ಚಿಂತಾಮಣಿ ಮಾಆಜಿ ಶಾಸಕರಿಗೆ ಕೊಂಚ ರಿಲೀಫ್‌ ನೀಡಿದ ಹೈಕೋರ್ಟ್‌ …!

ಬೆಂಗಳೂರು:

     ವಿಧಾನಸಭೆಯ ಮಾಜಿ ಉಪ ಸಭಾಧ್ಯಕ್ಷ ಹಾಗೂ ಚಿಂತಾಮಣಿ ಕ್ಷೇತ್ರದ ಮಾಜಿ ಜೆಡಿಎಸ್‌ ಶಾಸಕ ಎಂ ಕೃಷ್ಣಾರೆಡ್ಡಿ ವಿರುದ್ಧದ ಮಾನನಷ್ಟ ದಾವೆಗೆ ಹೈಕೋರ್ಟ್‌ ತಡೆಯಾಜ್ಞೆ ವಿಧಿಸಿದೆ.

    ಬಿಜೆಪಿ ಮುಖಂಡ ಎನ್‌ ಆರ್‌ ರಮೇಶ್‌ ಹೂಡಿದ್ದ ಖಾಸಗಿ ದೂರನ್ನು ಆಧರಿಸಿ ಪ್ರಕರಣ ದಾಖಲಿಸಲು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಆದೇಶಿಸಿತ್ತು.

    ಮಾಜಿ ಶಾಸಕ ಕೃಷ್ಣಾರೆಡ್ಡಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.

    ಅರ್ಜಿದಾರರ ಕೋರಿಕೆಯಂತೆ ಮುಂದಿನ ವಿಚಾರಣೆವರೆಗೆ ಪ್ರಕರಣದ ಪ್ರಕ್ರಿಯೆ ತಡೆ ನೀಡಲಾಗಿದೆ. ಅರ್ಜಿದಾರರು ಬಳಸಿರುವ ಪದಗಳು ಸೆಕ್ಷನ್‌ 499ರ ಅಡಿ ಮಾನಹಾನಿ ವ್ಯಾಖ್ಯಾನದ ವ್ಯಾಪ್ತಿಗೆ ಒಳಪಡುವುದಿಲ್ಲ. ಸೆಕ್ಷನ್‌ 500ರ ಬಳಕೆ ಅನುಮಾನ ಎಂದು ಈ ಪರಿಹಾರ ಒದಗಿಸಲಾಗಿದೆ. ಈ ಮಧ್ಯಂತರ ಆದೇಶ ಮಾಡುವಾಗ ಕೆ ಎಸ್‌ ಮಲ್ಲಿಕಾರ್ಜುನ ಪ್ರಸನ್ನ ವರ್ಸಸ್‌ ಮೆಸಸ್‌ ಲಿಯೊ ಅರ್ಥ್‌ ಮೂವರ್ಸ್‌ ಪ್ರಕರಣವನ್ನು ಗಮನದಲ್ಲಿ ಇಟ್ಟುಕೊಂಡು ಆದೇಶ ಮಾಡಲಾಗಿದೆ” ಎಂದು ನ್ಯಾಯಾಲಯ ಆದೇಶ ಮಾಡಿದೆ.

    ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಗಣೇಶ‌ ಮಂದಿರ ವಾರ್ಡ್ ವ್ಯಾಪ್ತಿಯ ಬನಗಿರಿ ನಗರ ವ್ಯಾಪ್ತಿಗೆ ಒಳಪಡುವ ಕತ್ರಿಗುಪ್ಪೆಯ ಸರ್ವೇ ನಂ.125 ಮತ್ತು 126ಕ್ಕೆ ಸೇರಿದ ಅಂದಾಜು ₹ 350 ಕೋಟಿ ಮೌಲ್ಯದ 4.31 ಎಕರೆ ಬಿ.ಖರಾಬು ಜಮೀನಿಗೆ 41 ಮಂದಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಬಳಿಸುವ ಯತ್ನ ನಡೆಸಿದ್ದಾರೆ ಎಂದು ರಮೇಶ್‌ ಆರೋಪಿಸಿದ್ದರು. ಈ ಸಂಬಂಧ ಲೋಕಾಯುಕ್ತ ಮತ್ತು ಬೆಂಗಳೂರು ಮಹಾನಗರ ಕಾರ್ಯಪಡೆಯಲ್ಲಿ (ಬಿಎಂಟಿಎಫ್) ದೂರು ಸಲ್ಲಿಸಿದ್ದರು.

    ಈ ದೂರು ಆಧರಿಸಿ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಆಗ ವಿಧಾನಸಭಾ ಅರ್ಜಿಗಳ ಸಮಿತಿಯ ಅಧ್ಯಕ್ಷರೂ ಆಗಿದ್ದ ಕೃಷ್ಣಾರೆಡ್ಡಿ ಆರೋಪಿಗಳ ವಿರುದ್ಧ ಕ್ರಮಕ್ಕೆ ಆದೇಶಿಸುವ ಬದಲಾಗಿ, ಪಾಲಿಕೆಯ ಸ್ವತ್ತನ್ನು ವಶಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದ ಅಧಿಕಾರಿಯ ವಿರುದ್ಧವೇ ನಿರ್ಣಯ ತೆಗೆದುಕೊಂಡಿದ್ದರು ಎಂದು ಆರೋಪದಲ್ಲಿ ವಿವರಿಸಲಾಗಿತ್ತು. ಈ ಸಂಬಂಧ ರಮೇಶ್‌ ಮಾಧ್ಯಮಗೋಷ್ಠಿ ನಡೆಸಿ ದಾಖಲೆ ಬಿಡುಗಡೆ ಮಾಡಿದ್ದರು.

    ಇದಕ್ಕೆ ವಿರುದ್ಧವಾಗಿ ಕೃಷ್ಣಾರೆಡ್ಡಿ ಹೇಳಿಕೆ ನೀಡಿದ್ದರು. ಕೃಷ್ಣಾರೆಡ್ಡಿ ನನ್ನ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಮತ್ತು ಮಾನನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ರಮೇಶ್ ಅವರು ಕೃಷ್ಣಾರೆಡ್ಡಿ ವಿರುದ್ಧ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಈ ಸಂಬಂಧ ಸಂಜ್ಞೇ ಪರಿಗಣಿಸಿದ್ದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಕೃಷ್ಣಾರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಲು ಚಿಂತಾಮಣಿ ಪೊಲೀಸರಿಗೆ ಆದೇಶಿಸಿತ್ತು. ಈ ಪ್ರಕ್ರಿಯೆ ಹೈಕೋರ್ಟ್‌ ತಡೆ ನೀಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap