‘ಆ.14ರೊಳಿಗೆ ಸಾಗುವಳಿದಾರಿಗೆ ಹಕ್ಕು ಪತ್ರ ಕೊಡಿ’ -ಸಿಎಂಗೆ ಹೆಚ್.ಎಸ್.ದೊರೆಸ್ವಾಮಿ ಗಡುವು

 ಚಿತ್ರದುರ್ಗ:

      ದೇಶಕ್ಕೆ ಸ್ವಾತಂತ್ರ ಬಂದು ಎಪ್ಪತ್ತು ವರ್ಷಗಳಾದರೂ ಇನ್ನು ಬಡವರಿಗೆ ಭೂಮಿ ಹಕ್ಕು ನೀಡದೆ ಸತಾಯಿಸುತ್ತಿದ್ದೀರಲ್ಲ. ನಿಮಗೆ ನಾಚಿಕೆ ಮಾನ ಮರ್ಯಾದೆ ಏನಾದರೂ ಇದೆಯಾ ನಮ್ಮಿಂದ ಓಟು ಪಡೆದು ಅಧಿಕಾರಕ್ಕೇರುತ್ತೀರ. ಬಡವರ ಬಗ್ಗೆ ಕಿಂಚಿತ್ತು ಕನಿಕರ ಇಲ್ಲ. ಮನಸ್ಸು ಹೃದಯ ನಿಮಗೆ ಇಲ್ವಾ ಎಂದು ರಾಜ್ಯದ ಮುಖ್ಯಮಂತ್ರಿಯಿಂದ ಹಿಡಿದು ಸಂಸದ, ಶಾಸಕರುಗಳಿಗೆ ಹಿರಿಯ ಸ್ವಾತಂತ್ರ ಸೇನಾನಿ ಎಚ್.ಎಸ್.ದೊರೆಸ್ವಾಮಿ ಛೀಮಾರಿ ಹಾಕಿದರು.

      ಅರಣ್ಯ ಮತ್ತು ಬಗರ್‍ಹುಕುಂ ಸಾಗುವಳಿದಾರರು ಕಳೆದ ಹದಿನೈದು ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ನಡೆಸುತ್ತಿರುವ ಧರಣಿಯಲ್ಲಿ ಸೋಮವಾರ ಭಾಗವಹಿಸಿ ಮಾತನಾಡಿದ ಎಚ್.ಎಸ್.ದೊರೆಸ್ವಾಮಿ ಈ ದೇಶ ನಮ್ಮದು, ಸಂಪತ್ತು ನಮ್ಮದು, ನಿಮ್ಮನ್ನು ನಾವು ಭಿಕ್ಷೆ ಕೇಳುತ್ತಿಲ್ಲ. ಹೊಟ್ಟೆಪಾಡಿಗಾಗಿ ಭೂಮಿ ಸಾಗುವಳಿ ಮಾಡುತ್ತಿರುವ ಬಡವರಿಗೆ ಹಕ್ಕುಪತ್ರ, ಇರಲು ಮನೆ ಕೊಡಿ ಎಂದು ಅಂಗಲಾಚುತ್ತಿದ್ದೇವೆ. ನೀವುಗಳು ಇರುವುದು ನಮ್ಮ ಸೇವೆಗಾಗಿ ಎಂದು ರಾಜಕಾರಣಿಗಳು ಹಾಗೂ ಅಧಿಕಾರಿಗಳ ವಿರುದ್ದ ಕಿಡಿಕಾರಿದರು.
ಅರಣ್ಯ ಮತ್ತು ಬಗರ್‍ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಕೊಡಿ ಎಂದು ಹೋರಾಟ ಮಾಡಿ ಸರ್ಕಾರದ ಗಮನ ಸೆಳೆದಿದ್ದೇವೆ. ತಲಾ ಒಬ್ಬರಿಗೆ ಎರಡು ಎಕರೆ ಜಮೀನು, ಮನೆ ಕೊಡೋಣ ಎಂದು ತೀರ್ಮಾನಿಸಿದ್ದಾರೆ. ಆದೇಶ ಮಾಡಿದರೆ ಸಾಲದು. ಹಕ್ಕುಪತ್ರ ಕೈಗೆ ಸಿಗಬೇಕಲ್ಲವೇ? ಕೊಡೋತನಕ ಹೋರಾಡುತ್ತೇವೆ. ಆ.14 ರವರೆಗೆ ರಾಜ್ಯದ ಮುಖ್ಯಮಂತ್ರಿಗೆ ಗಡುವು ನೀಡುತ್ತೇವೆ. ಇಲ್ಲವಾದಲ್ಲಿ ಸ್ವಾತಂತ್ರ ದಿನಾಚರಣೆಯಂದು ಘೇರಾವ್ ಮಾಡುತ್ತೇವೆಂದು ಎಚ್ಚರಿಕೆ ನೀಡಿದರು.

      ಬಡವರ ಕಷ್ಟಗಳ ಬಗ್ಗೆ ಮಾತನಾಡದಿದ್ದರೆ ಶಾಸನಸಭೆಗೆ ಬೀಗ ಹಾಕುತ್ತೇವೆಂದು ಘರ್ಜಿಸಿದಾಗ ಎಲ್ಲರೂ ಧಾವಿಸಿ ಕ್ಷಮೆ ಕೇಳಿಕೊಂಡರು. ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿದೆ. ಅದರಿಂದ ಯಾವುದೇ ಪ್ರಯೋಜನವಿಲ್ಲದೆ ಮೇಲೆ ನಾವು ಕಮಿಟಿಯಲ್ಲಿ ಇರುವುದಿಲ್ಲ. ರಾಜೀನಾಮೆ ಕೊಡುತ್ತೇನೆ. ರಾಜ್ಯ ಸರ್ಕಾರ ಬಡವರಿಗೆ ಭೂಮಿ ಹಕ್ಕುಪತ್ರ ಕೊಡುವುದಾಗಿ ಮಾತು ಕೊಟ್ಟಾಗಿದೆ. ಆದೇಶವಾಗಿದೆ. ಇನ್ನೇಕೆ ತಡ. ಜಿಲ್ಲಾಧಿಕಾರಿ ತಾಯಿ ಇದ್ದಂತೆ ಬಡವರೆಲ್ಲಾ ಮಕ್ಕಳಿದ್ದಂತೆ ಅದರಂತೆ ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಬಡಸಾಗುವಳಿದಾರರನ್ನು ಮಕ್ಕಳಂತೆ ನೋಡಿಕೊಂಡು ಅವರಿಗೆ ಏನು ಬೇಕೋ ಅದನ್ನು ಒದಗಿಸಬೇಕು. ಅದನ್ನು ಬಿಟ್ಟು ಒಕ್ಕಲೆಬ್ಬಿಸುವ ಕೆಲಸ ಮಾಡಬಾರದು. ಹತ್ತಾರು ವರ್ಷಗಳಿಂದಲೂ ಗುಡಿಸಲು ಹಾಕಿಕೊಂಡು ವಾಸಿಸುತ್ತಿರುವವರನ್ನು ಒಕ್ಕಲೆಬ್ಬಿಸಬೇಡಿ. ಒಂದು ವೇಳೆ ತೆರವುಗೊಳಿಸಲೇಬೇಕು ಎನ್ನುವುದಾರೆ ಬೇರೆ ಕಡೆ ವಸತಿ ಕಲ್ಪಿಸಿ ತೆರವುಗೊಳಿಸಿ ಎಂದು ಸೂಚಿಸಿದರು. ನಲವತ್ತು ಐವತ್ತು ವರ್ಷಗಳಿಂದಲೂ ಭೂಮಿ ಹಕ್ಕಿಗಾಗಿ ಹೋರಾಟ ನಡೆಯುತ್ತಿದೆಯಾದರೂ ಅಧಿಕಾರಿಗಳಿಗೆ ಕಲ್ಲು ಹೃದಯವೇಕೆ. ಕರುಣೆ ಇಲ್ಲವೇ. ಅನ್ಯಾಯವಾಗಬಾರದು. ಬಡವರ ಪರ ಕೆಲಸ ಮಾಡದಿದ್ದರೆ ಕ್ರಾಂತಿ ಮಾಡಿಯಾದರೂ ಬಡವರು ಭೂಮಿ ಪಡೆಯಬೇಕು. ಜನ ರೊಚ್ಚಿಗೇಳಲು ಅವಕಾಶ ಕೊಡಬೇಡಿ. ಬಡವರ ಕೆಲಸ ನಿಲ್ಲಬಾರದು. ಗುಡಿಸಲು ಹಾಕಿಕೊಂಡು ವಾಸಿಸುವವರು ಜಾಗ ಬಿಟ್ಟು ಕದಲಬೇಡಿ. ಅಧಿಕಾರಿಗಳು ಭೂಸಾಗುವಳಿದಾರರ ಹಾಗೂ ಗುಡಿಸಲು ಹಾಕಿಕೊಂಡು ವಾಸಿಸುತ್ತಿರುವವರ ತಂಟೆಗೆ ಹೋಗಬೇಡಿ. ಬಡವನಿಗೆ ಬದುಕುವ ಹಕ್ಕಿದೆ. ಬಡವರನ್ನು ಬೀದಿಗೆ ನಿಲ್ಲಿಸುವ ಅಧಿಕಾರ ನಿಮಗೆ ಕೊಟ್ಟವರಾರು ಎಂದು ವೇದಿಕೆಯಲ್ಲಿದ್ದ ತಹಶೀಲ್ದಾರ್ ಕಾಂತರಾಜ್‍ರವರನ್ನು ಖಾರವಾಗಿ ಪ್ರಶ್ನಿಸಿದರು.

      ಯಾರ ಖಾತೆಗೂ ದುಡ್ಡು ಹಾಕಬೇಡಿ. ಪೆಪ್ಪರ್‍ಮೆಂಟ್ ಕೊಡಬೇಡಿ: ವಿದೇಶಗಳಲ್ಲಿರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬ ಬಡವರ ಬ್ಯಾಂಕ್ ಖಾತೆಗಳಿಗೆ ಹದಿನೈದು ಲಕ್ಷ ರೂ.ಗಳನ್ನು ಹಾಕುವುದಾಗಿ ಆಸೆ ಹುಟ್ಟಿಸಿ ಎರಡನೆ ಬಾರಿಗೆ ದೇಶದ ಪ್ರಧಾನಿಯಾಗಿರುವ ಮೋದಿರವರೆ ನೀವು ಯಾರ ಖಾತೆಗೂ ದುಡ್ಡು ಹಾಕಬೇಡಿ. ದೇಶದ ಪ್ರತಿಯೊಂದು ಹಳ್ಳಿಯಲ್ಲಿರುವ ಬಡವರಿಗೆ ಭೂಮಿ, ವಾಸಿಸಲು ಮನೆ ಕೊಟ್ಟು ಬದುಕುವ ದಾರಿ ತೋರಿಸಿದರೆ ಶಾಶ್ವತವಾದ ಕೀರ್ತಿ ನಿಮಗೆ ದೊರಕುತ್ತದೆ. ದೇಶದ ಬಡವರಿಗೆ ಪೆಪ್ಪರ್‍ಮೆಂಟ್ ಕೊಡುವ ಕೆಲಸ ಮಾಡಬೇಡಿ ಎಂದು ಆಗ್ರಹಿಸಿದರು.

      ಈಗಾಗಲೆ ಐದು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದ ಮೋದಿರವರೆ ಇನ್ನಾದರೂ ಬಡವರ ಮೂಗಿಗೆ ತುಪ್ಪ ಸವರುವ ಕೆಲಸ ನಿಲ್ಲಿಸಿ. ಪೆಪ್ಪರ್‍ಮೆಂಟ್ ಕೊಡಬೇಡಿ. ಕರಗುವವರೆಗೂ ಬಡವರು ಚೀಪುತ್ತಾರೆ ಮತ್ತೆ ಪೆಪ್ಪರ್‍ಮೆಂಟ್ ಕೇಳುತ್ತಾರೆ. ಇದಾಗಬಾರದು. ಪ್ರತಿಯೊಬ್ಬರಿಗೂ ಎರಡು ಎಕರೆ ಜಮೀನು ಕೊಡಿ. ಬಡವನಿಗೆ ಬದುಕು ಹಕ್ಕಿದೆ. ಬಡವರ ಸಮಸ್ಯೆಗಳಿಗೆ ಅಧಿಕಾರಿಗಳು ಮೊದಲ ಆದ್ಯತೆ ನೀಡುವಂತೆ ಕಟ್ಟಪ್ಪಣೆ ಹೊರಡಿಸಿ ಎಂದು ಕೋರಿದರು.

      ಪ್ರಜಾಶಕ್ತಿ ಬೋರಯ್ಯ, ಕುಮಾರ್ ಸಮತಳ, ಗುಡಿಮನೆ ನಾಗರಾಜ್, ರೈತ ಮುಖಂಡ ಬಸ್ತಿಹಳ್ಳಿ ಸುರೇಶ್‍ಬಾಬು, ತಹಶೀಲ್ದಾರ್ ಕಾಂತರಾಜ್, ಟಿ.ಶಫಿವುಲ್ಲಾ ವೇದಿಕೆಯಲ್ಲಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap