ್ನು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2014ರಲ್ಲಿ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಬೆಲೆಗಳನ್ನು ಹೆಚ್ಚಿಸಲಾಗಿತ್ತು. ಕರ್ನಾಟಕಕ್ಕೆ ಬರಬೇಕಿದ್ದ ಅನುದಾನವನ್ನು ಕೂಡ ಕೇಂದ್ರ ಸರ್ಕಾರ ಕೊಟ್ಟಿಲ್ಲ. ಮಹಾರಾಷ್ಟ್ರ, ತೆಲಂಗಾಣ ಸೇರಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಕಡಿಮೆ ಇದೆ ಎಂದು ಹೇಳಿದರು.
ಮಳೆಗಾಲದಲ್ಲಿ ಹಾಲು ಹೆಚ್ಚು ಶೇಖರಣೆ ಆಗಲಿದ್ದು, ಹಾಗಾಗಿ, 50 ಎಂಎಲ್ ಹೆಚ್ಚು ಮಾಡಿದ್ದೇವೆ. ಎರಡು ರೂ. ದರ ಹೆಚ್ಚಿಸುವ ಜೊತೆಗೆ 50 ಎಂಎಲ್ ಹಾಲು ಕೂಡ ಹೆಚ್ಚಿಸಿದ್ದೇವೆ. ರೈತರಿಗೆ ಈಗಾಗಲೇ ಐದು ರೂಪಾಯಿ ಪ್ರೋತ್ಸಾಹಧನ ಕೊಡುತ್ತಿದ್ದೇವೆ. ಹಾಗಾಗಿ, ಹೆಚ್ಚುವರಿ ಹಣ ಕೊಡಲ್ಲ. ಹಾಲು ಹೆಚ್ಚು ಉತ್ಪಾದನೆ ಆಗ್ತಿತ್ತು ಅದನ್ನ ಕೊಳ್ಳಲು 50 ಎಂಎಲ್ ಜಾಸ್ತಿ ಮಾಡಿದ್ದೇವೆ. ಅದಕ್ಕೆ ಎರಡು ರೂಪಾಯಿ ಪಡೆಯುತ್ತಿದ್ದೇವೆಂದು ತಿಳಿಸಿದರು.
ಗ್ಯಾರಂಟಿ ಯೋಜನೆಯಿಂದ ಸರ್ಕಾರದ ಖಜಾನೆ ಖಾಲಿ ಎಂದು ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿ, ಹೊಸ ಸರ್ಕಾರ ಬಂದ ಮೇಲೆ ಗ್ಯಾರಂಟಿ ಕೊಟ್ಟು ಯಾವುದೇ ಅಭಿವೃದ್ಧಿ ನಿಲ್ಲಿಸಿಲ್ಲ. ಐದು ವರ್ಷ ಬಿಜೆಪಿಯವರು ಫೇಲ್ ಆಗಿದ್ದಕ್ಕೆ ಜನ ನಮಗೆ ಅಧಿಕಾರ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರ ನಮಗೆ ಕೊಡಬೇಕಾದ ಎನ್‌ಡಿಆರ್‌ಎಫ್ ಅನುದಾನ ಕೊಡಲಿಲ್ಲ. ಸುಪ್ರೀಂ ಕೋರ್ಟ್ಗೆ ಹೋಗಿ ನಾವು ಅನುದಾನ ತಂದಿದ್ದೇವೆ. ವಿರೋಧ ಪಕ್ಷದವರಿಗೆ ಕೆಲಸ ಇಲ್ಲಾ, ಹಾಗಾಗಿ ಏನೇನೋ ಮಾತನಾಡುತ್ತಿದ್ದಾರೆಂದು ಕಿಡಿಕಾರಿದರು.
