ಭಾರತ- ಪಾಕಿಸ್ತಾನ ಉದ್ವಿಗ್ನತೆಯನ್ನು ಶಾಂತಗೊಳಿಸಿದ್ದು ನಾನೇ ಎಂದ ಚೀನಾ

ಬೀಜಿಂಗ್:

    ಪಹಲ್ಗಾಮ್ ಭಯೋತ್ಪಾದಕ ದಾಳಿಗೆ   ಪ್ರತಿಯಾಗಿ ಭಾರತೀಯ ಸೇನೆ  ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಉಂಟಾದ ಉದ್ವಿಗ್ನತೆಯನ್ನು  ಶಮನಗೊಳಿಸಿದ್ದು ನಾನೇ ಎಂದು ಚೀನಾ ಹೇಳಿದೆ. ಈ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್   ಕೂಡ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ಕೊನೆಗೊಳಿಸಿದ್ದು ನಾನೇ ಎಂದು ಹೇಳಿ ವಿವಾದ ಎಬ್ಬಿಸಿದ್ದರು. ಆದರೆ ಈ ಎರಡು ಹೇಳಿಕೆಗಳನ್ನು ಭಾರತ ನಿರಾಕರಿಸಿದೆ. ಇದರಲ್ಲಿ ಯಾರೂ ಮಧ್ಯಸ್ಥಿಕೆ ವಹಿಸಿಲ್ಲ ಎಂದು ಸ್ಪಷ್ಟಪಡಿಸಿದೆ.

   ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರು ಮಂಗಳವಾರ ನಡೆದ ಕಾರ್ಯಕ್ರಮವೊಂದರಲ್ಲಿ ಕಳೆದ ಮೇ ತಿಂಗಳಲ್ಲಿ ಉಂಟಾಗಿದ್ದ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ಶಾಂತಗೊಳಿಸಲು ಚೀನಾ ಮಧ್ಯಸ್ಥಿಕೆ ವಹಿಸಿದೆ ಎಂದು ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮದಲ್ಲಿ ಮೂರನೇ ವ್ಯಕ್ತಿಯ ಹಸ್ತಕ್ಷೇಪವನ್ನು ಪದೇ ಪದೇ ಭಾರತ ತಿರಸ್ಕರಿಸುತ್ತಿದ್ದರೂ ಮತ್ತೆ ಮತ್ತೆ ಈ ಹೇಳಿಕೆಗಳು ಹುಟ್ಟಿಕೊಳ್ಳುತ್ತಿವೆ.

    ಬೀಜಿಂಗ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಪರಿಸ್ಥಿತಿ ಮತ್ತು ಚೀನಾದ ವಿದೇಶಾಂಗ ಸಂಬಂಧಗಳ ಕುರಿತಾದ ವಿಚಾರ ಸಂಕಿರಣದಲ್ಲಿ ಮಾತನಾಡಿದ ವಾಂಗ್, ಈ ವರ್ಷದಲ್ಲಿ ಜಗತ್ತಿನಲ್ಲಿ ಸಂಘರ್ಷ ಮತ್ತು ಅಸ್ಥಿರತೆ ತೀವ್ರ ಹೆಚ್ಚಳವಾಗಿದೆ. ಎರಡನೇ ಮಹಾಯುದ್ಧದ ಬಳಿಕ ಸ್ಥಳೀಯ ಯುದ್ಧಗಳು ಮತ್ತು ಗಡಿಯಾಚೆಗಿನ ಸಂಘರ್ಷಗಳು ತೀವ್ರವಾಗಿ ಹೆಚ್ಚಾಗಿವೆ ಎಂದು ಅವರು ತಿಳಿಸಿದರು.

    ಹಲವು ಅಂತಾರಾಷ್ಟ್ರೀಯ ಸಂಘರ್ಷಗಳನ್ನು ಪರಿಹರಿಸುವಲ್ಲಿ ಚೀನಾ ವಸ್ತುನಿಷ್ಠ ಮತ್ತು ನ್ಯಾಯಯುತ ನಿಲುವನ್ನು ಅಳವಡಿಸಿಕೊಂಡಿದೆ. ಶಾಶ್ವತ ಶಾಂತಿಯನ್ನು ನಿರ್ಮಿಸಲು ಸಮಸ್ಯೆಗಳ ಮೂಲ ಕಾರಣಗಳನ್ನು ಹುಡುಕಿ ಪರಿಹರಿಸುವತ್ತ ಗಮನಹರಿಸಿದ್ದೇವೆ ಎಂದು ಅವರು ತಿಳಿಸಿದರು.

   ಉತ್ತರ ಮ್ಯಾನ್ಮಾರ್‌, ಇರಾನಿನ ಪರಮಾಣು ಸಮಸ್ಯೆ, ಪಾಕಿಸ್ತಾನ ಮತ್ತು ಭಾರತದ ನಡುವಿನ ಉದ್ವಿಗ್ನತೆ, ಪ್ಯಾಲೆಸ್ಟೈನ್ ಮತ್ತು ಇಸ್ರೇಲ್ ನಡುವಿನ ಸಮಸ್ಯೆಗಳು ಮತ್ತು ಕಾಂಬೋಡಿಯಾ ಮತ್ತು ಥೈಲ್ಯಾಂಡ್ ನಡುವಿನ ಸಂಘರ್ಷದಲ್ಲಿ ಚೀನಾ ಮಧ್ಯಸ್ಥಿಕೆ ವಹಿಸಿದೆ ಎಂದು ಅವರು ಹೇಳಿದ್ದಾರೆ. 

   ಕಳೆದ ಮೇ ತಿಂಗಳಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷದಲ್ಲಿ ಚೀನಾ ಪ್ರಮುಖ ಪಾತ್ರ ವಹಿಸಿದೆ ಎನ್ನುವ ಆರೋಪಗಳಿವೆ. ವಿಶೇಷವಾಗಿ ಅದು ಪಾಕಿಸ್ತಾನಕ್ಕೆ ಮಿಲಿಟರಿ ನೆರವು ನೀಡಿದೆ ಎನ್ನಲಾಗುತ್ತಿದೆ. ಪಾಕಿಸ್ತಾನದ ಅತಿದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರ ರಾಷ್ಟ್ರವಾಗಿರುವ ಚೀನಾವು ಪಾಕಿಸ್ತಾನದ ಮಿಲಿಟರಿ ಉಪಕರಣಗಳಲ್ಲಿ ಶೇಕಡಾ 81 ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ. ಆಪರೇಷನ್ ಸಿಂದೂರ್ ನ ಮೊದಲ ದಿನ ಚೀನಾವು ಎರಡು ರಾಷ್ಟ್ರಗಳ ನಡುವೆ ಸಂಯಮ ಕಾಯ್ದುಕೊಳ್ಳಲು ಕರೆ ನೀಡಿತ್ತು. ಅನಂತರ ಭಾರತೀಯ ಮಿಲಿಟರಿ ಅಧಿಕಾರಿಗಳು ಚೀನಾವು ತನ್ನ ಕಾರ್ಯತಂತ್ರದ ಉದ್ದೇಶಗಳನ್ನು ಮುನ್ನಡೆಸಲು ಭಾರತ ಮತ್ತು ಪಾಕಿಸ್ತಾನ ಸಂಘರ್ಷವನ್ನು ಬಳಸುತ್ತಿದೆ ಎಂದು ಆರೋಪಿಸಿದ್ದರು. ಆದರೆ ಇದಕ್ಕೆ ಚೀನಾ ಯಾವುದೇ ನೇರ ಪ್ರತಿಕ್ರಿಯೆ ನೀಡಿರಲಿಲ್ಲ.

Recent Articles

spot_img

Related Stories

Share via
Copy link