ಬೆಳಗಾವಿ:
ಚಳಿಗಾಲ ಅಧಿವೇಶನದಲ್ಲಿ ಇಂದು ಸದನದ ಶೂನ್ಯ ವೇಳೆಯಲ್ಲಿ ವಿಧಾನ ಪರಿಷತ್ ಶಾಸಕ ಚಿದಾನಂದ್ ಎಂ ಗೌಡ ರವರು ಪತ್ರಕರ್ತರು ಹಾಗೂ ದೃಶ್ಯ ಮಾಧ್ಯಮದವರ ಪರವಾಗಿ ಧ್ವನಿ ಎತ್ತಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾರಂಗಕ್ಕೆ ವಿಶೇಷ ಸ್ಥಾನವಿದೆ.
ಇದು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾಗಿದ್ದು, ವ್ಯವಸ್ಥೆಯ ವೈಫಲ್ಯಗಳನ್ನು, ಒಳಿತನ್ನು ಜನತೆಯ ಮುಂದೆ ಇಡುವಲ್ಲಿ ಪತ್ರಿಕಾ ರಂಗ ಬಹಳ ಪ್ರಮುಖ ಪಾತ್ರವಹಿಸುತ್ತದೆ. ವಾಸ್ತವವನ್ನು ಜನತೆಯ ಮುಂದಿಡುವ ಸಂದರ್ಭದಲ್ಲಿ ಪತ್ರಿಕಾ ಮಾಧ್ಯಮ ಹಾಗೂ ದೃಶ್ಯ ಮಾಧ್ಯಮ ವರದಿಗಾರರಿಗೆ ಜೀವಕ್ಕೆ ಕುತ್ತು ತರುವ ಸನ್ನಿವೇಶಗಳು ನಡೆಯುತ್ತಿರುತ್ತವೆ.
ಸರ್ಕಾರ ಹಾಗೂ ಸಾರ್ವಜನಿಕರ ಮಧ್ಯೆ ಸಂಪರ್ಕ ಸೇತುವೆಯಾಗಿ ಪ್ರಾಣದ ಹಂಗನ್ನು ತೊರೆದು ನಿಸ್ವಾರ್ಥ ಸೇವೆಯಲ್ಲಿ ತೊಡಗಿರುವ ಪತ್ರಿಕಾ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಇದರಿಂದ ವಾಸ್ತವ ಪರಿಸ್ಥಿತಿಯನ್ನು ವರದಿ ಮಾಡಲು ಹಿಂಜರಿಯುವ ಪರಿಸ್ಥಿತಿ ಬಂದೊದಗುತ್ತಿದೆ.
ಆದ್ದರಿಂದ ಕೂಡಲೇ ರಾಜ್ಯದ ಸಮಸ್ತ ಪತ್ರಕರ್ತ ಹಾಗೂ ದೃಶ್ಯ ಮಾಧ್ಯಮ ಪ್ರತಿನಿಧಿಗಳಿಗೆ ರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಿ, ಪ್ರತಿಯೊಬ್ಬ ವರದಿಗಾರರಿಗೂ ಜೀವ ವಿಮಾ ಸೌಲಭ್ಯ ಕಲ್ಪಿಸಿ, ರಾಜ್ಯಾದ್ಯಂತ ಸಂಚರಿಸಲು ಉಚಿತ ಬಸ್ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಪತ್ರಕರ್ತರು ಹಾಗೂ ದೃಶ್ಯ ಮಾಧ್ಯಮ ಪ್ರತಿನಿಧಿಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ವಿಧಾನ ಪರಿಷತ್ ಶಾಸಕರಾದ ಚಿದಾನಂದ್ ಎಂ ಗೌಡ ಅವರು ಸರ್ಕಾರವನ್ನು ಒತ್ತಾಯಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ