ಚಿಕ್ಕಮಗಳೂರು ನಗರ ಬಂದ್ ಭಾಗಶಃ ಯಶಸ್ವಿ

ಚಿಕ್ಕಮಗಳೂರು: 

 ರಾಯಚೂರಿನ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನಿಸಿದ್ದಾರೆ ಎಂದು ಆರೋಪಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರ ಕರೆ ನೀಡಿದ್ದ ನಗರ ಬಂದ್ ಭಾಗಶಃ ಯಶಸ್ವಿಯಾಯಿತು.

ದಲಿತ ಸಂಘರ್ಷ ಸಮಿತಿ, ಬಿವಿಎಸ್, ಎಸ್‌ಡಿಪಿಐ, ಹಜರತ್ ಟಿಪ್ಪು ಸುಲ್ತಾನ್‌ ಅಭಿಮಾನಿಗಳ ಸಂಘದ ಕಾರ್ಯಕರ್ತರು ಬೆಳಿಗ್ಗೆಯೇ ರಸ್ತೆಗಿಳಿದು ದ್ವಿಚಕ್ರ ವಾಹನಗಳಲ್ಲಿ ನಗರದಲ್ಲಿ ಸುತ್ತಿದರು.

ಅಂಗಡಿ ಮುಂಗಟ್ಟು ತೆರೆಯದಂತೆ ಮಾಲೀಕರಿಗೆ ಮನವಿ ಮಾಡಿ, ಬಾಗಿಲು ಮುಚ್ಚಿಸಿದರು.

ನಗರದ ಐಜಿ ರಸ್ತೆ, ಎಂ.ಜಿ ರಸ್ತೆ, ಆರ್‌ಜಿ ರಸ್ತೆಗಳಲ್ಲಿ ಬಟ್ಟೆ, ಚಪ್ಪಲಿ, ದಿನಸಿ, ತರಕಾರಿ, ಹಣ್ಣು, ಚಿನ್ನಾಭರಣ, ಮಾಂಸ, ಮೀನು ಮಾರಾಟ ಮಳಿಗೆಗಳು, ಎಲೆಕ್ಟ್ರಿಕ್, ಹಾರ್ಡ್‌ವೇರ್ ಮಳಿಗೆಗಳು, ಹೊಟೇಲ್ ಬಾಗಿಲು ಮುಚ್ಚಿದ್ದವು.

ಪೆಟ್ರೋಲ್ ಬಂಕ್, ಔಷಧ ಮಾರಾಟ ಮಳಿಗೆಗಳು, ಸರ್ಕಾರಿ ಕಚೇರಿಗಳು, ಬ್ಯಾಂಕುಗಳು, ಅಂಚೆ ಕಚೇರಿ, ಶಾಲಾ-ಕಾಲೇಜುಗಳು ಕಾರ್ಯನಿರ್ವಹಿಸಿದವು. ವಾಹನ ಸಂಚಾರ ಮಾಮೂಲಿಯಂತೆ ಇತ್ತು.

ಕೆಎಸ್‌ಆರ್‌ಟಿಸಿ ಬಸ್, ಆಟೊ, ಟ್ಯಾಕ್ಸಿ, ಸರಕು ಸಾಗಣೆ ವಾಹನಗಳ ಸಂಚಾರ ಇತ್ತು. ಐಜಿ ಎಂ.ಜಿ ರಸ್ತೆಗಳಲ್ಲಿ ಸಂಚಾರ ವಿರಳವಾಗಿತ್ತು. ಮಧ್ಯಾಹ್ನದ ನಂತರ ಅಂಗಡಿ ಮುಂಗಟ್ಟುಗಳು ತೆರೆದವು.

ಮಧ್ಯಾಹ್ನ 12 ಗಂಟೆಗೆ ಹನುಮಂತಪ್ಪ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಕಾರರು, ಕೆಲ ಕಾಲ ರಸ್ತೆ ತಡೆ ನಡೆಸಿದರು. ನಂತರ ಎಂ.ಜಿ.ರಸ್ತೆ ಮಾರ್ಗವಾಗಿ ಆಜಾದ್ ಪಾರ್ಕ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರ ಅಣಕು ಶವಯಾತ್ರೆ ನಡೆಸಿದರು. ಮಲ್ಲಿಕಾರ್ಜುನ ಗೌಡ ಅವರನ್ನು ಗಡಿಪಾರು ಮಾಡಬೇಕು ಎಂದು ಘೋಷಣೆ ಕೂಗಿದರು.

ಆಜಾದ್ ಪಾರ್ಕ್ ವೃತ್ತದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ‘ಸಂವಿಧಾನದ ಆಶಯದಡಿ ನ್ಯಾಯಾಧೀಶರು ಪ್ರಮಾಣ ವಚನ ಸ್ವೀಕರಿಸಿರುತ್ತಾರೆ. ಜಾತಿ ಮನೋಭಾವನೆಯುಳ್ಳ ನ್ಯಾಯಾಧೀಶರಿಂದ ತಳಸಮುದಾಯದವರಿಗೆ ನ್ಯಾಯ ದೊರೆಯುವುದಿಲ್ಲ. ಮಲ್ಲಿಕಾರ್ಜುನಗೌಡ ಅವರನ್ನು ಸೇವೆಯಿಂದ ವಜಾಗೊಳಿಸಬೇಕು’ ಎಂದು ಒತ್ತಾಯಿಸಿದರು.

ಮಾನವ ಹಕ್ಕು ಸಂರಕ್ಷಣಾ ವೇದಿಕೆ ಅಧ್ಯಕ್ಷ ಹೊನ್ನೇಶ್ ಮಾತನಾಡಿ, ‘ಡಾ.ಬಿ.ಆರ್.ಅಂಬೇಡ್ಕರ್ ಅವರು ಎರಡು ವರ್ಷ, ಹನ್ನೊಂದು ತಿಂಗಳು ಶ್ರಮಪಟ್ಟು ಸಂವಿಧಾನ ರಚಿಸಿದ್ದಾರೆ. ಸಂವಿಧಾನ ರಚನೆಗಾಗಿ ಅವರು ಪ್ರತಿನಿತ್ಯ 15ರಿಂದ16 ಗಂಟೆ ಅಭ್ಯಸಿಸುತ್ತಿದ್ದರು. ಅವರು ದಲಿತರಿಗೆ ಮಾತ್ರ ಸಮಾನತೆ ನೀಡಿಲ್ಲ. ಎಲ್ಲ ಸಮುದಾಯದವರ ಅಭಿವೃದ್ಧಿಗೆ ಶ್ರಮಿಸಿದ್ದಾರೆ’ ಎಂದು ಹೇಳಿದರು.

ವಕೀಲ ಅನಿಲ್‌ಕುಮಾರ್ ಮಾತನಾಡಿ, ‘ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನಿಸಿದ್ದಕ್ಕೆ ರಾಜ್ಯದ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ. ಪಕ್ಷಾತೀತವಾಗಿ ಹೋರಾಟ ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಅಂಬೇಡ್ಕರ್ ಹಾಗೂ ಸಂವಿಧಾನದ ವಿರುದ್ಧ ಮಾತನಾಡುವವರಿಗೆ ಬಂದ್ ಆಚರಣೆ ಎಚ್ಚರಿಕೆ ಕರೆ ಗಂಟೆಯಾಗಿದೆ’ ಎಂದರು.

ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾಘಟಕದ ಅಧ್ಯಕ್ಷ ಕೆ.ಪಿ.ವೆಂಕಟೇಶ್, ದಲಿತ ಸಂಘರ್ಷ ಸಮಿತಿ ಜಿಲ್ಲಾಘಟಕದ ಸಂಚಾಲಕ ಕಬ್ಬಿಕೆರೆ ಮೋಹನ್, ಬಿವಿಎಸ್ ಸಂಚಾಲಕ ಕೂದುವಳ್ಳಿ ಮಂಜುನಾಥ್, ದಲಿತ ಸಂಘರ್ಷ ಸಮಿತಿ ಒಕ್ಕೂಟದ ಅಧ್ಯಕ್ಷ ದಂಟರಮಕ್ಕಿ ಶ್ರೀನಿವಾಸ್, ಹಜರತ್ ಟಿಪ್ಪು ಅಭಿಮಾನಿಗಳ ಸಂಘದ ಜಿಲ್ಲಾಘಟಕದ ಅಧ್ಯಕ್ಷ ಜಂಶೀದ್‌ಖಾನ್, ಮುಖಂಡರಾದ ಅಂಗಡಿ ಚಂದ್ರು, ಹಂಪ್ಪಯ್ಯ, ಚಂದ್ರಶೇಖರ್ ಇದ್ದರು.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap