ಬೀಜಿಂಗ್:
ಅಮೆರಿಕ ವಿರುದ್ಧ ಬಹು ಉತ್ಪನ್ನಗಳ ಮೇಲೆ ಪ್ರತಿ-ಸುಂಕಗಳನ್ನು ಜಾರಿಗೆ ತರುತ್ತಿರುವುದಾಗಿ ಚೀನಾದ ವಾಣಿಜ್ಯ ಸಚಿವಾಲಯ ಮಂಗಳವಾರ ಘೋಷಿಸಿದ್ದು, ಗೂಗಲ್ ವಿರುದ್ಧ ತನಿಖೆ ಸೇರಿದಂತೆ ಇತರ ವ್ಯಾಪಾರ-ಸಂಬಂಧಿತ ಕ್ರಮಗಳ ಬಗ್ಗೆಯೂ ಎಚ್ಚರಿಕೆ ನೀಡಿದೆ.
ಕಲ್ಲಿದ್ದಲು ಮತ್ತು ದ್ರವೀಕೃತ ನೈಸರ್ಗಿಕ ಅನಿಲ ಉತ್ಪನ್ನಗಳ ಮೇಲೆ ಶೇ.15 ರಷ್ಟು ಸುಂಕವನ್ನು ಹಾಗೂ ಕಚ್ಚಾ ತೈಲ, ಕೃಷಿ ಯಂತ್ರೋಪಕರಣಗಳು, ದೊಡ್ಡ-ಸ್ಥಳಾಂತರ ಕಾರುಗಳ ಮೇಲೆ ಶೇ.10 ರಷ್ಟು ಸುಂಕವನ್ನು ಜಾರಿಗೆ ತರುವುದಾಗಿ ಚೀನಾ ಸರ್ಕಾರ ಹೇಳಿದೆ.
ಯುಎಸ್‌ನ ಏಕಪಕ್ಷೀಯ ಸುಂಕ ಹೆಚ್ಚಳವು ವಿಶ್ವ ವ್ಯಾಪಾರ ಸಂಸ್ಥೆಯ ನಿಯಮಗಳನ್ನು ಗಂಭೀರವಾಗಿ ಉಲ್ಲಂಘಿಸುತ್ತದೆ. ಇದು ತನ್ನದೇ ಆದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯಕವಾಗುರುವುದರ ಜೊತೆಗೆ ಚೀನಾ ಮತ್ತು ಯುಎಸ್ ನಡುವಿನ ಸಾಮಾನ್ಯ ಆರ್ಥಿಕ ಮತ್ತು ವ್ಯಾಪಾರ ಸಹಕಾರವನ್ನು ಹಾನಿಗೊಳಿಸುತ್ತದೆ ಎಂದು ಹೇಳಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ಮೇಲೆ ವಿಧಿಸುವುದಾಗಿ ಹೇಳಿರುವ ಶೇಕಡಾ 10ರಷ್ಟು ಸುಂಕವು ಇಂದು ಜಾರಿಗೆ ಬರಬೇಕಿತ್ತು, ಆದರೆ ಟ್ರಂಪ್ ಮುಂದಿನ ಕೆಲವು ದಿನಗಳಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಮಾತನಾಡಲು ಯೋಜಿಸಿದ್ದರು.
ಚೀನಾದ ಮಾರುಕಟ್ಟೆ ನಿಯಂತ್ರಣ ರಾಜ್ಯ ಆಡಳಿತವು ಗೂಗಲ್ ಕಾನೂನು ಉಲ್ಲಂಘಿಸುತ್ತಿದೆ ಎಂಬ ಅನುಮಾನದ ಮೇಲೆ ತನಿಖೆ ನಡೆಸುತ್ತಿದೆ ಎಂದು ಹೇಳಿದೆ. ಡೊನಾಲ್ಡ್ ಟ್ರಂಪ್ ಅವರ ಶೇಕಡಾ 10ರಷ್ಟು ಸುಂಕ ಜಾರಿಗೆ ಬಂದ ಕೆಲವೇ ನಿಮಿಷಗಳ ನಂತರ ಚೀನಾ ಈ ಘೋಷಣೆ ಮಾಡಿದೆ.