ಪದವೀಧರರು, ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲು ಸದಾ ಸಿದ್ಧ

 ತುಮಕೂರು :

      ಪದವೀಧರರು, ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲು ಸದಾ ಸಿದ್ಧನಿದ್ದು, 5 ಜಿಲ್ಲೆ 34 ತಾಲೂಕುಗಳ ಪ್ರತಿನಿಧಿಯಾಗಿ ಸ್ಪಂದಿಸುವುದು ನನ್ನ ಜವಾಬ್ದಾರಿಯೂ ಆಗಿದೆ ಎಂದು ವಿಧಾನಪರಿಷತ್ ಆಗ್ನೇಯ ಪದವೀಧರ ಕ್ಷೇತ್ರದ ಸದಸ್ಯ ಚಿದಾನಂದ.ಎಂ.ಗೌಡ ತಿಳಿಸಿದರು.

      ಪ್ರಜಾಪ್ರಗತಿ ಹಾಗೂ ಪ್ರಗತಿ ವಾಹಿನಿಯಿಂದ ನಡೆದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಕ್ಷೇತ್ರದ ಜನರ ಕರೆಗಳಿಗೆ ಪ್ರತಿಕ್ರಿಯಿಸಿದ ಶಾಸಕರು ಪರಿಷತ್ ಸದಸ್ಯನಾಗಿ ಆಯ್ಕೆಯಾಗಿ ಕೇವಲ 9 ತಿಂಗಳಷ್ಟೇ ಆಗಿದೆ. ಅಷ್ಟರೊಳಗೆ ಅಪ್ಪಳಿಸಿದ ಕೋವಿಡ್ ಅಲೆ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸುವ ಪ್ರಯತ್ನವನ್ನು ವಿಳಂಬವಾಗಿದೆ. ಆದರೂ 34 ತಾಲೂಕು 5 ಜಿಲ್ಲೆಯಲ್ಲಿ ನಿರಂತರ ಪ್ರವಾಸ ಮಾಡಿ ಪದವೀಧರರು, ಶಿಕ್ಷಕರ ಅಹವಾಲನ್ನು ಆಲಿಸುವ ಜೊತೆಗೆ ನೀಡಿದ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸದನದಲ್ಲಿ, ಸರಕಾರದ ಮಟ್ಟದಲ್ಲಿ ನಿರಂತರ ಹೋರಾಟ ಮಾಡುತ್ತಿದ್ದೇನೆ. ಮುಖ್ಯಮಂತ್ರಿ, ಸಚಿವರ ಕಡೆಯಿಂದಲೂ ಸೂಕ್ತ ಪ್ರತಿಸ್ಪಂದನೆ ದೊರೆಯುತ್ತಿದೆ ಎಂದರು.

   ಫೋನ್ ಇನ್ ಕೇಳಿಬಂದ ಪ್ರಶ್ನೆಗಳು, ದೊರೆತ ಉತ್ತರ 

 ಬಾಕಿಯಿರುವ 38 ಶಾಲೆಗಳಿಗೆ ಅನುದಾನ ಶೀಘ್ರ:

      ಹಂದನಕೆರೆಯ ಮಂಜುನಾಥ್, ದಾವಣಗೆರೆಯ ಗಂಗಾಧರ್, ತರಳಬಾಳು ವಿದ್ಯಾಸಂಸ್ಥೆಯ ರಾಜ್‍ಕುಮಾರ್, ಗೋಡೆಕೆರ ಸಿದ್ದರಾಮೇಶ್, ಚಿತ್ರದುರ್ಗ ರುದ್ರೇಶ್ ಮತ್ತಿತರರು ಕರೆ ಮಾಡಿ ಅನುದಾನಕ್ಕೊಳಪಡಬೇಕಾದ ರಾಜ್ಯದ 38 ಶಾಲೆಗಳ ಕಡತ 2015ರಿಂದ ಬಾಕಿಯಿದೆ. ಬೇಗ ಅನುದಾನ ಬಿಡುಗಡೆ ಮಾಡಿಸಿ ಸಂಭಳವಿಲ್ಲದೆ,ಕಡಿಮೆ ವೇತನಕ್ಕೆ ದುಡಿಯುತ್ತಿರುವ ಶಿಕ್ಷಕರ ಸಮಸ್ಯೆಗೆ ಸ್ಪಂದಿಸಿ ಎಂದು ಕೋರಿದರು. ಇವರ ಕೋರಿಕೆಗಳಿಗೆ ಪ್ರತಿಕ್ರಿಯಿಸಿದ ಚಿದಾನಂದಗೌಡ ಅವರು ಈ ವಿಚಾರವಾಗಿ ಶಿಕ್ಷಣ ಇಲಾಖೆ ಪ್ರಧಾನಕಾರ್ಯದರ್ಶಿ ಉಮಾಶಂಕರ್ ಅವರೊಂದಿಗೆ ಚರ್ಚಿಸಿದ್ದು, ಸಿಎಂ ಬಳಿ ಕಡತ ಹೋಗಿ ಮುಂದಿನ ಕ್ರಮಕ್ಕೆ ಇಲಾಖೆಗೆರವಾನೆಯಾಗಿದೆ. ಶೀಘ್ರವೇ 38 ಶಾಲೆಗಳು ಅನುದಾನಕ್ಕೊಳಪಡಲಿವೆ. ಕಡತದ ಹಿಂದೆ ಬಿದ್ದು ಮಂಜೂರು ಮಾಡಿಸಿಕೊಡುವ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು.

ಚಿತ್ರದುರ್ಗ ಚಂದ್ರಶೇಖರ್ ಅವರು ಕರೆ ಮಾಡಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರಸ್ತುತ ಸಿರಾದಲ್ಲಿ ಐಎಎಸ್ ಅಕಾಡೆಮಿ ತೆರೆದಿದ್ದು ಕ್ಷೇತ್ರ ವ್ಯಾಪ್ತಿಯ ಪ್ರತೀ ತಾಲೂಕಿನ 5 ಮಂದಿಯಂತೆ 150 ಜನಕ್ಕೆ ಅಲ್ಲಿ ಐಎಎಸ್‍ಗೆ ವಸತಿ ಸಹಿತ ತರಬೇತಿ ಕೊಡಲಾಗುವುದು. ಕೋವಿಡ್ ಕಾರಣಕ್ಕೆ ಹಾಸ್ಟೆಲ್ ಪ್ರವೇಶಕ್ಕೆ ನಿರ್ಬಂಧವಿರುವುದರಿಂದ ಕೇಂದ್ರ ಆರಂಭ ವಿಳಂಬವಾಗಿದೆ.ಹಂತಹಂತವಾಗಿ ಪ್ರತೀ ಜಿಲ್ಲಾ ಕೇಂದ್ರದಲ್ಲೂ ತೆರೆಯಲಾಗುವುದು. ಉದ್ಯೋಗ ತರಬೇತಿ ಇಲಾಖೆಯಿಂದಲೂ ತರಬೇತಿ ನೀಡುತ್ತಿದ್ದು, ಈ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.

      ಕರಿದಾಸರಹಳ್ಳಿ ಹೇಮಂತ್, ಚಿತ್ರದುರ್ಗ ಕಂಪ್ಲೇಶ್ ಅವರು ಕರೆ ಮಾಡಿ ನಿರುದ್ಯೋಗಿ ಪದವೀಧರರ ಕಡೆ ಯಾರೂ ಗಮನಹರಿಸುತ್ತಿಲ್ಲ ಎಂದಾಗ, ಪದವೀಧರರೆಲ್ಲರಿಗೂ ಸರಕಾರವೇ ಉದ್ಯೋಗ ಒದಗಿಸಿಕೊಡುವುದು ಕಷ್ಟ ಸಾಧ್ಯ. ಸ್ವಾವಲಂಬಿಯಾಗಿ ಸ್ವಂತ ಉದ್ಯೋಗ ಕೈಗೊಳ್ಳಲು ಹಲವು ಯೋಜನೆಗಳಿದ್ದು, ಆಯೋಜನೆಗಳ ಬಗ್ಗೆ ಬ್ಯಾಂಕ್ ಮ್ಯಾನೇಜರ್‍ಗಳ ಜೊತೆಗೆ ಚರ್ಚಿಸಿದ್ದು, ತಾಲೂಕುವಾರು ನಿರುದ್ಯೋಗಿ ಪದವೀಧರರ ಸಭೆ ಶೀಘ್ರ ನಡೆಸಿ ಅವರ ಅಭಿಪ್ರಾಯ ಆಧರಿಸಿ ಸ್ವಯಂ ಉದ್ಯೋಗಕ್ಕೆ ನೆರವಾಗಿಸುವ ಕಾರ್ಯ ಮಾಡಲಾಗುವುದು. ಸ್ವಯಂ ಉದ್ಯೋಗಕ್ಕೆ ಲಗತ್ತಾದ ಯೋಜನಾ ವರದಿಯನ್ನು ಪದವೀಧರರು ಸಿದ್ಧಪಡಿಸಿಕೊಳ್ಳುವುದು ಮುಖ್ಯ ಎಂದರು.
ಕ್ರೀಡಾ ಶಿಕ್ಷಕರಿಗೆ ಯೋಗ ಶೀಘ್ರ: ಕೋಲಾರದ ವಿಶ್ವನಾಥ್ ಅವರು ಕರೆ ಮಾಡಿ ದೈಹಿಕ ಶಿಕ್ಷಣ ಪದವೀಧರರು ಸೂಕ್ತ ನೇಮಕಾತಿ ಇಲ್ಲದೆ ಈ ಪದವಿ ಏಕೆ ಬೇಕು ಎನ್ನುವ ಸ್ಥಿತಿ ನಿರ್ಮಾಣವಾಗಿದೆ ಎಂಬ ಅಹವಾಲಿಗೆ ಪ್ರತಿಕ್ರಿಯಿಸಿ, ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆ ಸಾಕಷ್ಟು ಖಾಲಿ ಇದೆ. ಆದ್ಯತೆ ಮೇರೆಗೆ ಭರ್ತಿ ಮಾಡಲು ಶಿಕ್ಷಣ ಸಚಿವರೊಂದಿಗೆ ಚರ್ಚಿಸಲಾಗುವುದು. ಕ್ರೀಡಾ ಶಿಕ್ಷಕರಿಗೆ ಯೋಗ ತರಬೇತಿ ಕೊಡಿಸಿ ಕೇಂದ್ರದ ವಿವೇಕಾನಂದ ಯೋಗ ಅನುಸಂದಾನ ಕೇಂದ್ರದೊಂದಿಗೆ ಸಂಪರ್ಕಗೊಳಿಸಲು ಯತ್ನಿಸುತ್ತಿದ್ದು, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಕ್ರೀಡೆಗೆ ಹೆಚ್ಚು ಅವಕಾಶ ಕಲ್ಪಿಸಿರುವುದರಿಂದ ದೈಹಿಕ ಶಿಕ್ಷಣ ಶಿಕ್ಷಕರಿಗೆ ಹೆಚ್ಚಿನ ಮನ್ನಣೆ ದೊರೆಯಲಿದೆ ಎಂದರು.
ಶಿರಾ ತಾಲೂಕಿನ ಗಂಗಾಧರ್ ಅವರ ಕರೆ ಮಾಡಿ ಅನುದಾನಿತ ಶಾಲೆ ನೇಮಕಾತಿ ಸಮಸ್ಯೆ ಪ್ರಸ್ತಾಪಿಸಿದರು.ಈಸಂಬಂಧ ಶಿಕ್ಷಣ ಸಚಿವರೊಡನೆ ಚರ್ಚಿಸಿದ್ದು, ಅನುದಾನಿತ ಶಾಲೆಗಳಲ್ಲಿ ಖಾಲಿಯಿರುವ ಹುದ್ದೆಗಳ ಸಂಬಂಧ ಒಂದು ವರ್ಷ ಮುಂಚೆಯೇ ನೋಟಿಫಿಕೇಶನ್ ಹೊರಡಿಸುವಂತೆ ಸೂಚಿಸಲಾಗಿದೆ ಎಂದರು.

ಖಾಸಗಿ ಶಾಲಾ ಶಿಕ್ಷಕರ ನೆರವಿಗೆ 105 ಕೋಟಿ ಬಿಡುಗಡೆ:

      ರಾಜ್ಯದಲ್ಲಿ 27000 ಶಾಶ್ವತ ಅನುದಾನ ರಹಿತ ಶಾಲೆಗಳು 3.50 ಲಕ್ಷ ಮಂದಿ ಖಾಸಗಿ ಶಿಕ್ಷಕರು, ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದು, ಈ ಬೃಹತ್ ವ್ಯವಸ್ಥೆಯ ಬಗ್ಗೆ ಸರಕಾರ ಅಷ್ಟಾಗಿ ಗಮನಹರಿಸಿರಲಿಲ್ಲ. ಕೋವಿಡ್ ಸಂದರ್ಭದಲ್ಲಿ ಶಾಲಾ ಕಾಲೇಜು ನಡೆಯದೆ ಪೋಷಕರು ಸಂಕಷ್ಟಕ್ಕೊಳಗಾಗಿ ಶುಲ್ಕ ಕಟ್ಟಲಾಗಲಿಲ್ಲ. ಆಡಳಿತ ಮಂಡಳಿಗಳು ವೇತನ ನೀಡಲು ಪರದಾಡಬೇಕಾಯಿತು. ಈ ಹಿನ್ನೆಲೆಯಲ್ಲಿ ಪ್ರತೀ ಖಾಸಗಿ ಶಾಲಾ ಶಿಕ್ಷಕರಿಗೆ 25ಸಾವಿರ ಪ್ಯಾಕೇಜ್ ಘೋಷಿಸುವಂತೆ ಸಿಎಂ ಅವರನ್ನು ಕೋರಲಾಯಿತು. ಕಡೆಗೆ10 ಸಾವಿರ ನೀಡಲು ಸಿಎಂ ಅನುಮತಿಸಿದರು. ಮೊದಲ ಹಂತವಾಗಿ 5 ಸಾವಿರ ಕೊಡಲು 105 ಕೋಟಿಯನ್ನು ಬಿಡುಗಡೆಯಾಗಿದೆ ಎಂದರು.
ಶಿರಾದ ಪ್ರಭು ಅವರು ಕರೆ ಮಾಡಿ ವೇತನ ಬಿಡುಗಡೆಯಾಗದಿರುವ ಬಗ್ಗೆ ಗಮನ ಸೆಳೆದರು. ಪಿಯು ನಿರ್ದೇಶಕರ ಜತೆ ಮಾತನಾಡಿ ಬಿಡುಗಡೆಗೊಳಿಸಿಕೊಡುವುದಾಗಿತಿಳಿಸಿದರು.

     ಗುಬ್ಬಿಯಿಂದ ನಾಗರಾಜು ಅವರು ಕರೆ ಮಾಡಿ ವಯೋಮಿತಿ ಮೀರಿದಿರುವ ಪದವೀಧರರಿಗೆ ಸಾಲ ಹಾಗೂ ಎಚ್‍ಎಎಲ್‍ನಲ್ಲಿ ಸ್ಥಳೀಯರಿಗೆ ಪ್ರಾತಿನಿಧ್ಯ ಕೊಡ್ಬೇಕು. ಸ್ಥಗಿತಗೊಂಡಿರುವ ಮಾಹಿತಿ ಸಿಂಧು ಯೋಜನೆ ಮುಂದುವರಿಸುವಂತೆ ಒತ್ತಾಯಿಸಿದರು. ಎನ್‍ಇಪಿಯಲ್ಲಿ ಪ್ರಾಥಮಿಕ ಹಂತದಲ್ಲೇ ಕೌಶಲ್ಯಾಧರಿತ ಶಿಕ್ಷಣಕ್ಕೆ ಪೂರಕವಾಗಿ ಮಾಹಿತಿ ಸಿಂಧು ಶಿಕ್ಷಕರ ಮರು ನೇಮಕಕ್ಕೆ ಚಿಂತಿಸಲಾಗುತ್ತಿದೆ. 3 ಲಕ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲವೂ ಸಹ ಪದವೀಧರರಿಗೆ ಸ್ವಯಂ ಉದ್ಯೋಗಕ್ಕೆ ಬ್ಯಾಂಕ್‍ಗಳ ಮೂಲಕ ಲಭ್ಯವಿದೆ. ಆದರೆ ಸಬ್ಸಿಡಿಗಾಗಿ ಯೋಜನೆ ರೂಪಿಸಬಾರದು. ಎಚ್‍ಎಎಲ್‍ನಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವ ಬಗ್ಗೆ ಆಡಳಿತ ಮಂಡಳಿಯವಚರ ಜತೆ ಮಾತಾಡಲಾಗುವುದು ಎಂದರು.

     ಪಾವಗಡದ ಶ್ರೀನಿವಾಸರೆಡ್ಡಿ ಅವರು ಕರೆ ಮಾಡಿ ಬಯಲು ಸೀಮೆ ಭಾಗಕ್ಕೆ ನೀರಾವರಿ ವ್ಯವಸ್ಥೆ ಮಾಡಿ ಪದವೀಧರರಿಗೆ ಅವಕಾಶ ಕಲ್ಪಿಸಿ,ಪ್ರವಾಸಿ ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡಿ ಎಂದರು. ಕೃಷಿಯತ್ತ ಪದವೀಧರರು ಆಕರ್ಷಿತರಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಹ ಕೃಷಿ ಅಭಿವೃದ್ಧಿ, ನೀರಾವರಿಯೋಜನೆಗಳಿಗೆ ಒತ್ತುಕೊಟ್ಟಿದೆ. ಇನ್ನೂ ಪ್ರವಾಸಿ ತಾಣಗಳಅಭಿವೃದ್ಧಿ ವಿಷಯವಾಗಿ ವಾಣಿವಿಲಾಸ ಹಿನ್ನೀರಿನ ಪ್ರದೇಶವನ್ನು ಕೆಆರ್‍ಎಸ್ ಮಾದರಿಯಲ್ಲಿ ಅಭಿವೃದ್ಧಿಗೊಳಿಸಿ ಯುವಜನರಿಗೆ ಅವಕಾಶ ಸಷ್ಟಿಸಲು ಯೋಜನೆ ರೂಪಿಸಿದ್ದು, ಕ್ಷೇತ್ರ ವ್ಯಾಪ್ತಿಯ 5 ಜಿಲ್ಲೆ ಪ್ರವಾಸಿ ತಾಣಗಳ ಅಭಿವೃದ್ಧಿ ಕುರಿತು ಸರಕಾರದೊಡನೆ ಚರ್ಚಿಸಲಾಗುವುದು ಎಂದರು.
ವಸತಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ: ಹಿರಿಯೂರಿನ ಕಾರ್ತಿಕ್ ಅವರು ಕರೆ ಮಾಡಿ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅತಿಥಿ ಶಿಕ್ಷಕರನ್ನು ಕೈ ಬಿಟ್ಟಿರುವ ಕುರಿತು ಗಮನ ಸೆಳೆದರು. ಈ ಬಗ್ಗೆ ಸಮಾಜ ಕಲ್ಯಾಣ ಸಚಿವರೊಂದಿಗೆ ವಸತಿ ಶಾಲೆಗಳ ಅತಿಥಿ ಶಿಕ್ಷಕರ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಚರ್ಚಿಸಿದ್ದು, ಸರಕಾರದ ವಸತಿ ಶಾಲೆಯಲ್ಲಿ ದೊರಕುತ್ತಿರುವ ಗುಣಮಟ್ಟದ ಶಿಕ್ಷಣ ಯಾವುದೇ ಖಾಸಗಿ ಶಾಲೆಗಳಲ್ಲೂ ದೊರೆಯುತ್ತಿಲ್ಲ ಎಂದು ಶಿಕ್ಷಕರ ಕಾರ್ಯವೈಖರಿಗೆ ಮೆಚ್ಚುಗೆ ಸೂಚಿಸಿದರು.

     ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತರಾಜು, ಗುಬ್ಬಿಯ ಚನ್ನಬಸವರಾಧ್ಯ ಅವರುಗಳು ಕರೆ ಮಾಡಿ 80,000 ಮಂದಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆ ಬೇಗ ಪರಿಹರಿಸುವಂತೆ ಕೋರಿದರಲ್ಲದೆ ಕೆಜಿಐಡಿಯಲ್ಲಿ ಶಿಕ್ಷಕರ ಕಾರ್ಯಗಳು ವಿಳಂಬವಾಗುತ್ತಿರುವ ಬಗ್ಗೆ ಗಮನಕ್ಕೆ ತಂದರು. ಪದವೀಧರ ಶಿಕ್ಷಕರ ಸಿ ಅಂಡ್ ಆರ್ ರೂಲ್ಸ್ ತಿದ್ದುಪಡಿ ಕೋರ್ಟ್‍ನಲ್ಲಿ ಸ್ಟೇ ಆಗಿದ್ದರಿಂದ ಹಿಂಬಡ್ತಿ ಸಮಸ್ಯೆ ಹಾಗೆ ಉಳಿಯಿತು. ಮುಂಬಡ್ತಿ ಮಾಡಿ 6 ರಿಂದ 8ನೇ ತರಗತಿಗೂ ಪಾಠ ಮಾಡುವ ಅವಕಾಶವನ್ನು ಶೀಘ್ರ ಕಲ್ಪಿಸಲಾಗುವುದು ಎಂದರು. ಕೆಜಿಐಡಿ ಅಧಿಕಾರಿಯನ್ನು ಶಿರಾಗ ಕರೆಸಿ ಸಮಸ್ಯೆ ಇತ್ಯರ್ಥಪಡಿಸಲಾಗುವುದು ಎಂದರು.
ರಾಜಶೇಖರ್ ಅವರು ಕರೆ ಮಾಡಿ ಅತಿಥಿ ಉಪನ್ಯಾಸಕರಿಗೆ ಕೋವಿಡ್ ಪ್ಯಾಕೇಜ್ ನೀಡಬೇಕೆಂಬ ಕೋರಿಕೆಗೆ, ಅತಿಥಿ ಉಪನ್ಯಾಸಕರಿಗೆ ಕೋವಿಡ್ ಸಂದರ್ಭದ ರಜೆಯ ವೇತನವನ್ನೇ ಕೊಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಕ್ಷೇತ್ರ ವ್ಯಾಪ್ತಿಯ 15ಸಾವಿರ ಮಂದಿಗೆ ದಿನಸಿ ಕಿಟ್ ಸಹ ನಾನು ಹಾಗೂ ವೈ.ಎ.ನಾರಾಯಣಸ್ವಾಮಿ ಒದಗಿಸಿದ್ದೇವೆಂದರು..

     ಕೊಟ್ಟದ ಟಿ.ಗೋವಿಂದಪ್ಪ ಅವರು ಕರೆ ಮಾಡಿ ಬಯಲು ರಂಗಮಂದಿರಕ್ಕೆ ಬೇಡಿಕೆ ಇಟ್ಟರು. ಕಲಾವಿದರ ಕಣಜವಾದ ಸಿರಾ ನಗರದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಹೆಸರಲ್ಲಿ ಸುಸಜ್ಜಿತ ರಂಗಮಂದಿರ ಮಾಡಲು ಯೋಜನೆ ರೂಪಿಸಿದ್ದು, ಗ್ರಾಮಮಟ್ಟದಲ್ಲಿ ಸಮುದಾಯ ಭವನಗಳನ್ನು ಸದ್ಬಳಕೆ ಮಾಡಿಕೋಳ್ಳಣ ಎಂದರು.

      ಸಿರಾದ ಡಿ.ಎಚ್‍ಲಕ್ಕೇಗೌಡ ಅವರು ಕರೆ ಮಾಡಿ ಗಡಿ ತಾಲೂಕಿನ ವಿದ್ಯಾವಂತರಿಗೆ ಕೆಲಸ ಕೊಡುವ ನಿಟ್ಟಿನಲ್ಲಿ ಉದ್ಯೋಗ ಮೇಳ ಆಯೋಜಿಸುವಂತೆ ಕೋರಿದರು. ಸಿರಾದಲ್ಲಿ 3000 ಎಕರೆಯಲ್ಲಿ ಕೈಗಾರಿಕಾ ಪ್ರಾಂಗಣ ತಲೆ ಎತ್ತುತ್ತಿತ್ತು ಶೇ 60 ರಷ್ಟು ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂದು ಧ್ವನಿ ಎತ್ತಿರುವೆ. ಶೀಘ್ರವೇ ಉದ್ಯೋಗ ಮೇಳವನ್ನು ಮಾಡುವುದಾಗಿ ತಿಳಿಸಿದರು. ಹಿರಿಯೂರು ಧರ್ಮಪುರದ ಶಿವಲಿಂಗಯ್ಯ ಅವರು ಕರೆ ಮಾಡಿ ಆರೋಗ್ಯ ಇಲಾಖೆಯಲ್ಲಿ ಮಾನಸಿಕ ಆಪ್ತ ಸಮಾಲೋಚಕರ ಖಾಯಂತಿ ಬಗ್ಗೆ ಗಮನಹರಿಸಬೇಕೆಂದು ಕೋರಿದರು. ಸಿರಾದಿಂದ ರಂಗನಾಥ್ ಅವರು ಕರೆ ಮಾಡಿ ಕೋವಿಡ್ ಪರಿಹಾರ ಪಡೆಯುವ ಮಾರ್ಗಸೂಚಿಯೇ ಬಿಡುಗಡೆಯಾಗಿಲ್ಲ ಎಂದರೆ, ತುಮಕೂರಿಂದ ರಾಮು ಎಂಬುವರು ಕರೆ ಮಾಡಿ ಪೊಲೀಸ್ ಕಾನ್ಟ್‍ಟೇಬಲ್ ನೇಮಕಾತಿ ಸಂಬಂಧ ವಯೋಮಿತಿ ಹೆಚ್ಚಳಕ್ಕೆ ಪರಿಷತ್ ಸದಸ್ಯರಲ್ಲಿ ಮೊರೆಯಿಟ್ಟರು.

      5 ಜಿಲ್ಲೆಗಳಿಂದ ಕರೆ, ಶಾಸಕರ ಕಾರ್ಯಕ್ಕೆ ಮೆಚ್ಚುಗೆ:

      ಕ್ಷೇತ್ರ ವ್ಯಾಪ್ತಿಯ ತುಮಕೂರು, ದಾವಣಗೆರೆ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಬಂದ ಕರೆಗಳೆಲ್ಲವಕ್ಕೂ ಪರಿಹಾರ ಸೂಚಿಸಿದ ಶಾಸಕರು, ಪ್ರಜಾಪ್ರಗತಿ-ಪ್ರಗತಿ ವಾಹಿನಿ ಕ್ಷೇತ್ರದ ಜನರೊಂದಿಗೆ ಸಂಪರ್ಕಿಸಲು ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ ಎಂದರು. ಇನ್ನೂ ಕರೆ ಮಾಡಿದ ಹಲವರು ಕೋವಿಡ್ ಸಂದರ್ಭದಲ್ಲಿ ಪರಿಷತ್ ಸದಸ್ಯರಾಗಿ ಮಾಡಿದ ಸೇವೆ, ಪದವೀಧರ ಸಮಸ್ಯೆಗೆ ಸ್ಪಂದಿಸುತ್ತಿರುವ ಕುರಿತು ಚಿದಾನಂದಗೌಡ ಅವರಿಗೆ ಮೆಚ್ಚುಗೆ ಸೂಚಿಸಿದರು.

ಸಿಬ್ಬಂದಿ ಕೊರತೆಯಿದ್ದರೆ ಗುಣಮಟ್ಟದ ಶಿಕ್ಷಣ ಅಸಾಧ್ಯ :

      ಶಿಕ್ಷಣ ಇಲಾಖೆಯಲ್ಲಿ ನೇಮಕಾತಿ ತೀವ್ರ ವಿಳಂಬವಾಗುತ್ತಿದೆ. ಡಿಗ್ರಿ ಪಡೆದವರು ತೊಂದರೆ ಎದುರಿಸುವಂತಾಗಿದೆ ಎಂದು ಚಿದಾನಂದ್ ಎಂಬುವರು ಕರೆ ಮಾಡಿ ಗಮನಸೆಳೆದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕರು ನಿಮ್ಮ ಮಾತು ನಿಜ ಸರಕಾರಿ ಶಾಲಾ ಕಾಲೇಜುಗಳಲ್ಲಿ ಇಷ್ಟು ದೊಡ್ಡ ಮಟ್ಟದ ಸಿಬ್ಬಂದಿ ಕೊರತೆಯಿರುವುದು ಗುಣಮಟ್ಟದ ಶಿಕ್ಷಣಕ್ಕೆ ತೊಡಕಾಗಿದೆ. ಇದಕ್ಕೆ ಅಂತ್ಯ ಕಾಣಿಸಲೇಬೇಕಿದೆ. 420 ಡಿಗ್ರಿ ಕಾಲೇಜು ಪೈಕಿ ಇಬ್ಬರು ಮಾತ್ರ ಪೂರ್ಣಾವಧಿ ಪ್ರಾಂಶುಪಾಲರಿದ್ದರು. ನಮ್ಮ ಸರಕಾರ ಈ ಸಮಸ್ಯೆ ಬಗೆಹರಿಸಿ ಶಾಶ್ವತ ಪ್ರಾಂಶುಪಾಲರನ್ನು ನಿಯೋಜಿಸುತ್ತಿದ್ದು, ಅತಿಥಿ ಉಪನ್ಯಾಸಕರ ಗೌರವಧನವನ್ನು 25 ರಿಂದ 30 ಸಾವಿರ ಹೆಚ್ಚಿಸುವ ಜೊತೆಗೆ ನೇಮಕಾತಿಯಲ್ಲಿ ಕೃಪಾಂಕ ನೀಡಲು ಉನ್ನತ ಶಿಕ್ಷಣ ಸಚಿವರನ್ನು ಒತ್ತಾಯಿಸಲಾಗಿದೆ. ಸಹಾಯಕ ಪ್ರಾಧ್ಯಾಪಕರ ನೇಮಕಾತಿಯೂ ಶೀಘ್ರ ಆಗಲಿದೆ ಎಂದರು.

ಗಡಿ ಶಿಕ್ಷಕರಿಂದ ಬೇರೆಡೆಗೆ ವರ್ಗ ಮಾಡಿಸಿಕೊಳ್ಳಲು ಅಮಾನತ್ತಿನ ತಂತ್ರ :

      ಬರಗೂರಿನ ನಾಗರಾಜು, ಮಂಜಣ್ಣ ಎಂಬುವರು ಕರೆ ಮಾಡಿ ಹುಲಿಕುಂಟೆ ಹೋಬಳಿಯನ್ನು ಬೇಕಂತಲೆ ಶಿಕ್ಷಕರ ಅಮಾನತ್ತು ಮಾಡಲಾಗುತ್ತಿದೆ. ಏನಿದರ ಮರ್ಮ ಎಂಬುದೇ ತಿಳಿಯುತ್ತಿಲ್ಲ. ಗಡಿ ಭಾಗದಿಂದ ವರ್ಗ ಮಾಡಿಸಿಕೊಳ್ಳಲು ಈ ರೀತಿ ಮಾಡಲಾಗುತ್ತಿದೆಯಾ ಎಂದು ಪ್ರಶ್ನಿಸಿದರು. ಇದು ತಮ್ಮ ಗಮನಕ್ಕೂ ಬಂದಿದ್ದು, ಇದು ಬರೀ ಹುಲಿಕುಂಟೆ ಹೋಬಳಿಯೊಂದರ ಸಮಸ್ಯೆಯಲ್ಲ. ಕೋಲಾರ, ಚಿಕ್ಕಬಳ್ಳಾಪುರ, ಪಾವಗಡದಲ್ಲೂ ಇದೇ ಸಮಸ್ಯೆ . ಇದನ್ನು ಅಧಿವೇಶನದಲ್ಲಿ ಸಹ ಪ್ರಸ್ತಾಪಿಸಿದ್ದು, ಸರಕಾರಿ ಶಾಲೆ ಬಲಹೀನಗೊಳಿಸಲು ಅಧಿಕಾರಿಗಳೇ ಕೈ ಜೋಡಿಸಿರುವ ಶಂಕೆ ಇದೆ. ಬರಗೂರಿನ ನಾನು ಓದಿದ ಶಾಲೆಯನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು 3 ಕೋಟಿ ಅನುದಾನ ಸಹ ಒದಗಿಸಿದ್ದು, ಬಿಇಒ ಜೊತೆ ಮಾತಾಡಿ ಸೂಕ್ತ ನಿರ್ದೇಶನ ನೀಡುವುದಾಗಿ ತಿಳಿಸಿದರು.

ಮದಲೂರು ಕೆರೆಗೆ ನೀರು ಹರಿಸುವುದು ನಿಶ್ಚಿತ :

      ಸಿರಾ ತಾಲೂಕು ಮುಷ್ಟಿಗರಹಳ್ಳಿ ವಾಸಿ ಎಲ್ ನರಸಿಂಹಯ್ಯ, ಹುಲಿಕುಂಟೆ ಲಿಂಗಣ್ಣ ಅವರು ಕರೆ ಮಾಡಿ ಸಿರಾ ಉಪಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಮದಲೂರು ಕೆರೆಯನ್ನು ಯಾವಾಗ ತುಂಬಿಸುತ್ತೀರಾ, ಸಿಎಂ ಕರೆಸಿ ಬಾಗಿನ ಎಂದು ಅರ್ಪಿಸುತ್ತಿರಿ ಎಂದು ಪ್ರಶ್ನಿಸಿದರು. ಮದಲೂರು ಕೆರೆಗೆ ನೀರು ತುಂಬಿಸುವ ಪ್ರಯತ್ನ ಕಳೆದ ವರ್ಷದಂತೆ ಈ ಬಾರಿಯೂ ಆಗಲಿದೆ.ಶಿರಾ ಕಳ್ಳಂಬೆಳ್ಳ ಕೆರೆ ತುಂಬಿಸಿ ಮದಲೂರು ಕೆರೆಗೂ ಹೇಮೆ ನೀರು ಹರಿಯಲಿದೆ ಎಂದು ಚಿದಾನಂದಗೌಡ ತಿಳಿಸಿದರು.

      ಯುವ ಜನರಿಗೆ ಮಾರ್ಗದರ್ಶನದ ಕೊರತೆಯಿದೆ. ಯಾವುದೇ ಡಿಗ್ರಿ ಜೊತೆ ಬಿಇಡಿ ಮಾಡಿದವರು ಶಿಕ್ಷಕರೇ ಆಗಬೇಕೆಂದು ಹಾತೊರೆಯುತ್ತಿದ್ದಾರೆ. ಇದನ್ನು ತಲೆಯಿಂದ ತೆಗೆದು ಪರ್ಯಾಯ ಅವಕಾಶಗಳ ಬಗ್ಗೆ ಯೋಚಿಸಬೇಕು. ಎನ್‍ಇಪಿಯಡಿ ಹೊಸ ಕೌಶಲ್ಯ, ಬಹು ಆಯ್ಕೆಯ ಅವಕಾಶಗಳು ಲಭ್ಯವಾಗಲಿವೆ. ಸರಕಾರಿ ಉದ್ಯೋಗಗಳಿಗೆ ಹಾತೊರೆಯದೆ ಕೌಶಲ್ಯಾಧರಿತ ವೃತ್ತಿ ಶಿಕ್ಷಣದ ಕಡೆ ಹೆಚ್ಚು ಗಮನಹರಿಸಬೇಕಿದೆ.

-ಚಿದಾನಂದ ಎಂ.ಗೌಡ, ವಿಧಾನ ಪರಿಷತ್ ಸದಸ್ಯರು.

Recent Articles

spot_img

Related Stories

Share via
Copy link