ಪಾಕ್‌ಗೆ ಕ್ಲೀನ್‌ ಚಿಟ್‌ ಕೊಟ್ಟ ಚಿದಂಬರಂ…..!

ನವದೆಹಲಿ:

    ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ಇಂದು ಪಹಲ್ಗಾಮ್‌ ಉಗ್ರ ದಾಳಿ  ಬಗ್ಗೆ ಚರ್ಚೆ ನಡೆಯುತ್ತಿರುವ ನಡುವೆಯೇ ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪಹಲ್ಗಾಮ್‌ ದಾಳಿಯ ಹಿಂದಿರುವ ಉಗ್ರರು ಭಾರತದವರೇ ಆಗಿರಬಹುದು ಎಂದು ಹೇಳುವ ಮೂಲಕ ಪಾಕಿಸ್ತಾನಕ್ಕೆ ಕ್ಲೀನ್‌ ಚಿಟ್‌ ಕೊಟ್ಟಿದ್ದಾರೆ. ಪಿ ಚಿದಂಬರಂ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಸೋಮವಾರ ರಾಜಕೀಯ ಬಿರುಗಾಳಿ ಎದ್ದಿದ್ದು, ಕಾಂಗ್ರೆಸ್ “ಪಾಕಿಸ್ತಾನಕ್ಕೆ ಕ್ಲೀನ್ ಚಿಟ್” ನೀಡಿದೆ ಮತ್ತು ಭಾರತದ ವಿರೋಧಿಗಳ ಕೈಯಲ್ಲಿರುವ ಬೊಂಬೆಯಂತೆ ಆಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

   ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಚಿದಂಬರಂ, ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೂ ಪಾಕಿಸ್ತಾನಕ್ಕೂ ಸಂಬಂಧವಿದೆ ಎನ್ನುವ ಸರ್ಕಾರದ ಪುರಾವೆಗಳನ್ನು ಪ್ರಶ್ನಿಸಿದ್ದಾರೆ. ಸರ್ಕಾರ ಭಯೋತ್ಪಾದಕರನ್ನು ಗುರುತಿಸಿದ್ದಾರೆಯೇ? ಅವರು ಎಲ್ಲಿಂದ ಬಂದರು? ನನಗೆ ತಿಳಿದಿರುವಂತೆ, ಅವರು ಭಾರತದಲ್ಲೇ ಬೆಳೆದ ಭಯೋತ್ಪಾದಕರಾಗಿರಬಹುದು. ಅವರು ಪಾಕಿಸ್ತಾನದಿಂದ ಬಂದವರು ಎಂದು ನೀವು ಏಕೆ ಭಾವಿಸುತ್ತೀರಿ? ಅದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದಿದ್ದಾರೆ. 

   ಇನ್ನು ಚಿದಂಬರಂ ಹೇಳಿಕೆಗೆ ಬಿಜೆಪಿ ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ರಾಷ್ಟ್ರೀಯ ಭದ್ರತೆಯನ್ನು ದುರ್ಬಲಗೊಳಿಸುತ್ತಿದೆ ಮತ್ತು ಪಾಕಿಸ್ತಾನದ ಪರವಾಗಿ ನಿಲ್ಲುತ್ತಿದೆ ಎಂಬುದಕ್ಕೆ ಇದು ಮತ್ತೊಂದು ಸಾಕ್ಷಿ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಮತ್ತೊಮ್ಮೆ ಕಾಂಗ್ರೆಸ್ ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡಲು ಮುಂದಾಗಿದೆ. ನಮ್ಮ ಪಡೆಗಳು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ಎದುರಿಸುವಾಗಲೆಲ್ಲಾ, ಕಾಂಗ್ರೆಸ್ ನಾಯಕರು ಭಾರತದ ವಿರೋಧ ಪಕ್ಷಕ್ಕಿಂತ ಹೆಚ್ಚಾಗಿ ಪಾಕ್‌ ಪರ ವಕೀಲರಂತೆ ಏಕೆ ವರ್ತಿಸುತ್ತಾರೆ? ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 

   ಬಿಜೆಪಿ ಸಂಸದ ನಿಶಿಕಾಂತ್ ದುಬೆ ಕೂಡ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಅನ್ನು ದೇಶದ್ರೋಹಿ ಸಂಘಟನೆ ಎಂದು ಕರೆದಿದ್ದಾರೆ. ರಾಹುಲ್ ಗಾಂಧಿ ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಿದರು. ಅವರು ರಾಷ್ಟ್ರವನ್ನು ಮಾರಾಟ ಮಾಡಲು ಮುಂದಾಗಿದ್ದರು. ಆದರೆ ಪ್ರಧಾನಿ ಮೋದಿ ಅದನ್ನು ತಪ್ಪಿಸಿದರು. ಇದನ್ನು ಕಾಂಗ್ರೆಸ್ಸಿಗರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ. 

   ಮತ್ತೊಂದೆಡೆ ಚಿದಂಬರಂ ಪರ ಕಾಂಗ್ರೆಸ್‌ ನಾಯಕರು ಧ್ವನಿ ಎತ್ತಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ಅನ್ನು ಮೋದಿ ಸರ್ಕಾರ ನಿಭಾಯಿಸುವಲ್ಲಿ ವಿಫಲವಾದ ಕಾರಣ ಆ ವಿಚಾರದಿಂದ ಬಿಜೆಪಿ ಗಮನ ಬೇರೆಡೆ ಸೆಳೆಯಲು ಬಯಸುತ್ತಿದೆ. ಇದು ಒಂದು ದಿಕ್ಕು ತಪ್ಪಿಸುವ ತಂತ್ರ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ ಪಡೆಗಳೊಂದಿಗೆ ನಿಂತಿದೆ” ಎಂದು ಕಾಂಗ್ರೆಸ್ ಸಂಸದ ಮಾಣಿಕಮ್ ಟ್ಯಾಗೋರ್ ಹೇಳಿದರು.

Recent Articles

spot_img

Related Stories

Share via
Copy link