ಮುಂಬೈ :
ಸುಲಿಗೆ ಪ್ರಕರಣ ಸಂಬಂಧ ಭೂಗತ ಪಾತಕಿ ಛೋಟಾ ರಾಜನ್ ಸೇರಿ ನಾಲ್ವರಿಗೆ ಮುಂಬೈ ಸೆಷನ್ಸ್ ಕೋರ್ಟ್ 2 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2015ರಲ್ಲಿ ನಂದು ವಾಜೇಕರ್ ಮಹಾರಾಷ್ಟ್ರದ ಪುಣೆಯಲ್ಲಿ ಜಮೀನೊಂದನ್ನು ಖರೀದಿಸಿದ್ದರು. ಇದಕ್ಕಾಗಿ ಪರಮಾನಂದ್ ಠಕ್ಕರ್ ಎಂಬ ಮಧ್ಯವರ್ತಿಗೆ 2 ಕೋಟಿ ರೂ. ಕಮಿಷನ್ ನೀಡಿದ್ದರು. ಆದರೆ ಠಕ್ಕರ್ ಹೆಚ್ಚಿನ ಹಣ ನೀಡುವಂತೆ ಒತ್ತಾಯಿಸಿದ್ದು, ಇದಕ್ಕೆ ವಾಜೇಕರ್ ಒಪ್ಪಲಿಲ್ಲ. ಹೀಗಾಗಿ ಠಕ್ಕರ್ ಛೋಟಾ ರಾಜನ್‌ನನ್ನು ಸಂಪರ್ಕಿಸಿದ್ದರು. ವಾಜೇಕರ್ ಕಚೇರಿಗೆ ತನ್ನ ಗ್ಯಾಂಗ್ ಕಳುಹಿಸಿದ್ದ ಛೋಟಾ ರಾಜನ್, 26 ಕೋಟಿ ರೂ. ನೀಡುವಂತೆ ಹಾಗೂ ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿಸಿದ್ದ.
ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯ, ಛೋಟಾ ರಾಜನ್ ಹಾಗೂ ಆತನ ಸಹಚರರಾದ ಸುರೇಶ್ ಶಿಂಧೆ, ಲಕ್ಷ್ಮಣ್ ನಿಕಮ್, ಸುಮಿತ್ ವಿಜಯ್ ಮಾಟ್ರೆಗೆ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.
2015ರ ಅಕ್ಟೋಬರ್‌ನಲ್ಲಿ ಇಂಡೊನೇಷ್ಯಾದಲ್ಲಿ ಭಾರತದ ಅಧಿಕಾರಿಗಳು ರಾಜನ್‌ನನ್ನು ಬಂಧಿಸಿ, ಕರೆದುಕೊಂಡು ಬಂದಿದ್ದರು. ಆತನನ್ನು ಸದ್ಯ ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. 75 ಅಪರಾಧಗಳ ಪೈಕಿ ‘ಟಾಡಾ’ದಡಿ ನಾಲ್ಕು, ‘ಪೊಟಾ’ದಡಿ ಒಂದು (ಭಯೋತ್ಪಾದನೆ ತಡೆ ಕಾಯ್ದೆ) ಮತ್ತು ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯಡಿ (ಮೊಕಾ) 20ಕ್ಕೂ ಹೆಚ್ಚು ಪ್ರಕರಣಗಳು ರಾಜನ್ ವಿರುದ್ಧ ದಾಖಲಾಗಿವೆ.
ವಿದೇಶದಲ್ಲಿದ್ದುಕೊಂಡೇ ಭೂಗತ ಲೋಕದ ವ್ಯವಹಾರ ನಿಯಂತ್ರಿಸುತ್ತಿದ್ದ ರಾಜನ್‌ಗೂ ಮತ್ತೊಬ್ಬ ಕುಖ್ಯಾತ ಪಾತಕಿ ದಾವೂದ್ ಇಬ್ರಾಹಿಂಗೂ ಮುಂಬೈ ಭೂಗತ ಜಗತ್ತಿನ ಮೇಲೆ ಹಿಡಿತ ಸಾಧಿಸಲು ಪೈಪೋಟಿ ನಡೆದಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
