ಕರೋನ ಭೀತಿ : ಕೋಳಿ ಮಾಂಸ ಹಾಗೂ ಮೊಟ್ಟೆ ಸುರಕ್ಷಿತ!!

ಬೀದರ:

       ನಮ್ಮ ದೇಶದಲ್ಲಿ ಕೋಳಿಗಳಿಗೆ ಕರೋನ ವೈರಾಣು ಸೋಂಕು ಕಾಣಿಸಿಕೊಂಡ ಬಗ್ಗೆ ಇದುವರೆಗೆ ಯಾವುದೇ ವರದಿಗಳಿಲ್ಲ ಹಾಗೂ ಈ ವೈರಾಣು ಸೋಂಕು ಹರಡುವಿಕೆಯಲ್ಲಿ ಕೋಳಿಗಳ ಪಾತ್ರವೇನೂ ಇಲ್ಲ ಎಂದು ಪಶುಸಂಗೋಪನೆ ಹಾಗೂ ಹಜ್ ಮತ್ತು ವಕ್ಫ್ ಸಚಿವರಾದ ಪ್ರಭು ಚವ್ಹಾಣ್ ತಿಳಿಸಿದ್ದಾರೆ.

      ಇತ್ತೀಚೆಗೆ ಚೀನಾ ದೇಶದಲ್ಲಿ ಕಾಣಿಸಿಕೊಂಡಿರುವ ಕರೋನ ವೈರಸ್ ಸೋಂಕು ಕೋಳಿಗಳಿಂದ ಹರಡುತ್ತದೆ ಎಂಬ ತಪ್ಪು ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಜಾಲತಾಣಗಳಲ್ಲಿ ಹರಡುತ್ತಿರುವ ತಪ್ಪು ಮಾಹಿತಿಯಿಂದಾಗಿ ಕುಕ್ಕಟ ಉದ್ಯಮಕ್ಕೆ ಪೆಟ್ಟು ಬೀಳುತ್ತಿದೆ. ಸಾಮಾನ್ಯವಾಗಿ ಕೋಳಿ ಮಾಂಸವನ್ನು 100 ಡಿಗ್ರಿ ಸೆಂಟಿಗ್ರೇಡ್ ಉಷ್ಣತೆಯಲ್ಲಿ ಬೇಯಿಸಲಾಗುತ್ತದೆ. ಈ ಉಷ್ಣತೆಯಲ್ಲಿ ಯಾವುದೇ ವೈರಾಣುಗಳು ಬದುಕುಳಿಯಲು ಸಾಧ್ಯವಿಲ್ಲ. ಸೋಂಕುಪೀಡಿತ ಮನುಷ್ಯರ ಸಂಪರ್ಕದಿಂದ ಮಾತ್ರ ಈ ಸೋಂಕು ಇತರರಿಗೆ ಹರಡುವುದರ ಬಗ್ಗೆ ತಜ್ಞರು ಅಭಿಪ್ರಾಯ ಪಟ್ಟಿರುತ್ತಾರೆ. ಆದ್ದರಿಂದ, ಸಾರ್ವಜನಿಕರು ಕರೋನಾ ವೈರಾಣು ಸೋಂಕು ಕೋಳಿಗಳಿಂದ ಹರಡುತ್ತದೆ ಎಂಬ ವದಂತಿಗಳಿಗೆ ಕಿವಿ ಕೊಡಬಾರದು ಎಂದು ಸಚಿವರು ಹೇಳಿದರು.

      ಈ ರೀತಿಯ ವದಂತಿಗಳನ್ನು ಹರಡುವುದರಿಂದ ಸಾರ್ವಜನಿಕರಿಗೆ ಉತ್ತಮ ಪೌಷ್ಟಿಕಾಂಶ ನೀಡುವ ಕೋಳಿ ಮಾಂಸ ಮತ್ತು ಮೊಟ್ಟೆ ಸೇವನೆಯಿಂದ ದೊರಕುವ ಪೋಷಕಾಂಶಗಳ ಕೊರತೆ ಇದರ ಬಳಕೆದಾರರಿಗೆ ಎದುರಾಗುತ್ತದೆ. ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಹಾಗೂ ಬಾಣಂತಿಯರು ಪೋಷಕಾಂಶ ಕೊರತೆಯಿಂದ ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಇಂತಹ ವದಂತಿಗಳು ಸಾಮಾಜಿಕ ಆಹಾರ ಸ್ವಾಸ್ಥ್ಯವನ್ನು ಮತ್ತಷ್ಟು ಹದಗೆಡಿಸುತ್ತವೆ.

      ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಕೋಳಿ ಮಾಂಸ ಮತ್ತು ಮೊಟ್ಟೆ ದೇಹಕ್ಕೆ ಉತ್ತಮ ಪ್ರೋಟೀನ್ ಪೂರೈಸುವ ಆಹಾರವಾಗಿವೆ. ಸಾರ್ವಜನಿಕರ ಹಿತದೃಷ್ಟಿಯಿಂದ ಯಾರೂ ಇಂತಹ ವದಂತಿಗಳನ್ನು ಹರಡಬಾರದು ಎಂದು ಈ ಮೂಲಕ ಮನವಿ ಮಾಡಲಾಗಿದೆ.

      ಸಾರ್ವಜನಿಕರಲ್ಲಿ ಯಾವುದೇ ತರಹದ ಸಂದೇಹಗಳಿದ್ದಲ್ಲಿ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:080 23418075, 08023416431, ಸಹಾಯವಾಣಿ:1800 425 012, 080 23417100ಗೆ ಸಂಪರ್ಕಿಸಬಹುದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap