ರೀಲ್ಸ್‌ಗಾಗಿ ಇದೆಂಥ ಹುಚ್ಚಾಟ? ಹಸುವಿಗೆ ಚಿಕನ್ ಮೋಮೋಸ್‌ ತಿನ್ನಿಸಿದ ಯುವಕ!

ಚಂಡೀಗಢ

      ಇಂದು ಸೋಶಿಯಲ್ ಮೀಡಿಯಾದ್ದೇ ಹವಾ. ಹೀಗಾಗಿ ಪ್ರಚಾರ ಪಡೆಯಬೇಕು, ಕಂಟೆಂಟ್ ವೈರಲ್ ಆಗಬೇಕೆಂದು ಏನೇನೊ ಸರ್ಕಸ್ ಮಾಡುವ ಜನರಿದ್ದಾರೆ. ಇಲ್ಲೊಬ್ಬ ಯುವಕ ತಾನು ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ ಪಡೆಯಬೇಕೆಂದ ಕಾರಣಕ್ಕೆ ಏನೋ ಮಾಡಲು ಹೋಗಿ ಪೇಚಿಗೆ ಸಿಲುಕಿದ್ದಾನೆ. ಆನ್‌ಲೈನ್ ಪ್ರಚಾರಕ್ಕಾಗಿ ಯುವಕನು ಹಿಂದೂಗಳ ಪಾಲಿನ ಪವಿತ್ರ ಪ್ರಾಣಿ ಹಸುವಿಗೆ ಚಿಕನ್ ಮೋಮೋಸ್ ತಿನ್ನಿಸಿ ವಿಡಿಯೊ ಶೇರ್ ಮಾಡಿಕೊಂಡಿದ್ದಾನೆ. ಸದ್ಯ ಯುವಕನ ಈ ಕೃತ್ಯ ಹಿಂದೂಗಳಲ್ಲಿ ಆಕ್ರೋಶ ಮೂಡಿಸಿದೆ. ಹಿಂದೂಪರ ಸಂಘಟನೆಗಳ ಸದಸ್ಯರು ಆತನನ್ನು ಪತ್ತೆಹಚ್ಚಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವಕನ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದು, ಪ್ರಕರಣ ದಾಖಲಿಸಿದ್ದಾರೆ.

    ಡಿಸೆಂಬರ್ 2ರಂದು ಹರಿಯಾಣದ ಗುರುಗ್ರಾಮ್‌ನಲ್ಲಿ ಈ ಅಘಾತಕಾರಿ ಘಟನೆ ನಡೆದಿದೆ. ಆರೋಪಿಯನ್ನು ನ್ಯೂ ಕಾಲೋನಿಯ 28 ವರ್ಷದ ಹೃತಿಕ್ ಎಂದು ಗುರುತಿಸಲಾಗಿದೆ. ಆತ ಬೀದಿ ವ್ಯಾಪಾರಿಯ ಅಂಗಡಿಯೊಂದರಿಂದ ಚಿಕನ್‌ ಮೋಮೋಸ್‌ ಖರೀದಿಸಿ ಹಸುವಿಗೆ ತಿನ್ನಿಸಿದ್ದಾನೆ. ವೈರಲ್ ಆದ ದೃಶ್ಯದಲ್ಲಿ ಹೃತಿಕ್ ತಾನು ತಿನ್ನುತ್ತಿದ್ದ ಚಿಕನ್ ಮೋಮೋಸ್‌ ಅನ್ನು ಹತ್ತಿರ ನಿಂತಿದ್ದ ಹಸುವಿಗೂ ತಿನ್ನಿಸುತ್ತಿರುವುದು ಕಂಡುಬಂದಿದೆ. ಈ ದೃಶ್ಯ ವನ್ನು ಆತನೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಆನ್‌ಲೈನ್‌ನಲ್ಲಿ ವೈರಲ್‌ ಆಗುವ ದುರುದ್ದೇಶದಿಂದ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.

    ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಹಿಂದೂ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಈ ಬಗ್ಗೆ ಕಾರ್ಯಪ್ರವೃತ್ತರಾದ ಸಂಘಟನೆಯ ಸದಸ್ಯರು, ಆರೋಪಿ ಹೃತಿಕ್‌ನನ್ನು ಪತ್ತೆ ಹಚ್ಚಿ ದೂರು ದಾಖಲಿಸಿದ್ದಾರೆ. ಸದ್ಯ ಹೃತಿಕ್‌ ಕ್ಷಮೆಯಾಚಿಸಿ ವಿಡಿಯೊ ಹರಿಯಬಿಟ್ಟಿದ್ದಾನೆ. ಹಣದ ಆಮಿಷಕ್ಕೆ ತಾನು ಹಸುವಿಗೆ ಚಿಕನ್ ಮೋಮೋಸ್‌ಗಳನ್ನು ತಿನ್ನಿಸಿದ್ದಾಗಿ ಹೇಳಿಕೊಂಡಿದ್ದಾನೆ.

    ಸದ್ಯ ವಿಚಾರಣೆಯ ನಂತರ ಹೃತಿಕ್‌ಗೆ ಜಾಮೀನು ನೀಡಲಾಗಿದೆ. ಈ ಘಟನೆಯು ಪ್ರಾಣಿಗಳನ್ನು ಹಿಂಸಿಸುವುದು ಮಾತ್ರವಲ್ಲದೆ ಜನಪ್ರಿಯತೆ ಮತ್ತು ಆರ್ಥಿಕ ಲಾಭಕ್ಕಾಗಿ ಮುಗ್ಧ ಜೀವಿಗಳನ್ನು ಗುರಿಯಾಗಿಸುತ್ತಿರುವ ಪ್ರವೃತ್ತಿ ಹೆಚ್ಚಾಗುತ್ತಿರುವುದನ್ನು ಸೂಚಿಸಿದ್ದು ಸಾರ್ವಜನಿಕರು ಕಳವಳ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ಘಟನೆಗೆ ನೆಟ್ಟಿಗರು ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಇಂತಹ ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಮೆಂಟ್ ಮಾಡಿದ್ದಾರೆ. ಮಾತ್ತೊಬ್ಬರು ಪ್ರಚಾರ ಪಡೆಯಲು ಈ ರೀತಿ ಪ್ರಾಣಿಗಳಿಗೆ ಹಿಂಸೆ ನೀಡುವುದು ತಪ್ಪು ಎಂದು ಬರೆದುಕೊಂಡಿದ್ದಾರೆ.

Recent Articles

spot_img

Related Stories

Share via
Copy link